ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಮಂಗಳವಾರ ಸಂಜೆ ಚಂಡಮಾರುತವಾಗಿ ರೂಪಾಂತರಗೊಂಡಿದ್ದು ತೀವ್ರ ಸ್ವರೂಪ ಪಡೆಯುತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತಕ್ಕೆ ‘ಬಿಪರ್ಜೋಯ್’ ಎಂಬ ಹೆಸರನ್ನು ನೀಡಿದೆ.
ಆಗ್ನೇಯ ಮತ್ತು ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲಿನ
ವಾಯುಭಾರ ಕುಸಿತದ ವಿದ್ಯಮಾನವು ಸುಮಾರು 40 ಕಿಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದ್ದು, ಚಂಡಮಾರುತವಾಗಿ ತೀವ್ರ ರೂಪ ಪಡೆದುಕೊಂಡಿದೆ. 24 ಗಂಟೆಗಳಲ್ಲಿ ಇದು ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗೋವಾದಿಂದ ಸುಮಾರು 920 ಕಿಮೀ ದೂರದಲ್ಲಿ ಚಂಡಮಾರುತವು ಕೇಂದ್ರೀಕೃತವಾಗಿದೆ. ಮುಂಬೈನಿಂದ ನೈರುತ್ಯಕ್ಕೆ 1050 ಕಿ.ಮೀ, ಪೋರಬಂದರ್ನಿಂದ ದಕ್ಷಿಣ-ನೈಋತ್ಯಕ್ಕೆ 1130 ಕಿ.ಮೀ ದೂರದಲ್ಲಿ ಚಂಡಮಾರುತವಿದೆ’ ಎಂದು ಐಎಂಡಿ ತಿಳಿಸಿದೆ.
ಚಂಡಮಾರುತವು ಉತ್ತರಕ್ಕೆ ಚಲಿಸುವ ಸಾಧ್ಯತೆಯಿದೆ ಮತ್ತು ಕ್ರಮೇಣ ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅರಬ್ಬಿ ಸಮುದ್ರದಲ್ಲಿ ಈ ವರ್ಷ ಎದ್ದಿರುವ ಮೊದಲ ಚಂಡಮಾರುತ ‘ಬಿಪರ್ಜಾಯ್’ ತೀವ್ರ ಸ್ವರೂಪ ಪಡೆಯುತ್ತಿದ್ದು, ಇದರಿಂದ ಕೇರಳದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಜೂನ್ 8 ರಿಂದ ಜೂನ್ 10 ರವರೆಗೆ ಕೊಂಕಣ- ಗೋವಾ-ಮಹಾರಾಷ್ಟ್ರ ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಸಮುದ್ರದಲ್ಲಿರುವ ಮೀನುಗಾರರು ಹಿಂದೆ ಬರಲು ಸೂಚಿಸಲಾಗಿದೆ.
ಅರಬ್ಬಿ ಸಮುದ್ರದಲ್ಲಿನ ಈ ವಿದ್ಯಮಾನ ಮುಂಗಾರು ಮಾರುತಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ, ಮಾರುತಗಳು ಕೇರಳಕ್ಕೆ ಯಾವಾಗ ಪ್ರವೇಶಿಸಲಿವೆ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ. ಜೂನ್ 8 ಅಥವಾ 9ರಂದು ಮಾರುತಗಳು ಕೇರಳ ಪ್ರವೇಶಿಸಬಹುದು ಎಂದು ಖಾಸಗಿ ಸಂಸ್ಥೆ ‘ಸ್ಕೈಮೆಟ್’ ತಿಳಿಸಿದೆ.
‘ಅರಬ್ಬಿ ಸಮುದ್ರದಲ್ಲಿನ ಈ ಪ್ರಬಲ ಹವಾಮಾನ ವ್ಯವಸ್ಥೆಗಳು ಮಾನ್ಸೂನ್ ಪ್ರವೇಶವನ್ನು ಹಾಳುಮಾಡಲಿವೆ. ಮಾನ್ಸೂನ್ ಮಾರುತಗಳು ಕರಾವಳಿ ಭಾಗಗಳನ್ನು ತಲುಪಿದರೂ, ಚಂಡಮಾರತದ ಪರಿಣಾಮವಾಗಿ ಪಶ್ಚಿಮ ಘಟ್ಟಗಳ ಆಚೆಗೆ ಹೋಗುವುದು ಕಷ್ಟವಾಗಬಹುದು’ ಎಂದು ‘ಸ್ಕೈಮೆಟ್’ ಹೇಳಿದೆ.