ಸುಳ್ಯ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಜನಪರ ಹಾಗು ಅಭಿವೃದ್ಧಿ ಪರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸುಳ್ಯಕ್ಕೂ ಹಲವು ಕೊಡುಗೆಗಳನ್ನು ಘೋಷಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದನ್ನು ಅನುಷ್ಠಾನಗೊಳ್ಳಲಿದೆ ಎಂದು ಕಾಂಯ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಗಳನ್ನು ಜನರ ಮುಂದೆ ಈಗಾಗಲೇ ಇರಿಸಿದ್ದು ಅದನ್ನು ಜನರು
ಒಪ್ಪಿಕೊಂಡಿದ್ದಾರೆ. ಇದೀಗ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು ಅದು ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮವನ್ನು ಸುಳ್ಯದಿಂದ ಆರಂಭಿಸಿದ ಕೆದಂಬಾಡಿ ರಾಮಯ್ಯ ಗೌಡರ ನೆನಪು ಹಾಗೂ ಸುಳ್ಯ ರೈತ ಸ್ವಾತಂತ್ರ್ಯ ಹೋರಾಟದ ಸ್ಮಾರಕವಾಗಿ ಸುಳ್ಯದಲ್ಲಿ ಭವನ ನಿರ್ಮಾಣಕ್ಕೆ ಮತ್ತು ಸ್ಥಳ ಗುರುತಿಸುವಿಕೆಗೆ 1 ಕೋಟಿ ರೂ ಮೀಸಲಿಡಲಾಗಿದೆ. ಈ ಭಾಗದಲ್ಲಿರುವ ಅಡಿಕೆ ಎಲೆ ಹಳದಿ ರೋಗದ ಪರಿಹಾರಕ್ಕೆ ಶಾಶ್ವತ ಕ್ರಮ ಕೈಗೊಳ್ಳಲಾಗುತ್ತದೆ.ಬಡ್ಡಿ ರಹಿತ ಸಾಲ 3 ಲಕ್ಷದಿಂದ 10 ಲಕ್ಷಕ್ಕೆ ಏರಿಸಿದ್ದಲ್ಲದೆ,10 ಲಕ್ಷದಿಂದ 15 ಲಕ್ಷದವರೆಗೆ ಶೇ.3 ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.ಗ್ರಾಮೀಣ ಪ್ರದೇಶದಲ್ಲಿ 3 ಫೇಸ್ ವಿದ್ಯುತ್ ಹಗಲು ಹೊತ್ತಿನಲ್ಲಿ 8 ಗಂಟೆ ನೀಡಲಾಗುವುದು.ರಬ್ಬರ್ ಕೃಷಿಗಾಗಿ ರೂ.25 ಕೋಟಿಯ ಪ್ಯಾಕೇಜ್, ಕ್ಷೀರಧಾರೆ ಯೋಜನೆಯಡಿ
ಪ್ರತೀ ಲೀಟರ್ ಹಾಲಿನ ಸಬ್ಸಿಡಿಯನ್ನು ರೂ.5 ರಿಂದ 7 ಕ್ಕೆ ಏರಿಕೆ. ಮಹಿಳೆಯರಿಗೆ ಯಾವುದೇ ಭದ್ರತೆ ಇಲ್ಲದೆ ಎರಡು ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಬಡ್ಡಿ ರಹಿತ ಸಾಲ. ಮೀನುಗಾರಿಕೆಗೆ ಪ್ರೋತ್ಸಾಹ, ಮೀನುಗಾರಿಕೆ ಮಹಿಳೆಗೆ 3 ಲಕ್ಷ ಬಡ್ಡಿ ರಹಿತ ಸಾಲ. ಆಳ ಸಮುದ್ರ ಮೀನುಗಾರಿಕೆಗೆ 500 ಲೀಟರ್ ಡೀಸೆಲ್ ತೆರಿಗೆ ಮುಕ್ತ, ಮೀನುಗಾರಿಕೆ ನಿಷೇಧ ಸಮಯದಲ್ಲಿ ಎಲ್ಲ ಮೀನುಗಾರರಿಗೆ ತಿಂಗಳಿಗೆ 6 ಸಾವಿರ ರೂ. ಒದಗಿಸಲು ಕ್ರಮ. ಮೀನುಗಾರಿಕೆ ಕ್ಷೇತ್ರದಲ್ಲಿ ಕನಿಷ್ಟ 10 ಲಕ್ಷ ಉದ್ಯೋಗ ಸೃಷ್ಟಿ. ರೈತರಿಗೆ ತಮ್ಮ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಲು ಇರುವ ತೊಡರುಗಳ ನಿವಾರಣೆ. ಸ್ಮಾರ್ಟ್ ಆಫ್ ನಿಧಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ರೂ.10 ಕೋಟಿ ನೀಡಿಕೆ. ಶಿಕ್ಷಣ ಕ್ಷೇತ್ರದಲ್ಲಿ ಇರುವ ಖಾಲಿಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡಲು ಕ್ರಮ. ಬಡವರ ವಸತಿ ಯೋಜನೆಗಳಿಗೆ ಸಬ್ಸಿಡಿ ರೂ.3 ಲಕ್ಷಕ್ಕೆ ಹೆಚ್ಚಳ ಹೀಗೆ ಜನಪರವಾದ ಹಲವು ಯೋಜನೆಗಳನ್ನು ತರಲಾಗಿದೆ ಎಂದು ಅವರು ವಿವರ ನೀಡಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಮಾತನಾಡಿ ಬಿಜೆಪಿ ಸರಕಾರದ ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಈಬಾರಿ ಬದಲಾವಣೆ ಬಯಸಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವು ಹೆಚ್ಚಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದು ಗ್ಯಾರಂಟಿ. ಈಗಾಗಲೇ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಗಳನ್ನು ಜನರು ಒಪ್ಪಿಕೊಂಡಿದ್ದಾರೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಈ ಗ್ಯಾರಂಟಿ ನಿರ್ಣಯಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಇದ್ದರು.