ಸುಳ್ಯ:ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಐದು ವರ್ಷದಲ್ಲಿ ಎರಡು ಸಾವಿರ ಕೋಟಿಗೂ ಮಿಕ್ಕಿದ ಅಭಿವೃದ್ಧಿ ಕೆಲಸಗಳು ನಡೆದಿದೆ.ಕಾಂಗ್ರೆಸ್ ಮುಖಂಡರು ಕಪೋಲ ಕಲ್ಪಿತ ಅಂಕಿ ಅಂಶವನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಿಧ
ಅನುದಾನದಲ್ಲಿ ಕಳೆದ ಐದು ವರ್ಷದಲ್ಲಿ 2015 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿದೆ
ಸುಳ್ಯದಲ್ಲಿ 1994ರ ಬಳಿಕ ವಿವಿಧ ರಸ್ತೆಗಳು ಸೇರಿದಂತೆ ವಿವಿಧ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಲಜೀವನ್ ಮಿಷನ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಸೇರಿದಂತೆ ಮತ್ತಿತರ ಯೋಜನೆಗಳಡಿ 2015 ಕೋಟಿ ಕ್ಷೇತ್ರಕ್ಕೆ ಬಂದಿದ್ದು, ಅಷ್ಟು ಮೊತ್ತದ ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದರು. ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಅಪಪ್ರಚಾರ ಮಾಡುತ್ತಾ ಬಂದಿದೆ. ಇದನ್ನು ಮತದಾರರು ತಿಳಿದಿದ್ದಾರೆ. ಅಪಪ್ರಚಾರ ತಿರಸ್ಕರಿಸಿ ಬಿಜೆಪಿಗೆ ಮತ ನೀಡಲಿದ್ದಾರೆ ಎಂದ ಅವರು ಕಾಂಗ್ರೆಸ್ ಸ್ವಾತಂತ್ರ್ಯ ಬಂದ ಬಳಿಕ 75 ವರ್ಷದಲ್ಲಿ ಸುಳ್ಯಕ್ಕೆ ಏನು ನೀಡಿದೆ ಎಂದು ಪ್ರಶ್ನಿಸಿದರು. ಅಡಿಕೆ ರೋಗಕ್ಕೆ ಎಷ್ಟು ಖರ್ಚಾದರೂ ನಾವು ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ 100 ಕೋಟಿಗೂ ಹೆಚ್ಚಿನ ಅನುದಾನ ಬರಲಿದೆ ಎಂದರು.
ಮಂಡಲ ಮಾಧ್ಯಮ ಪ್ರಮುಖರಾದ ವೆಂಕಟ್ ದಂಬೆಕೋಡಿ ಮಾತನಾಡಿ, ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ಗೊತ್ತಿಲ್ಲದ ಅಂಕಿ ಅಂಶ ನೀಡುತ್ತಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಿಜೆಪಿ ಶಾಸಕರಿಗೆ ಅನುದಾನ ಬಂದಿರಲಿಲ್ಲ.ಕಾಂಗ್ರೆಸ್ನಿಂದ ಜನತೆಗೆ ತಪ್ಪು ಸಂದೇಶ ನೀಡಲಾಗುತ್ತಿದೆ. ಈ ಬಾರಿ ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಕಳೆದ ಬಾರಿಯ ಬಹುಮತ 26 ಸಾವಿರವನ್ನೂ ಮೀರಿದ ಬಹುಮತ ಪಡೆಯಲಿದ್ದಾರೆ. ಎಂದರು. ಸಂಸದರ ಆದರ್ಶ ಗ್ರಾಮದಲ್ಲೂ ಇಂದು ಅಭೂತಪೂರ್ವ ಅಭಿವೃದ್ಧಿ ಆಗಿದೆ. ರಸ್ತೆಗಳು ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ ಎಂದರು. ಕಾಂಗ್ರೆಸ್ನವರು ಬಳ್ಪಕ್ಕೆ ಹೋಗಿ ನೋಡಿ ಹೇಳಿಕೆ ನೀಡಲಿ ಎಂದು ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಹರೀಶ್ ಬೂಡುಪನ್ನೆ ಉಪಸ್ಥಿತರಿದ್ದರು.