ಬನಾರಿ:ಕಳೆದ ಎಂಟು ದಶಕಗಳಿಂದ ಗಡಿ ಗ್ರಾಮ ದೇಲಂಪಾಡಿಯ ಬನಾರಿಯಲ್ಲಿ ಕಲೆಯ ಬೆಳವಣಿಗೆಗೆ ನಿರಂತರ ಪ್ರೋತ್ಸಾಹ ನೀಡುವುದು ಶ್ಲಾಘನೀಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 80ನೇ ವಾರ್ಷಿಕೋತ್ಸವ ಹಾಗೂ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ ಅವರ ಕಲಾ ಸೇವೆಯನ್ನು ಅವರ
ಮಕ್ಕಳು ಮುಂದುವರಿಸುತ್ತಿರುವುದು ಯಕ್ಷಗಾನದ ಬೆಳವಣಿಗೆಗೆ ದೊಡ್ಡ ಕೊಡುಗೆಯಾಗಿದೆ.
ಕಲೆ ನಮ್ಮ ದೇಶದ ಸಂಸ್ಕೃತಿ. ಯಕ್ಷಗಾನ ವಿಶೇಷ ಕಲೆ, ಅದನ್ನು ಕರಗತ ಮಾಡಲು ದೊಡ್ಡ ಶ್ರಮ, ತ್ಯಾಗ ಬೇಕು. ಆಧುನಿಕ ಯುಗದಲ್ಲಿ ಕಲೆಯೆಡೆಗೆ ಜನರು ವಿಮುಖರಾಗುತ್ತಿದ್ದರೂ ಇಲ್ಲಿ ಯಕ್ಷಗಾನ ನಿರಂತರ ಬೆಳಗುತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗಡಿ ಸಂಸ್ಕೃತಿ ಉತ್ಸವ, ವಾರ್ಷಿಕೋತ್ಸವ, ಕೀರಿಕ್ಕಾಡು ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆದವು. ಬನಾರಿಯ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ನಡೆದ
80ನೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ
ಖ್ಯಾತ ಅರ್ಥಧಾರಿ, ಬಹುಭಾಷಾ ವಿದ್ವಾಂಸ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟ ಅವರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟ ‘ಕಾಡಿನ ಮಧ್ಯೆ ಕಲೆಯ ನಾಡನ್ನು ಕಟ್ಟಿದವರು, ಯಕ್ಷಗಾನವನ್ನು ಬೆಳಗಿಸಿದವರು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು. ಅವರಿಗೆ ಕಾಡು ಕಾಡಲಿಲ್ಲ. ಬದಲಾಗಿ ಸಂಸ್ಕೃತಿಯನ್ನೂ, ಸಂಸ್ಕಾರವನ್ನೂ, ಮನೆಯನ್ನೂ, ಮನಸ್ಸನ್ನೂ ಕಟ್ಟಿದರು. ಯಕ್ಷಗಾನವನ್ನು ಉಸಿರಾಗಿಸಿದವರು ಎಂದರು.
ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಅಭಿನಂದನಾ ಭಾಷಣ ಮಾಡಿದರು. ವಿದ್ವಾಂಸರು ಹೇಗೆ ಇರಬೇಕು ಎಂಬುದಕ್ಕೆ ಕೆರೆಕೈ ಉಮಾಕಾಂತ ಭಟ್ಟ ಅವರು ಮಾದರಿ. ಯಕ್ಷಗಾನ, ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು.ಸಾಮಾಜಿಕ ಕಾರ್ಯಕರ್ತರಾದ ಗೋಪಾಲ ಶೆಟ್ಟಿ ಅರಿಬೈಲು ಅತಿಥಿಗಳಾಗಿ ಭಾಗವಹಿಸಿದ್ದರು. ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ, ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ರಮಾನಂದ ಬನಾರಿ ಸ್ವಾಗತಿಸಿದರು.
ಕಾರ್ಯದರ್ಶಿ ವಿಶ್ವವಿನೋದ ಬನಾರಿ ಸನ್ಮಾನ ಪತ್ರ ವಾಚಿಸಿದರು.ನಾರಾಯಣ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.