ಬೆಂಗಳೂರು:ಚಂದ್ರಯಾನ–3ರ ರೋವರ್ ಪ್ರಜ್ಞಾನ್ ಚಂದ್ರನ ಅಂಗಳದಲ್ಲಿ ಒಂದು ದಿನದ (ಭೂಮಿಯ 14 ದಿನಗಳು) ಕಾರ್ಯಾಚರಣೆ ಪೂರ್ಣಗೊಳಿಸಿದ್ದು, ಅಲ್ಲಿ ಕತ್ತಲು ಆವರಿಸಿರುವುದರಿಂದ, ಅದರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಉಪಕರಣಗಳನ್ನು ಸ್ಲೀಪ್ ಮೋಡ್ಗೆ ಹಾಕಲಾಗಿದೆ. ಸ್ಲೀಪ್ ಮೋಡ್ ಪ್ರಕ್ರಿಯೆ ನಂತರ ಇಸ್ರೊ ಮತ್ತೊಂದು ಮಹತ್ವದ ಪ್ರಯೋಗವನ್ನು ಚಂದ್ರನ ಅಂಗಳದಲ್ಲಿ ಯಶಸ್ವಿಗೊಳಿಸಿದೆ. ಚಂದ್ರನದಲ್ಲಿ ವಿಕ್ರಂ ಲ್ಯಾಂಡರ್ ಇಳಿದ
ಶಿವಶಕ್ತಿ ಪಾಯಿಂಟ್ನಲ್ಲಿ ಸುಮಾರು 40 ಸೆಂ.ಮೀ. ಎತ್ತರಕ್ಕೆ ಲ್ಯಾಂಡರ್ ಹಾರಿಸಿ, ಬಳಿಕ 30 ರಿಂದ 40 ಸೆಂ. ಮೀ ಅಷ್ಟು ಪಕ್ಕಕ್ಕೆ ಲ್ಯಾಂಡ್ ಮಾಡಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೊ, ಇದು ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವನ ಕಳುಹಿಸಿ ವಾಪಸ್ ಕರೆತರುವ ಯೋಜನೆಗೆ ಪೂರಕ ಎಂದು ಜೊತೆಗೆ ವಿಡಿಯೊ ಹಂಚಿಕೊಂಡಿದೆ. ಇದು ಮತ್ತೊಂದು ಬಾರಿ ಸಾಫ್ಟ್ ಲ್ಯಾಂಡಿಂಗ್ ಆದಂತೆ ಎಂದು ಹೇಳಿದೆ.
ರೋವರ್ನಲ್ಲಿರುವ ಎಪಿಎಕ್ಸ್ಎಸ್ ಮತ್ತು ಲಿಬ್ಸ್ ಉಪಕರಣಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಹೀಗಾಗಿ ಇವುಗಳಿಂದ ಲ್ಯಾಂಡರ್ ಮೂಲಕ ಭೂಮಿಗೆ ರವಾನೆಯಾಗುತ್ತಿದ್ದ ಮಾಹಿತಿಗಳೂ ನಿಂತು ಹೋಗಿವೆ. ಇವುಗಳಿಗೆ ಅಳವಡಿಸಿರುವ ಬ್ಯಾಟರಿಗಳು ಪೂರ್ಣ ಚಾರ್ಜ್ ಆಗಿವೆ.
ಸೆ.22ರಂದು ಚಂದ್ರನಲ್ಲಿ ಸೂರ್ಯೋದಯ ಆಗುವುದರಿಂದ ಅಂದು ಸೌರಫಲಕಗಳಿಗೆ ಬೆಳಕು ಸಿಗುತ್ತದೆ. ಆಗ ಮತ್ತೆ ಲ್ಯಾಂಡರ್ ಮತ್ತು ರೋವರ್ ಎಚ್ಚರಗೊಳ್ಳಬಹುದು. ಇನ್ನಷ್ಟು ಕೆಲಸಗಳನ್ನು ಅವುಗಳಿಂದ ನಿರೀಕ್ಷಿಸಬಹುದು ಎಂಬ ಆಶಯವನ್ನು ಇಸ್ರೊ ವ್ಯಕ್ತಪಡಿಸಿದೆ. ಚಂದ್ರನಲ್ಲಿ. ರಾಯಭಾರಿಯಾಗಿ ಈ ಎರಡೂ ಉಪಕರಣಗಳು ಶಾಶ್ವತವಾಗಿ ಉಳಿಯಬಹುದುಎಂದೂ ಹೇಳಿದೆ.