ಸಂಪಾಜೆ:ಕಳೆದ ವರ್ಷ ಉಂಟಾದ ಜಲಪ್ರಳಯದ ಕಾರಣದಿಂದ ಸಂಪಾಜೆ ಭಾಗದಲ್ಲಿ ನದಿಗಳಲ್ಲಿ ಮತ್ತು ಹೊಳೆಯಲ್ಲಿ ತುಂಬಿದ ಮರಳು ಮತ್ತು ಹೂಳನ್ನು ತೆಗೆಯುವ ಕಾರ್ಯಾಚರಣೆ ಜೂ.7ರಿಂದ ಆರಂಭಗೊಂಡಿದೆ. ಕಲ್ಲುಗುಂಡಿ ಕೂಲಿಶೆಡ್ ಬಳಿಯಿಂದ ಹಿಟಾಚಿ ಬಳಸಿ ಹೂಳು ತೆಗೆಯುವ ಕಾರ್ಯ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ‘ ನದಿಗಳಲ್ಲಿ, ಹೊಳೆಗಳಲ್ಲಿ ತುಂಬಿರುವ ಹೂಳು ಮತ್ತು ಮರಳು ತೆರವು
ಮಾಡಬೇಕು ಎಂಬುದು ಗ್ರಾಮದ ಜನರ ಬಹುಮುಖ್ಯ ಬೇಡಿಕೆಯಾಗಿತ್ತು. ಮತ್ತೆ ಪ್ರಳಯ ಉಂಟಾಗುವ ಭೀತಿಯಿಂದ ಕಳೆದ ಒಂದು ವರ್ಷದಿಂದ ಗ್ರಾಮಸ್ಥರು ನಡೆಸಿದ ಹೋರಾಟದಿಂದ ಹೂಳೆತ್ತುವ ಕಾರ್ಯ ಆರಂಭಗೊಂಡಿದೆ ಎಂದು ಹೇಳಿದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಮಾತನಾಡಿ’ ಪ್ರಾಕೃತಿಕ ವಿಕೋಪದಿಂದ ಕಳೆದ ಬಾರಿ ಗ್ರಾಮದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಈ ಬಾರಿಯೂ ಪ್ರಳಯ ಭೀತಿ ಇದೆ. ಆದುದರಿಂದ ನಮ್ಮ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ನದಿಗಳಲ್ಲಿನ ಹೂಳು, ಮಣ್ಣು ತೆಗೆಯಲು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹೇಮಂತ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಸ್ಥಳಕ್ಜೆ ಆಗಮಿಸಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಸೋಮಶೇಖರ ಕೊಯಿಂಗಾಜೆ, ಕೆ.ಆರ್.ಜಗದೀಶ್ ರೈ, ಎಸ್.ಕೆ.ಹನೀಫ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಪ್ರಮುಖರಾದ ರವಿಶಂಕರ್ ಭಟ್, ಪದ್ಮಯ್ಯ ಗೌಡ, ನಾಗೇಶ್ ಪಿ.ಆರ್, ಪ್ರಶಾಂತ್ ವಿ. ವಿ. ಯು.ಬಿ.ಚಕ್ರಪಾಣಿ, ಕೇಶವ ಬಂಗ್ಲೆಗುಡ್ಡೆ, ಜಯಾನಂದ ಸಂಪಾಜೆ, ಮುರಳೀಧರ ಕೆ.ಜಿ, ಬಿ.ಆರ್.ನಾರಾಯಣ ರಾವ್,
ಕಿಶೋರ್ ಕುಮಾರ್, ಕುಂಞಿಕಣ್ಣ ಮಣಿಯಾಣಿ, ಕಿಶೋರ್ ಕುಮಾರ್ ಸ್ಪಾಟ್ ಕಂಪ್ಯೂಟರ್, ರಫೀಕ್ ಪ್ರಗತಿ, ರಝಾಕ್ ಸೂಪರ್, ರಫೀಕ್ ಕರಾವಳಿ, ಮೊದಲದವರು ಉಪಸ್ಥಿತರಿದ್ದರು.