ದಂಬುಲಾ: ಅಟ್ಟಪಟ್ಟು ಮತ್ತು ಹರ್ಷಿತಾ ಸಮರವಿಕ್ರಮ ಅವರ ಅರ್ಧ ಶತಕಗಳ ನೆರವಿನಿಂದ ಶ್ರೀಲಂಕಾ ತಂಡ ನಡೆದ ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರಬಲ ಭಾರತ ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.ಭಾರತ ಮಹಿಳೆಯರಿಗೆ 9 ಆವೃತ್ತಿಗಳಲ್ಲಿ ಇದು ಫೈನಲ್ನಲ್ಲಿ ಎದುರಾದ ಎರಡನೇ ಸೋಲು. ಕ್ವಾಲಾಲಂಪುರದಲ್ಲಿ ನಡೆದ
2018ರ ಆವೃತ್ತಿಯಲ್ಲಿ ಮೊದಲ ಸಲ ಬಾಂಗ್ಲಾದೇಶ ಎದುರು ಫೈನಲ್ನಲ್ಲಿ ಸೋತಿತ್ತು. ಭಾರತ ಈ ಟೂರ್ನಿಯಲ್ಲಿ ಏಳು ಬಾರಿ ಚಾಂಪಿಯನ್ ಆಗಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅವರ ಅರ್ಧ ಶತಕದ ನೆರವಿನಿಂದ 6 ವಿಕೆಟ್ಗೆ 165 ರನ್ ಗಳಿಸಿತು. ಶ್ರೀಲಂಕಾ ಎಂಟು ಎಸೆತಗಳು ಬಾಕಿಯಿರುವಂತೆ 2 ವಿಕೆಟ್ಗೆ 167 ರನ್ ಬಾರಿಸಿತು.
ಈ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿರುವ ಆರಂಭ ಆಟಗಾರ್ತಿ ಚಮರಿ (61, 43ಎಸೆತ, 4×9, 6×2) ಮತ್ತು ಹರ್ಷಿತಾ ಆವರು ಎರಡನೇ ವಿಕೆಟ್ಗೆ 87 ರನ್ ಜೊತೆಯಾಟದಲ್ಲಿ ಭಾಗಿಯಾದರು. ವಿಶ್ಮಿ ಗುಣರತ್ನೆ (1) ಮತ್ತೊಮ್ಮೆ ಬೇಗ ನಿರ್ಗಮಿಸಿದರು. ಚಮರಿ ನಿರ್ಗಮನದ ನಂತರ ಹರ್ಷಿತಾ ಮುರಿಯದ ಮೂರನೇ ವಿಕೆಟ್ಗೆ ಕವಿಶಾ ದಿಲ್ಹಾರಿ (30, 16ಎ, 4×1, 6×2) ಜೊತೆ 40 ಎಸೆತಗಳಲ್ಲಿ 73 ರನ್ ಸೇರಿಸಿ ತಂಡ ಸುರಕ್ಷಿತವಾಗಿ ಗುರಿತಲುಪುವಂತೆ ನೋಡಿಕೊಂಡರು.ಇದಕ್ಕೆ ಮೊದಲು, ಉಪನಾಯಕಿ ಸ್ಮೃತಿ ಮಂದಾನ (60, 47ಎಸೆತ) ಮತ್ತೊಂದು ಅರ್ಧ ಶತಕ ಗಳಿಸಿ ಹೋರಾಟ ತೋರಿದ್ದರು. ಶಫಾಲಿ ವರ್ಮಾ (16), ಉಮಾ ಚೆಟ್ರಿ (9) ಮತ್ತು ಹರ್ಮನ್ಪ್ರೀತ್ ಕೌರ್ (11) ಹೆಚ್ಚಿನ ಕೊಡುಗೆ ನೀಡಲಿಲ್ಲ. ಕೆಳ ಕ್ರಮಾಂಕದಲ್ಲಿ ಜೆಮಿಮಾ ರಾಡ್ರಿಗಸ್ (29, 16ಎ) ಮತ್ತು ರಿಚಾ ಘೋಷ್ (30, 14ಎ, 4×4, 6×1) ಅವರು ಉಪಯುಕ್ತ ಕೊಡುಗೆ ನೀಡಿದ ಕಾರಣ ಭಾರತ ತಂಡ ಗೌರವದ ಮೊತ್ತ ಗಳಿಸಿತು.