ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಂಗಳವಾರ ನಡೆದ ಐಪಿಎಲ್ನ ರೋಚಕ ಹಣಾಹಣಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 19 ರನ್ಗಳಿಂದ ಮಣಿಸಿತು.ಈ ಗೆಲುವಿನೊಂದಿಗೆ ಡೆಲ್ಲಿ ತಂಡವು ಲಖನೌ ತಂಡದ ಪ್ಲೇ ಆಫ್ ಕನಸಿಗೆ ತಣ್ಣೀರೆರಚಿತು. ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಮುಗ್ಗರಿಸಿದ ಕೆ.ಎಲ್. ರಾಹುಲ್ ಬಳಗಕ್ಕೆ ಒಂದು ಪಂದ್ಯ ಉಳಿದಿದ್ದರೂ ಈ ಆವೃತ್ತಿಯ ಪ್ಲೇಆಫ್ನಿಂದ ಬಹುತೇಕ ಹೊರಬಿದ್ದಿದೆ. ರನ್ರೇಟ್ ಕಡಿಮೆ ಇರುವ ಕಾರಣ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೂ
ಪ್ಲೇ ಆಫ್ ಹಾದಿ ಕಠಿಣವಾಗಿದೆ. ಮತ್ತೊಂದೆಡೆ ರಿಷಭ್ ಪಂತ್ ಬಳಗವೂ ಈ ಬಾರಿಯ ಅಭಿಯಾನ ಮುಗಿಸಿದೆ.14 ಅಂಕ ಗಳಿಸಿ 5ನೇ ಸ್ಥಾನಕ್ಕೇರಿದರೂ ಪಂತ್ ಬಳಗಕ್ಕೂ ಪ್ಲೇ ಆಫ್ ಸಾಧ್ಯತೆ ಕಷ್ಟಕರವಾಗಿದೆ. ಆರ್ಸಿಬಿ ಪ್ಲೇ ಆಫ್ ಕನಸು ಜೀವಂತವಾಗಿದೆ. ಚೆನ್ನೈ ವಿರುದ್ಧ ಉತ್ತಮ ರನ್ ರೇಟ್ನಲ್ಲಿ ಗೆದ್ದರೆ ಆರ್ಸಿಬಿ ಪ್ಲೇ ಆಫ್ಗೆ ಏರಲಿದೆ. ಚೆನ್ನೈ ಗೆದ್ದರೆ ಚೆನ್ನೈ ನಾಲ್ಕರ ಘಟ್ಟಕ್ಜೆ ಏರಲಿದೆ.
209 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಲಖನೌ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ (61; 27ಎ, 4×6, 6×4) ಕೊನೆಯ ಹಂತದಲ್ಲಿ ಅರ್ಷದ್ ಖಾನ್ (ಔಟಾಗದೇ 58, 33ಎ, 4×3, 6×5) ಹೋರಾಟ ನಡೆಸಿದರು. ಆದರೆ, ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ಸಿಗದೆ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗೆ 189 ರನ್ ಗಳಿಸಲಷ್ಟೇ ಶಕ್ತವಾಯಿತು. ಮೊದಲ ಓವರ್ನಲ್ಲೇ ನಾಯಕ ಕೆ.ಎಲ್. ರಾಹುಲ್ (5) ವಿಕೆಟ್ ಒಪ್ಪಿಸಿದರೆ, ಮೂರನೇ ಓವರ್ನಲ್ಲಿ ಕ್ವಿಂಟನ್ ಡಿ ಕಾಕ್ (12) ಔಟಾದರು. ಈ ಎರಡೂ ವಿಕೆಟ್ಗಳು ಇಶಾಂತ್ ಶರ್ಮಾ ಅವರ ಪಾಲಾದವು. ನಂತರದ ಬಂದ ಮಾರ್ಕಸ್ ಸ್ಟೊಯಿನಿಸ್ (5) ಮತ್ತು ದೀಪಕ್ ಹೂಡಾ (0) ಬೇಗನೇ ನಿರ್ಗಮಿಸಿದರು. ಹೀಗಾಗಿ, ತಂಡದ ಮೊತ್ತ 44 ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳು ಕಳೆದುಕೊಂಡಿತು.
ಆದರೆ, ಈ ಹಂತದಲ್ಲಿ ಪೂರನ್ ಮಿಂಚಿನ ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು ವಿಸ್ತರಿಸಿದರು. ಅವರು ಕೃಣಾಲ್ ಪಾಂಡ್ಯ (18) ಅವರೊಂದಿಗೆ 6ನೇ ವಿಕೆಟ್ಗೆ 30 ರನ್ ಸೇರಿಸಿದರು. ನಂತರದಲ್ಲಿ ಅರ್ಷದ್ ಅವರೊಂದಿಗೆ 33 ರನ್ಗಳ ಜೊತೆಯಾಟವಾಡಿದರು. ಪೂರನ್ ನಿರ್ಗಮಿಸಿದ ಬಳಿಕ ಪಂದ್ಯವು ಡೆಲ್ಲಿಯತ್ತ ವಾಲಿತು. ಆದರೆ, ಕೊನೆಯ ಹಂತದಲ್ಲಿ ಐದು ಭರ್ಜರಿ ಸಿಕ್ಸರ್ ಸಿಡಿದ ಅರ್ಷದ್ ಏಕಾಂಗಿ ಹೋರಾಟ ನಡೆಸಿದರೂ ಗೆಲುವು ದಕ್ಕಲಿಲ್ಲ. ಇಶಾಂತ್ ಶರ್ಮಾ ಮೂರು ವಿಕೆಟ್ ಪಡೆದು ಮಿಂಚಿದರು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪರ ಅಭಿಷೇಕ್ ಪೊರೆಲ್ (58, 33ಎ) ಹಾಗೂ ಶಾಯ್ ಹೋಪ್ (38 ರನ್) ಎರಡನೇ ವಿಕೆಟ್ ಜೊತೆಯಾಟದಲ್ಲಿ 92 (49 ಎಸೆತ) ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಂತರ ನಾಯಕ ರಿಷಭ್ ಪಂತ್ (33 ರನ್) ಕೂಡ ಉಪಯುಕ್ತ ಕಾಣಿಕೆ ನೀಡಿದರು.ಅಭಿಷೇಕ್ ಅವರು ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಹೊಡೆದರು.
ಕೊನೆಯಲ್ಲಿ ಟ್ರಸ್ಟನ್ ಸ್ಟಬ್ಸ್ (ಅಜೇಯ 57 ; 25ಎಸೆತ) ಅವರು ಅಬ್ಬರಿಸಿದರು. 228ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಟ್ರಿಸ್ಟನ್ ನಾಲ್ಕು ಸಿಕ್ಸರ್ ಸಿಡಿಸಿದರು. ಕೇವಲ 21 ಎಸೆತಗಳಲ್ಲಿ 50 ರನ್ ಹೊಡೆದರು.ಅವರ ಬೀಸಾಟದಿಂದ ಕೊನೆಯ ಐದು ಓವರ್ಗಳಲ್ಲಿ 72 ರನ್ ಹರಿದುಬಂದವು. ಸ್ಟಬ್ಸ್ ಮತ್ತು ಅಕ್ಷರ್ ಪಟೇಲ್ (14 ರನ್) ಜೊತೆಯಾಟದಲ್ಲಿ 50 ರನ್ಗಳು ಸೇರಿದವು. ಹೀಗಾಗಿ, ಡೆಲ್ಲಿ ಕ್ಯಾಪಿಟಲ್ಸ್ ಓವರ್ಗಳಲ್ಲಿ 4 ವಿಕೆಟ್ಗಳಿಗೆ 208 ರನ್ ಗಳಿಸಿತು.