ನವದೆಹಲಿ: ಅಂತರರಾಷ್ಟ್ರೀಯ ಫುಟ್ಬಾಲ್ ವೃತ್ತಿ ಜೀವನಕ್ಕೆ ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ನಿವೃತ್ತಿ ಘೋಷಿಸಿದ್ದಾರೆ. ಅವರ ಕ್ರೀಡಾ ಸಾಧನೆಯನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ಕ್ರೀಡಾ ಲೋಕದ ಪ್ರಮುಖರು ಕೊಂಡಾಡಿದ್ದಾರೆ.ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್ ವಿರುದ್ಧ ಜೂನ್ 6ರಂದು ಕೋಲ್ಕತ್ತದಲ್ಲಿ ಚೆಟ್ರಿ ಕೊನೆಯ
ಪಂದ್ಯವನ್ನು ಆಡಲಿದ್ದಾರೆ. ಇಂದು ಅಭಿಮಾನಿಗಳೊಂದಿಗೆ ವಿಡಿಯೊ ಸಂದೇಶ ಹಂಚಿಕೊಂಡಿರುವ ಭಾರತೀಯ ಫುಟ್ಬಾಲ್ ತಂಡದ ಅತ್ಯಂತ ದೀರ್ಘಾವಧಿಯ ನಾಯಕ ಚೆಟ್ರಿ, ಅಂತರರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ, ‘ನನ್ನ ಗೆಳೆಯ, ಹೆಮ್ಮೆಯಿದೆ’ ಎಂದು ತಿಳಿಸಿದ್ದಾರೆ. 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ವಿಜೇತ ಹೀರೊ ಯುವರಾಜ್ ಸಿಂಗ್ ಹಾಗೂ ಮಾಜಿ ಫುಟ್ಬಾಲ್ ತಾರೆ ಬೈಚುಂಗ್ ಭುಟಿಯಾ ಸಹ ಚೆಟ್ರಿ ಅವರ ಸಾಧನೆಯನ್ನು ಮೆಲುಕು ಹಾಕಿದ್ದಾರೆ.
2005ರಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಚೆಟ್ರಿ ಫುಟ್ಬಾಲ್ ಲೋಕಕ್ಕೆ ಪದಾರ್ಪಣೆ ಮಾಡಿದ್ದರು.150 ಪಂದ್ಯಗಳನ್ನು ಅಡಿರುವ ಅವರು ದಾಖಲೆಯ 94 ಗೋಲುಗಳನ್ನು ಗಳಿಸಿದ್ದಾರೆ.