*ಅನಿಲ್ ಎಚ್.ಟಿ.
ಮತ್ತೆ ಟಿವಿ ಪರದೆಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಎಂಬ ರಿಯಾಲಿಟಿ ಶೋ ಪ್ರಸಾರವಾಗಲಿದೆ ಎಂದು ಗೊತ್ತಾದ ಕ್ಷಣ ಅನೇಕರ ಮನಸ್ಸು ಕುಶಿಯಿಂದ ಅರಳಿರುತ್ತದೆ. ಮತ್ತೊಮ್ಮೆ ಪ್ರಶ್ನೆಗಳನ್ನು ಎದುರಿಸಿ ಉತ್ತರ ಕಂಡುಕೊಳ್ಳಲು ಮನ ತವಕಿಸಿರುತ್ತದೆ. ದೇಶದ ವಿಭಿನ್ನ ಭಾಗಗಳಿಂದ ಬರುವ ವಿಭಿನ್ನ ಮನಸ್ಥಿತಿಯ ಜನರ ನೋವು ನಲಿವುಗಳ ದಶ೯ನಕ್ಕೆ ನೋಡುಗರು ಸಜ್ಜಾಗುತ್ತಾರೆ. ಒಂದು ರೀತಿಯ ಶಿಸ್ತಿನಿಂದಲೇ ಟಿವಿ ವೀಕ್ಷಕರು ಈ ರಿಯಾಲಿಟಿ ಶೋ ನೋಡಲು ಕಾತರಿಸುತ್ತಾ ಕುಳಿತಿರುತ್ತಾರೆ. ಯಾಕಂದರೆ ಇದು ಸಿಲ್ಲಿಸಿಲ್ಲಿಯಾದ ಶೋ ಅಲ್ಲ. ಇದು
ಹಾಸ್ಯ, ವ್ಯಂಗ್ಯದ ಶೋ ಅಲ್ಲವೇ ಅಲ್ಲ. ಹಾಸ್ಯದ ಹೆಸರಿನಲ್ಲಿ ದ್ವಂದ್ವಾಥ೯, ಚೆಲ್ಲುಚೆಲ್ಲುಗಳ ಪ್ರದರ್ಶನ ಇಲ್ಲಿಲ್ಲ.. ಇದು ಗಂಭೀರವಾದ ರಿಯಾಲಿಟಿ ಶೋ.. ಬದಲಾದ.. ಭಾರತದ ಜನತೆಯ ಶೋ..ಇದುವೇ ಕೌನ್ ಬನೇಗಾ ಕರೋಡ್ ಪತಿ…
ಈ ಕಾರ್ಯಕ್ರಮದ ಮೋಡಿಯೇ ಅಂಥಹದ್ದು. ಯಾಕೆಂದರೆ ಇದು ಭಾರತದ ಟಿವಿಗಳಲ್ಲಿ ಅತ್ಯಂತ ಜನಪ್ರಿಯವಾದ ಮತ್ತು ಬರೋಬ್ಬರಿ 20 ವಷ೯ಗಳಿಂದಲೂ ತನ್ನ ಪ್ರಖ್ಯಾತಿಯನ್ನು ಹಾಗೇ ಉಳಿಸಿಕೊಂಡಿರುವ ಅದ್ಬುತ ಕಾಯ೯ಕ್ರಮ..
ಮತ್ತು.. ಇದನ್ನು ನಿವ೯ಹಿಸುತ್ತಿರುವವರು ಭಾರತೀಯ ಸಿನಿಮಾ ರಂಗದ ದಿಗ್ಗಜ, ಬಿಗ್ ಬಿ ಖ್ಯಾತಿಯ ಒನ್ ಅಂಡ್ ಒನ್ಲೀ
ಅಮಿತಾಬ್ ಬಚ್ಚನ್.!!
ಸೋನಿ ಟಿವಿಯಲ್ಲಿ ಆಗಸ್ಟ್ 14 ರಿಂದ ರಾತ್ರಿ 9 ಗಂಟೆಯಿಂದ ಸೋಮವಾರದಿಂದ ಶುಕ್ರವಾರದವರೆಗೆ ಕೌನ್ ಬನೇಗಾದ ಹವಾ ಕಂಡುಬರಲಿದೆ. ಕೌನ್ ಬನೇಗಾ ಕರೋಡ್ ಪತಿಯ 15 ನೇ ಸೀಸನ್ ಈ ಬಾರಿ ಮತ್ತಷ್ಟು ಭಜ೯ರಿಯಾಗಿ ಮೂಡಿಬರಲಿದೆ.
ಹೊಸ ಭಾರತ.. ಹೊಸ ಯುಗ ಎಂಬ ಕಂಚಿನ ಕಂಠದೊಂದಿಗೆ ಬಿಗ್ ಬಿ ಕಂಗೊಳಿಸಲಿದ್ದಾರೆ. ತರೇವಾರಿ ಪ್ರಶ್ನೆಗಳ ಮೂಲಕ ವೀಕ್ಷಕರ ಮನಸ್ಸಿನಾಳಕ್ಕೆ ಕಾಯ೯ಕ್ರಮವನ್ನು ಕೊಂಡೊಯ್ಯಲಿದ್ದಾರೆ.
ಹಾಗೇ ನೋಡಿದರೆ ಕೌನ್ ಬನೇಗಾ ಎಂಬುದು ಒಂದು ರಸಪ್ರಶ್ನೆ ಅಥವಾ ಕ್ವಿಜ್ ಕಾಯ೯ಕ್ರಮವಷ್ಟೇ. ಆದರೆ ಬಹಳಷ್ಟು ಗ್ಲಾಮರ್ ಮತ್ತು ರೋಮಾಂಚಕತೆ, ಭಾವನಾತ್ಮಕತೆಯೊಂದಿಗೆ ಈ ಶೋವನ್ನು ಭಾರತೀಯರ ಮನೆಮನೆಗೆ ಜತೆಗೆ ಮನಮನಕ್ಕೆ ತಲುಪುವಂತೆ ಮಾಡಿದ ಕೀತಿ೯ ಅಮಿತಾಬ್ ಬಚ್ಚನ್ ಅವರದ್ದು. ಹೀಗಾಗಿಯೇ 15 ವಷ೯ಗಳಿಂದ ಕೌನ್ ಬನೇಗಾದ ಅ್ಯಂಕರ್ ಆಗಿ ಅಮಿತಾಬ್ ಕಾಣಿಸಿಕೊಳ್ಳುತ್ತಿದ್ದರೂ ಎಲ್ಲಿಯೂ ಬೋರ್ ಆಗಿಲ್ಲ.
ಕೌನ್ ಬನೇಗಾದ ಸೀಸನ್ 3 ರಲ್ಲಿ ಶಾರೂಖ್ ಖಾನ್ ಹೋಸ್ಟ್ ಆಗಿದ್ದರೂ ಅಮಿತಾಬ್ ಅವರಿಗಿದ್ದ ಛರಿಷ್ಮಾ ವಕ್೯ಔಟ್ ಆಗದೇ ಬಹಳ ಬೇಗನೆ ಆ ಸರಣಿ ಮುಕ್ತಾಯಗೊಳಿಸಲಾಗಿತ್ತು. ಮತ್ತೆ 4 ನೇ ಸೀಸನ್ ನಿಂದ ಮರಳಿಬಂದ ಅಮಿತಾಬ್ ನಂತರ ಶೋನಿಂದ ಹಿಂದಿರುಗಲೇ ಇಲ್ಲ.
ಅಮಿತಾಬ್ ಇಲ್ಲದ ಕೌನ್ ಬನೇಗಾ ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ತರಗತಿಗಳಲ್ಲಿ ಶಿಕ್ಷಕರು ಶಿಸ್ತಿನಿಂದ ಪ್ರಶ್ನೆ ಕೇಳಿದಂತೆ, ಮನೆಯಲ್ಲಿ ಅಮ್ಮ ಮಮತೆಯಿಂದ ಕೇಳುವ ಪ್ರಶ್ನೆಗಳಂತೆ..ಗೆಳೆಯರ ನಡುವಿನ ಸವಾಲುಗಳ ಪ್ರಶ್ನೆಯಂತೆ.. ಮಡದಿ ಕೇಳುವ ಸಂಶಯ ಭರಿತ ಪ್ರಶ್ನೆಗಳಂತೆ.. ಮಕ್ಕಳಿಂದ ಬರುವ ಕುತೂಹಲಕಾರಿ ಪ್ರಶ್ನೆಗಳಂತೆ..
ಕೌನ್ ಬನೇಗಾದ ಹಾಟ್ ಸೀಟ್ ನಲ್ಲಿ ಅಮಿತಾಬ್ ಬಚ್ಚನ್ ಎಂಬ ಮಾಂತ್ರಿಕ ಮನೆಯ ಯಜಮಾನನಂತೆ ಕೇಳುವ ಪ್ರಶ್ನೆಗಳು ಸ್ಪಧಿ೯ಗಷ್ಟೇ ಅಲ್ಲ ನಮ್ಮನ್ನೂ ಕೇಳುತ್ತಿದ್ದಾರೆ ಎಂಬಷ್ಟು ಆಪ್ತವಾಗಿರುತ್ತದೆ. ಆತ್ಮೀಯತೆಯ ಕ್ಷಣಗಳು ಎನಿಸಿಕೊಂಡು ಬಿಡುತ್ತದೆ.
ಗ್ರೇಟ್ ಶೋ ಮತ್ತು ಗ್ರೇಟ್ ಅ್ಯಕ್ಟರ್ ಸಂಗಮವಾದರೆ ಎಂಥ ಅದ್ಬುತವಾಗುತ್ತದೆ ಎಂಬುದನ್ನೇ ಕೌನ್ ಬನೇಗಾ 14 ವಷ೯ಗಳಿಂದ ನಿರೂಪಿಸಿದೆ.
ತನ್ನ 81 ನೇ ವಯಸ್ಸಿನಲ್ಲಿಯೂ ಅಮಿತಾಬ್ ಬಚ್ಚನ್ ಯುವಕನಂತೆ ಸಂಭ್ರಮಿಸುತ್ತಾ ಕೌನ್ ಬನೇಗಾ ಶೋಗೆ ಎಂಟ್ರಿ ಕೊಡುವುದನ್ನು ನೋಡುವುದೇ ಚಂದ.
ಜೀವನೋತ್ಸಾಹ ಅಂದ್ರೆ ಇದಪ್ಪ ಎಂದು ಹೆಮ್ಮೆ ಮೂಡುವಂತೆ ಲವ್ ಲವಿಕೆಯಿಂದ ಕಾಯ೯ಕ್ರಮದುದ್ದಕ್ಕೂ ಬಚ್ಚನ್ ಕಾಣಿಸಿಕೊಳ್ಳುವುದನ್ನು ಕಣ್ತುಂಬಿಸಿಕೊಳ್ಳುವುದೇ ಮಧುರ ಅನುಭವ.
ಕೌನ್ ಬನೇಗಾ ಕಾಯ೯ಕ್ರಮದ ಶೂಟಿಂಗ್ ಟೈಂಗಿಂತ ಮೂರು ಗಂಟೆ ಮೊದಲೇ ಅಮಿತಾಬ್ ಶೂಟಿಂಗ್ ಸೆಟ್ನಲ್ಲಿ ಹಾಜರಿರುತ್ತಾರಂತೆ. ಕಾಯ೯ಕ್ರಮದ ತಯಾರಿಗಳನ್ನು ಗಮನಿಸುತ್ತಾ, ತಾನು ಹೇಳಬೇಕಾದ ಡೈಲಾಗ್ ಗಳನ್ನು ಮತ್ತೆ ಮತ್ತೆ ಓದಿಕೊಂಡು ಒಂದಷ್ಟು ಗಾಭರಿಯಿಂದ ಕುಳಿತಿರುತ್ತಾರಂತೆ.
ಮನೆಯಿಂದ ಕಾಯ೯ಕ್ರಮಕ್ಕೆ ಹೊರಡುವ ಮುನ್ನ ಅಮಿತಾಬ್ ಬಚ್ಚನ್ ಸಾಕಷ್ಟು ಗಾಭರಿಯಾಗುವುದನ್ನು ಕಂಡು ಅವರ ಮಗ ಅಭಿಷೇಕ್ ಬಚ್ಚನ್ ಕೇಳುತ್ತಾರೆ. ಅಲ್ಲ ಅಪ್ಪಾ. 15 ವಷ೯ಗಳಿಂದ ಈ ಕಾಯ೯ಕ್ರಮ ನಡೆಸುತ್ತಾ ಬಂದಿದ್ದೀಯ.. ನೂರಾರು ಸಿನಿಮಾ, ಜಾಹೀರಾತಿನಲ್ಲಿ ನಟಿಸಿದ್ದೀಯಾ.. ಇಷ್ಟಾದರೂ ಯಾಕೆ ಈ ಗಾಭರಿ, ಯಾಕೆ ಚಡಪಡಿಕೆ..
ಮಗನ ಪ್ರಶ್ನೆಗೆ ಅಪ್ಪ ಖಡಕ್ ಆಗಿ ಉತ್ತರಿಸುತ್ತಾರಂತೆ.. ಇದೇ ನೋಡು ಸಮಸ್ಯೆ.. 15 ವಷ೯ಗಳಿಂದ ಶೋ ನಡೆಸುತ್ತಾ ಬಂದವನು ನಾನು ಹೀಗಾದಾಗ ಎಲ್ಲಿಯಾದರೂ ಈ ಬಾರಿ ಕೊಂಚ ತಪ್ಪು, ಗೊಂದಲಗಳು ನನ್ನಿಂದಾದರೆ ವೀಕ್ಷಕರು ಏನು ಯೋಚಿಸಬಹುದು ಹೇಳು. ಇಷ್ಟು ವಷ೯ ಶೋ ನಡೆಸಿದವನು ಇವನೇನಾ.. ಇವನಿಂದ ಇಂಥ ತಪ್ಪೇ ಎಂದು ಪ್ರಶ್ನಿಸುವುದಿಲ್ಲವೇ. ಯಾವಾಗಲೂ ಸರಿಯಾದ ತಯಾರಿಗಳಿದ್ದಾಗ ತಪ್ಪುಗಳು ಸಂಭವಿಸದು. ಅಂಥ ತಯಾರಿಯೊಂದಿಗೇ ನಾನು ಜನರ ಮೆಚ್ಚುಗೆಯ ಕಾಯ೯ಕ್ರಮ ನಿವ೯ಹಿಸಲು ತೆರಳುತ್ತೇನೆ. ತಪ್ಪಾಗದಂತೆ ನೋಡಿಕೊಳ್ಳುವುದು ನಿರೂಪಕನಾಗಿ ನನ್ನ ಕತ೯ವ್ಯ ಕೂಡ ಹೌದು..
ಎಂಥ ಅದ್ಬುತ ಉತ್ತರ.. ಅಮಿತಾಬ್ ಗೆ ಅಮಿತಾಬ್ ಸಾಟಿ ಎಂಬುದಕ್ಕೆ ಈ ಮಾತೇ ಸಾಕ್ಷಿ.
ಕೌನ್ ಬನೇಗಾ ಕರೋಡ್ ಪತಿ ಕಾಯ೯ಕ್ರಮದಲ್ಲಿ ಕೇಳಲಾಗುವ ಪ್ರಶ್ನೆಗಳು ಅಮಿತಾಬ್ ಗೆ ಮುಂಚಿತವಾಗಿ ಗೊತ್ತಿರುವುದಿಲ್ಲ. ಕಂಪ್ಯೂಟರ್ ಪರದೆಯಲ್ಲಿ ನೋಡಿದ ಮೇಲೆ ಅಮಿತಾಬ್ ಎದುರಿಗೆ ಕಂಡಂದ್ದನ್ನು ಓದುವುದರಿಂದಲೇ ಕಾಯ೯ಕ್ರಮ ಸಹಜವಾಗಿ ಮೂಡಿಬರುತ್ತಿದೆ. ಆದರೆ ಸ್ಪಧಿ೯ಗಳ ಹಿನ್ನಲೆಯನ್ನು ಮಾತ್ರ ಪ್ರತೀ ಬಾರಿಯೂ ಅಮಿತಾಬ್ ಕಾಯ೯ಕ್ರಮದ ಬ್ರೇಕ್ ಸಂದಭ೯ ಕೇಳಿತಿಳಿದುಕೊಂಡು ತಮ್ಮದೇ ಆದ ಪಂಚಿಂಗ್ ಡೈಲಾಗ್ ಹೇಳುತ್ತಾರೆ.
ಅಂದ ಹಾಗೇ ಕೌನ್ ಬನೇಗಾದಲ್ಲಿ ವಿಜೇತರಿಗೆ 1 ಕೋಟಿ ರು. ಬಹುಮಾನ ಸಿಕ್ಕಿದರೆ ಕೊನೆಗೇ 30 ಲಕ್ಷ ರು. ತೆರಿಗೆ ಕಟ್ ಆಗಿ 70 ಲಕ್ಷ ಮಾತ್ರ ಸಿಕ್ಕುತ್ತದೆ. 2002 ರಿಂದ 2004 ಮತ್ತು 2008,2009 ರಲ್ಲಿ ಈ ರಿಯಾಲಿಟಿ ಶೋ ಪ್ರಸಾರವಾಗಲಿಲ್ಲ. ಉಳಿದಂತೆ 2000 ದಿಂದ 2023 ರವರೆಗೂ ಕೌನ್ ಬನೇಗಾ ಭಾರತೀಯರ ಮನಗೆದ್ದ ರಿಯಾಲಿಟಿ ಶೋ ಆಗಿ ಮನೆಮಾತಾಗಿದೆ.
ಈ ಬಾರಿ ಕೌನ್ ಬನೇಗಾದಲ್ಲಿ ಒಂದಿಷ್ಟು ಬದಲಾವಣೆಯಾಗಿದೆ, ಸೆಟ್ ಮತ್ತಷ್ಟು ಸುಂದರವಾಗಿದೆ. ಅಮಿತಾಬ್ ಬಚ್ಚನ್ ಪ್ರಾರಂಭಿಕ ಡೈಲಾಗ್ ಕೂಡ ಬದಲಾಗಿದೆ. ಕೌನ್ ಬನೇಗಾದ ಅತ್ಯಂತ ಪ್ರಸಿದ್ದ ಹಿನ್ನಲೆ ಸಂಗೀತಕ್ಕೆ ಕೊಳಲು ವಾದನದ ನಿನಾದ ಸೇಪ೯ಡೆಯಾಗಿ ಮತ್ತಷ್ಟು ಇಂಪಾಗಿದೆ. ಅಮಿತಾಬ್ ಡ್ರೆಸ್ ನಲ್ಲಿ ಮತ್ತಷ್ಟು ರಂಗು ತುಂಬಿದೆ. ಬಿಗ್ ಬಿಗೆ 40 ವಷ೯ಗಳಿಂದ ಮೇಕಪ್ ಮಾಡುತ್ತಿರುವ ದೀಪಕ್ ಸಾವಂತ್ ಕೌನ್ ಬನೇಗಾದಲ್ಲಿ ಅಮಿತಾಬ್ ಮುಖಕಾಂತಿ ವೖದ್ದಿಸಲು ಕಾರಣರಾಗಿದ್ದಾರೆ. ಹೀಗಾಗಿ ಅಮಿತಾಬ್ ಮತ್ತಷ್ಟು ಯಂಗ್ ಆಗಿ ಕಾಣಿಸುತ್ತಿದ್ದಾರೆ.
ವಷ೯ 81 ಆಗಿದ್ದರೂ ಕೌನ್ ಬನೇಗಾದಲ್ಲಿ 18 ರ ಯುವಕನಂತೆ ಲವ್ ಲವಿಕೆಯಿಂದ ಕಾಣಿಸಿಕೊಳ್ಳುವ ಅಮಿತಾಬ್ ಜನತೆಗೆ ಸ್ಪಷ್ಟ ಸಂದೇಶ ನೀಡುತ್ತಾರೆ. ಮನಸ್ಸಿಗೆ ಸಂತೋಷ ಅನ್ನಿಸುವುದನ್ನು ಮಾಡಬೇಕೆಂದಾಗ ವಯಸ್ಸು ಲೆಕ್ಕಕ್ಕಿಲ್ಲ.
ಇತ್ತೀಚಿಗೆ ಜೈಲರ್ ಚಿತ್ರದಲ್ಲಿಯೂ ರಜನೀಕಾಂತ್ ಎಂಬ ಸೂಪರ್ ಸ್ಟಾರ್ ವಯಸ್ಸನ್ನೂ ಮೀರಿದ ಪಾತ್ರದಲ್ಲಿ ಮಿಂಚಿ ತಾನು ಎಂದೆಂದಿಗೂ ಸೂಪರ್ ಸ್ಟಾರ್ ಎಂಬುದನ್ನು ಸಾಬೀತು ಪಡಿಸಿದ್ದು ನೋಡಿದಾಗ ಅಮಿತಾಬ್ ಕೂಡ ಕೌನ್ ಬನೇಗಾದ ಮೂಲಕ ತನ್ನ ಸೂಪರ್ ಸ್ಟಾರ್ ಗಿರಿಯನ್ನು ಉಳಿಸಿಕೊಂಡಿದ್ದಾರೆ ಎಂದು ನಿಚ್ಚಳವಾಗಿ ಹೇಳಬಹುದು.
ಮೊಬೈಲ್ ಪರದೆಯಲ್ಲಿ ಕಣ್ಮರೆಯಾಗಿರುವ ಯುವಪೀಳಿಗೆ.. ಹೋಂವಕ್೯ಗಳೇ ಜ್ಞಾನ ಎಂದು ತಿಳಿದಿರುವ ಮಕ್ಕಳು.. ಒತ್ತಡವೇ ಜೀವನ ಶೈಲಿ ಎಂಬ ಭ್ರಮೆಯಲ್ಲಿರುವ ಜನ..
ಒಂದಷ್ಟು ರಿಲ್ಯಾಕ್ಸ್ ಆಗಿ, ಸಾಮಾನ್ಯ ಜ್ಞಾನದೊಂದಿಗೆ, ಅಸಾಮಾನ್ಯ ವಿಚಾರಗಳನ್ನು ತಿಳಿದುಕೊಳ್ಳಲು ನೋಡಲೇಬೇಕಾದ ಕಾಯ೯ಕ್ರಮ ಕೌನ್ ಬನೇಗಾ ಕರೋಡ್ ಪತಿ..
ಇದೇ 14 ರಿಂದ ರಾತ್ರಿ 9 ಗಂಟೆಗೆ . ಮಿಸ್ ಮಾಡದೇ ನೋಡಿ ಕೌನ್ ಬನೇಗಾ…
ಕೌನ್ ಬನೇಗಾ… ಎಂಬ ಜ್ಞಾನದ ಬುತ್ತಿಯೊಂದಿಗೆ..
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ…
ಶುಭಾಷಯಗಳು…
ಅನಿಲ್ ಎಚ್.ಟಿ.
(ಅನಿಲ್ ಎಚ್.ಟಿ.ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು. ಕಲೆ, ಸಾಂಸ್ಕೃತಿಕ, ಚಲನಚಿತ್ರ ವಿಶ್ಲೇಷಕರು)