ಚೆನ್ನೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ಟಿ20 ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ ಪ್ಲೇ ಆಫ್ ಪ್ರವೇಶದ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಂಡಿತು.ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ಸ್ ನೀಡಿದ 142 ರನ್ಗಳ ಗುರಿ ಬೆನ್ನತ್ತಿದ
ಚೆನ್ನೈ, 18.2 ಓವರ್ಗಳಲ್ಲಿ 145 ರನ್ ಗಳಿಸಿತು. ನಾಯಕ ಋತುರಾಜ್ ಗಾಯಕವಾಡ್ (42) ಗೆಲುವಿನ ದಡ ಸೇರಿಸಿದರು.ರಾಯಲ್ಸ್ ಪರ ಆರ್.ಅಶ್ವಿನ್ 2 ವಿಕೆಟ್ ಪಡೆದರೆ, ನಂದ್ರೆ ಬರ್ಜರ್ ಮತ್ತು ಯುಜುವೇಂದ್ರ ಚಾಹಲ್ ತಲಾ ಒಂದೊಂದು ವಿಕೆಟ್ ಕಿತ್ತರು.ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ಬಳಗ, ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆತಿಥೇಯ ಬೌಲರ್ಗಳು ಶಿಸ್ತಿನ ಬೌಲಿಂಗ್ ಸಂಘಟಿಸುವ ಮೂಲಕ, ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕಿದರು.ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ (24) ಮತ್ತು ಜೋಸ್ ಬಟ್ಲರ್ (21) ಜೋಡಿ, ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 43 ರನ್ ಗಳಿಸಿದರೂ, ವೇಗವಾಗಿ ರನ್ ಗಳಿಸಲಿಲ್ಲ. ಇದರಿಂದಾಗಿ ಆರಂಭದಲ್ಲೇ ಹಿನ್ನಡೆಯಾಯಿತು. ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್ (15 ರನ್) ಸಹ ಹೆಚ್ಚು ರನ್ ಗಳಿಸದೆ ಪೆವಿಲಿಯನ್ ಸೇರಿಕೊಂಡರು.ಕೊನೆಯಲ್ಲಿ ರಿಯಾನ್ ಪರಾಗ್ (ಅಜೇಯ 47 ರನ್) ಮತ್ತು ಧ್ರುವ್ ಜುರೇಲ್ (28 ರನ್) ಬಿರುಸಿನ ಬ್ಯಾಟಿಂಗ್ ನಡೆಸಿದರೂ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ 14 ಪಾಯಿಂಟ್ ಕಲೆಹಾಕಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.
ಆರ್ಸಿಬಿ ಮುಂದಿನ ಹಂತ ಪ್ರವೇಶಿಸ ಬೇಕಾದರೆ, ಮುಂದಿನ ಎರಡೂ ಪಂದ್ಯಗಳಲ್ಲಿ ಭಾರಿ ಅಂತರದ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.