ಬೆಂಗಳೂರು: ಚಂದ್ರಯಾನ-3 ತನ್ನ ಅಂತಿಮ ಘಟ್ಟದತ್ತ ಹೆಜ್ಜೆ ಇಡುತ್ತಿದ್ದು, ಪ್ರಪಲ್ಶನ್ ಮಾಡ್ಯುಲ್ನಿಂದ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿರುವ ಚಿತ್ರಗಳನ್ನು ಹಾಗೂ ಚಂದ್ರನ ಅತ್ಯಂತ ಸನಿಹದ ಚಿತ್ರಗಳನ್ನು ವಿಕ್ರಮ್ ಲ್ಯಾಂಡರ್ ಕಳುಹಿಸಿಕೊಟ್ಟಿದೆ. 31 ಸೆಕೆಂಡ್ ವಿಡಿಯೋವನ್ನು ಇಸ್ರೋ ಶುಕ್ರವಾರ ಬಿಡುಗಡೆ ಮಾಡಿದ್ದು, ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ನಲ್ಲಿ ಅಳವಡಿಸಲಾಗಿರುವ ಇಮೇಜರ್ ಕ್ಯಾಮೆರಾ ಸೆರೆಹಿಡಿದ
ಚಿತ್ರಗಳು ಇದಾಗಿವೆ ಎಂದು ತಿಳಿಸಿದೆ. ಆಗಸ್ಟ್ 17 ರಂದು ಚಂದ್ರನ ಕಕ್ಷೆಯಲ್ಲಿ ಪ್ರಪಲ್ಶನ್ ಮಾಡ್ಯೂಲ್ ಹಾಗೂ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟ ತಕ್ಷಣದಲ್ಲಿ ತೆಗೆದ ಚಿತ್ರಗಳು ಇದಾಗಿವೆ ಎಂದು ಮಾಹಿತಿ ನೀಡಿದೆ. ಇದಕ್ಕೂ ಮುನ್ನ ಆಗಸ್ಟ್ 15 ರಂದು ಲ್ಯಾಂಡರ್ ಪೊಸಿಷನ್ ಡಿಟೆಕ್ಟರ್ ಕ್ಯಾಮೆರಾದಿಂದ ಚಂದ್ರನ ಚಿತ್ರಗಳನ್ನು ಸೆರೆ ಹಿಡಿಯಲಾಗಿತ್ತು. ಪ್ರಪಲ್ಶನ್ ಮಾಡ್ಯುಲ್ನಿಂದ ಬೇರ್ಪಟ್ಟಿರುವ ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ಅನ್ನು ಚಂದ್ರನ ಮೇಲೆ ಇಳಿಸುವ ಕೆಲಸ ನಡೆಯಲಿದೆ.
ಇದರ ಭಾಗವಾಗಿ ಇಂದು ವಿಕ್ರಂ ಲ್ಯಾಂಡರ್ ತನ್ನ ಮೊದಲ ಡಿಬೂಸ್ಟಿಂಗ್ ಆಪರೇಷನ್ಗೆ ಒಳಗಾಯಿತು. ಈ ಪ್ರಕ್ರಿಯೆಯು ಚಂದ್ರನ ಹತ್ತಿರದ ಕಕ್ಷೆಗೆ ಅದನ್ನು ಸೇರಿಸಲು ಅದನ್ನು ನಿಧಾನಗೊಳಿಸಿದೆ.
ಇಸ್ರೋ ನೀಡಿದ ಮಾಹಿತಿಯ ಪ್ರಕಾರ ಲ್ಯಾಂಡರ್ ಮೊಡ್ಯೂಲ್ನ ಸ್ಥಿತಿ ಸಹಜವಾಗಿದ್ದು ಹಾಗೂ ಇಂದು ಕೈಗೊಳ್ಳಲಾದ ಮಹತ್ವದ ಹೆಜ್ಜೆ ಯಶಸ್ವಿಯಾಗಿದೆ. ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ನಿರೀಕ್ಷೆಯಂತೆ ಆಗಸ್ಟ್ 23ರಂದು ಕಾಲಿಟ್ಟರೆ, ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರ ಭಾರತ ಆಗಲಿದೆ. ಆಗಸ್ಟ್ 23 ರಂದು ಚಂದ್ರನ ಮೇಲೆ ಲ್ಯಾಂಡರ್ ಇಳಿಯುವ ಮುನ್ನ ಸಾಕಷ್ಟು ಬಾರಿ ಡಿಬೂಸ್ಟ್ ಪ್ರಕ್ರಿಯೆ ನಡೆಯಲಿದೆ.