ಮಡಿಕೇರಿ: ಉತ್ತಮ ಮಾಧ್ಯಮಗಳಿಂದ ಮತ್ತು ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಹೇಳಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ
ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಮಾಧ್ಯಮದ ಪ್ರಭಾವ ಸಮಾಜದ ಮೇಲೆ ಇಲ್ಲದಿದ್ದರೆ ವ್ಯವಸ್ಥೆ ಹಳ್ಳ ಹಿಡಿಯುತಿತ್ತು ಎಂದು ವ್ಯಾಖ್ಯಾನಿಸಿದ ಅವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಡೆಸಿದ ಗ್ರಾಮ ವಾಸ್ತವ್ಯ, ಬ್ರಾಂಡ್ ಮಂಗಳೂರು ಕಾರ್ಯಕ್ರಮದಂತಹಾ ಸಮಾಜಮುಖಿ ಕಾರ್ಯಕ್ರಮಗಳು ಜನ ಮನ್ನಣೆ ಗಳಿಸಿದೆ ಎಂದರು.ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ದೊಡ್ಡದಿದೆ. ಮಕ್ಕಳನ್ನು ಮೊಬೈಲ್ನಿಂದ ದೂರವಿಡಬೇಕು. ಪಠ್ಯೇತರ ಚಟುವಟಿಕೆ ಬಗ್ಗೆ ಆಸಕ್ತಿ ಬೆಳಸಿ ಸಂಸ್ಕೃತಿ, ಕಲೆ ಅಭಿರುಚಿಯನ್ನು ಪ್ರೇರಪಿಸಬೇಕು. ಪುಸ್ತಕ, ಪತ್ರಿಕೆ ಓದುವ ಅಭ್ಯಾಸದೆಡೆಗೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿವಿನಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಮಹತ್ತರ ಎಂದು ಹೇಳಿದರು.ಪತ್ರಿಕಾರಂಗ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದೆ. ಪತ್ರಿಕಾ ರಂಗ ಉಳಿದರೆ ಪ್ರಜಾಪ್ರಭುತ್ವ ಸದೃಢವಾಗಿರುತ್ತದೆ.ಕರ್ತವ್ಯ ನಿಷ್ಠರಾಗಿ, ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರತ್ರಕರ್ತರು ಸಮಾಜದ ಪ್ರತಿಬಿಂಬ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಯಾಗಿದ್ದ ಲಿಟಲ್ ಸ್ಕಾಲರ್ ಅಕಾಡೆಮಿ ಅಧ್ಯಕ್ಷೆ ಪೂಜಾ ರವೀಂದ್ರ ಮಾತನಾಡಿ ಇಂದು ನಾನಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಲು ವಿಪುಲ ಅವಕಾಶಗಳು ಸೃಷ್ಟಿಯಾಗಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸನ್ಮಾನ ಸ್ವೀಕರಿಸಿದ ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿದರು.
ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿದರು.
ಕಾರ್ಯಕ್ರಮ ಸಂಚಾಲಕ ಟಿ.ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಕಳೆದ 50 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿರುವ ಸುಂಟಿಕೊಪ್ಪದ ಮುಕ್ಕಾಟೀರ ಎ ವಸಂತ್, 30 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ ವೀರಾಜಪೇಟೆಯ ದೀಪಕ್ ದಾಸ್, 15 ವರ್ಷಗಳಿಂದ ಪತ್ರಿಕಾ ವಿತರಕರಾಗಿರುವ ಚೆಟ್ಟಳ್ಳಿಯ ಟಿ.ಎನ್. ಧನಲಕ್ಷ್ಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮೃದ್ಧಿ ವಾಸು ಪ್ರಾರ್ಥಿಸಿ, ಹೆಚ್.ಜೆ. ರಾಕೇಶ್ ಸ್ವಾಗತಿಸಿ, ಚನ್ನನಾಯಕ ನಿರೂಪಿಸಿ, ಶಿವರಾಜು ವಂದಿಸಿದರು.