*ಗೋಪಾಲ್ ಪೆರಾಜೆ.
ಮಲೆನಾಡಿನ ಅಡಿಕೆ ಬೆಳೆಗಾರರ ನಿಟ್ಟಿಸಿರು ಸಂಕಟ.ರೋಧನ ದಿನೇ ದಿನೇ ಹೆಚ್ಚುತ್ತಿದೆ. ಒಂದೆಡೆ ಹಳದಿ ರೋಗಕ್ಕೆ ಬಲಿಯಾದ ಸಾವಿರಾರು ಎಕರೆ ಅಡಿಕೆ ತೋಟಗಳು, ಮತ್ತೊಂದೆಡೆ ಕಳೆದ ಮೂರು ವರ್ಷಗಳಿಂದ ಜಡಿಮಳೆಗೆ ವ್ಯಾಪಕವಾದ ಕೊಳೆರೋಗ. ತಮ್ಮ ಆದಾಯದ ತಳಮೂಲವನ್ನೇ ಕಳೆದುಕೊಂಡ ರೈತರು ಮುಂದೇನು ಎಂಬುದಾಗಿ ತಲೆಗೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ. “ಈ ಸಲ ಮಳೆಗಾಲ ನಮ್ಮಪ್ಪ ಒಲೆ ಬುಡಂದ ಏಳ ಸಾಲ ಕೊಟ್ಟವರೆಲ್ಲ ಬನ್ನಿ ನಮ್ಮಂಗಳದ ಮಣ್ಣ ತಿನ್ನಿ’
ಅರೆಬಾಸೆ ಕವಿ ಒಬ್ಬರ ಪದ್ಯದ ಸಾಲುಗಳಿವು.
ಆರಂಭದಲ್ಲಿ ಕೊಡಗಿನ ಸಂಪಾಜೆ ಭಾಗದಲ್ಲಿ ಕಾಣಿಸಿಕೊಂಡ ಈ ಹಳದಿ ರೋಗ ಬಹುಬೇಗನೆ ದ.ಕ.ಜಲ್ಲೆ, ಕೊಡಗು ಸೇರಿದಂತೆ ಇತರ ಜಿಲ್ಲೆಗಳಲ್ಲೂ
ತನ್ನ ಕ್ರೂರ ಕದಂಬ ಬಾಹುಗಳನ್ನು ಚಾಚಿ ನಿಂತಿದೆ.
ಮಲೇಶಿಯಾ ಅಥವಾ ಫಿಲಿಫೈನ್ಸ್ ಮೂಲದ ಈ ಅಡಿಕೆಯನ್ನು ಶ್ರೀಲಂಕಾ, ಮಲಯ,ಬಾಂಗ್ಲಾದೇಶ, ಚೀನಾ, ಆಫ್ರಿಕಾದ ಕೆಳಭಾಗಗಳಲ್ಲಿ ಬೆಳೆಯಲಾಗುತ್ತಿದೆ. 1500 ವರ್ಷಕ್ಕೂ ಹಿಂದಿನಿಂದಲೂ ಅಡಿಕೆಯನ್ನು ಭಾರತದಲ್ಲಿ ಬಳಸುತ್ತಿರುವುದು ಚರಿತ್ರೆಯಲ್ಲಿ ಕಂಡುಬರುವ ಸಂಗತಿ. ಅದು ಜಗಿದು ಉಗಿದು ತಿನ್ನುವುದರ ಜೊತೆಗೆ ಅನೇಕ ಧಾರ್ಮಿಕ ಸಾಂಪ್ರದಾಯಿಕ ವಿಧಿಗಳಿಗೆ ನಮ್ಮಲ್ಲಿ ಅಗತ್ಯ. ತಾಂಬೂಲದೊಂದಿಗೆ ನೀಡುವ ಗೌರವಕ್ಕೆ ನಮ್ಮ ಸಮಾಜದಲ್ಲಿ ದೊಡ್ಡ ಮನ್ನಣೆ. ಬಹು ಹಿಂದೆಯೇ ಭಾರತ ಪ್ರವೇಶಿಸಿದ ಅಡಿಕೆ ಬೆಳೆ ಒಂದು ಶತಮಾನದಿಂದ ಈಚೆಗೆ ಅತಿ ಮುಖ್ಯ ವಾಣಿಜ್ಯ ಬೆಳೆಯಾಗಿ ಮಾರುಕಟ್ಟೆಯನ್ನು ಪ್ರವೇಶಿಸಿತು. ಒಂದು ಕಾಲದಲ್ಲಿ ಮಲೆನಾಡಿನ ಭಾಗಗಳಲ್ಲಿ ವ್ಯಾಪಕವಾಗಿದ್ದ ಗದ್ದೆ ಬಯಲುಗಳನ್ನು ಆಪೋಶನ ಮಾಡುತ್ತಲೇ ಈ ಅಡಿಕೆ ತೋಟಗಳು ಬೃಹತ್ ಪ್ರಮಾಣದಲ್ಲಿ ಬೆಳೆದು ಬಂದವು. ಈಗಂತೂ ಗುಡ್ಡ ಪ್ರದೇಶ ಬಯಲು ಜಾಗಗಳನ್ನೆಲ್ಲ ಆಕ್ರಮಿಸುತ್ತಾ ಆರ್ಥಿಕ ಜೀವನಾಡಿನಂತಿದೆ ಅಡಿಕೆ. ಯಾಕೋ..ಈ ನಾಡಿ ಮಿಡಿತ ನಿಧಾನವಾಗುತ್ತಿದೆ. ಕಳೆದೊಂದು ಶತಮಾನದಿಂದ ಬೆಳೆದವರ ಮನೆಯ
ಸಂಪತ್ತು ವೈಭವದ ಭಾಗವಾಗಿದ್ದ ಈ ಅಡಿಕೆ ತನ್ನ ರಾಜ ಪೀಠದಿಂದ ಈಗ ಜಾರತೊಡಗಿದೆ. ಸದ್ಯ ಹಳದಿರೋಗದಿಂದ ಬಚಾವ್ ಆಗುವ ಲಕ್ಷಣಗಳಂತೂ ಇಲ್ಲ. ಈ ಮಧ್ಯೆ ಹವಾಮಾನ ವೈಪರೀತ್ಯಕ್ಕೆ ಬಲಿಯಾದ ಅಡಿಕೆ ಪ್ರದೇಶಗಳು ಅಡಿಕೆಯ ಮಿಡಿ ಉದುರುವಿಕೆ ಮತ್ತು ಕೊಳರೋಗದ ಬಾದೆಗೆ ಸಿಲುಕಿವೆ. ಇನ್ನು ‘ಮುಂಡುಸಿರಿ’
‘ಎಲೆ ಚುಕ್ಕಿ’ ಮತ್ತಿನ್ನೇನೋ… ಮಾತ್ರವಲ್ಲ ಕಳೆದ ಮೂರು ನಾಲ್ಕು ವರ್ಷದಿಂದ ಅಳಿದುಳಿದ ಹಳದಿ ರೋಗದ ತೋಟಗಳಲ್ಲಿ ತೀವ್ರ ಕೊಳೆರೋಗ ಕಾಣಿಸಿಕೊಂಡಿದೆ. ನಿರಂತರ ಮಳೆಗೆ ಮದ್ದು ಸಿಂಪಡಿಸಲು ಆಗದೆ, ವಾತಾವರಣ ತಿಳಿಯಾಗಿ ಮದ್ದು ಬಿಡೋಣ ಎನ್ನುವಾಗ ಮರ ಹತ್ತುವ ಕಾರ್ಮಿಕರ ಕೊರತೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಅಡಿಕೆಯ ದರವೇನೋ ವೃದ್ಧಿಸಿದೆ. ಆದರೆ ನಷ್ಟಗಳ ದಾರಿ ಮತ್ತಷ್ಟು ದೊಡ್ಡದಾಗಿದೆ. ಅಷ್ಟಿಷ್ಟಾದರೂ ಇರುವ ಅಡಿಕೆಯನ್ನು ರೋಗದಿಂದ ಬಚಾವಾಗಿಸುವ ನೆಲೆಯಲ್ಲಿ ‘ಬೋರ್ಡೋ ದ್ರಾವಣ ರೈತರ ಬ್ರಹ್ಮಾಸ್ತ್ರ. ಆದರೆ ಅದನ್ನು ಪ್ರಯೋಗಿಸಲಾಗದೆ ಈಗ ಬಹಳ ಮಂದಿ ರೈತರು ಕೈಚೆಲ್ಲಿದ್ದಾರೆ.
ಈ ಬೋರ್ಡೋ ದ್ರಾವಣವನ್ನು ಫ್ರಾನ್ಸ್ ದೇಶದ ಪ್ರೊಫೆಸರ್ ಅಲೆಕ್ಸಿಸ್ 1885ರಲ್ಲಿ ಕಂಡುಹಿಡಿದ. ದ್ರಾಕ್ಷಿಗಾಗಿ ಅದನ್ನು ಕಂಡು ಹಿಡಿಯಲಾಗಿತ್ತು. ಫ್ರಾನ್ಸಿನ ಬೋರ್ಡೋ ಎಂಬ ಪ್ರಾಂತ್ಯದ ಬೋರ್ಡೋ ವಿ.ವಿ.ಯಲ್ಲಿ ಇದನ್ನು ಸಂಶೋಧಿಸಿದ ಕಾರಣ ಇದಕ್ಕೆ ಬೋರ್ಡೋ ಎಂಬ ಹೆಸರು ಬಂತು. ಕೆನಡಾ ದೇಶದ ವಿಜ್ಞಾನಿ ಲೆನ್ಸಿ ಕೊಲ್ಮನ್ 1913 ರಿಂದ 1934ರ ತನಕ ಮೈಸೂರು ರಾಜ್ಯದ ಕೃಷಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ಇದನ್ನು ಕರ್ನಾಟಕಕ್ಕೆ ಪರಿಚಯಿಸಿ ರೈತರಿಗೆ ಮಹದೂಪಕಾರ ಮಾಡಿದ. ಅಡಿಕೆ ಬೆಳೆಗಾರರು ಈ ಇಬ್ಬರು ವಿಜ್ಞಾನಿಗಳಿಗೆ ಬದುಕಿರುವವರೆಗೆ ಚಿರಋಣಿಯಾಗಿರಬೇಕು.
ಅಡಿಕೆ ಬೆಳೆಯ ಇನ್ನೊಂದು ಮಗ್ಗುಲನ್ನು ನೋಡುವುದು ಅಗತ್ಯ.
ಸಾಂಪ್ರದಾಯಿಕ ಅಡಿಕೆ ಕೃಷಿಯಲ್ಲಿ ನೈಸರ್ಗಿಕ ಕೃಷಿ, ಜೈವಿಕ ಗೊಬ್ಬರಗಳೇ ಅಡಿಕೆ ಬೆಳೆಗೆ ಪ್ರಧಾನವಾಗಿದ್ದವು. ಆದರೆ ದುರಾಸೆಗೆ ಬಿದ್ದ ರೈತರು ಅಡಿಕೆಯ ಮತ್ತಷ್ಟು ಇಳುವರಿಗಾಗಿ ಗಿಡದ ಬುಡಕ್ಕೆ ಮಾರಕ ರಾಸಾಯನಿಕ ಗೊಬ್ಬರಗಳ ಸುರಿದರು ಮತ್ತು ತುದಿಗೂ ದ್ರವ್ಯಗಳ ಸಿಂಪಡಿಸಿದರು. ಇದರಿಂದಾಗಿ ಒಂದೆಡೆ ಮಣ್ಣು ತನ್ನ ಪೋಷಕಾಂಶ ಫಲವತ್ತತೆಗಳ ಕಳೆದುಕೊಂಡರೆ ಮಣ್ಣನ್ನು ಹದಗೊಳಿಸುವ ಎರೆಹುಳು ಮತ್ತೊಂದೋ ಮಾಯವಾಗಿದ್ದು, ಬೋರ್ಡೋ ಜೊತೆಗೆ ಕೆಲವು ರೈತರು ಬೆರೆಸುವ ತೀಕ್ಷ್ಣ ತರಹದ ಕೀಟನಾಶಕಗಳಿಂದ ಜೇನುನೊಣ ಸೇರಿದಂತೆ ಇತರ ಕ್ರಿಮಿಕೀಟಗಳು ತೋಟ ಪರಿಸರದಲ್ಲಿ ಕಾಣದಾಗುತ್ತಿವೆ. ಇದು ಮಾತ್ರವಲ್ಲ ತೋಟದ ಹತ್ತಿರದಲ್ಲಿ ನದಿ ತೋಡುಗಳಿದ್ದರೆ ಸಿಂಪರಣೆಯ ಹೊತ್ತಲ್ಲಿ ಅದರ ತುಂತುರು ಹನಿಗಳು ನೀರಿಗೆ ಹಾರಿ ಉದ್ದಕ್ಕೂ ಜಲಜೀವಿಗಳು ಸತ್ತು ಹೋಗುವ ಘಟನೆಗಳು ನಡೆಯುತ್ತಿರುತ್ತವೆ. ಪರಿಣಾಮ ಜೈವಿಕ ನಿಯಂತ್ರಣ ವ್ಯವಸ್ಥೆಯೊಂದು ತಪ್ಪಿ ಹೋಗಿರಬೇಕು.
ಹಳದಿ ರೋಗದಿಂದಾಗಿ ನಮ್ಮ ಎಲ್ಲಾ ತೋಟಗಳು ಇಲ್ಲವಾಗುತ್ತಿರುವ ಈ ಹೊತ್ತಲ್ಲಿ ನಡೆಯುತ್ತಿರುವ ಸಂಶೋಧನೆಗಳ ಫಲಿತಾಂಶ ಮಾತ್ರ ಶೂನ್ಯ. ಆದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತಷ್ಟು ರಾಸಾಯನಿಕಗಳನ್ನು ಶಿಫಾರಸು ಮಾಡಲಾಗುತ್ತಿದ್ದು ಇದರಿಂದಾಗಿ ತೋಟಗಳ ಪರಿಸ್ಥಿತಿ ಇನ್ನಷ್ಟು ಹದಗಡಲಿದೆ. ಪರಿಸರಕ್ಕೆ ತೀವ್ರವಾಗಿ ಹಾನಿ ಎಸುಗುವ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕ, ಸಿಲಿಂದ್ರ ನಾಶಕಗಳನ್ನು ರೈತರು ಮಿತಿಗೆ ಒಳಪಡಿಸದಿದ್ದರೆ ಅಥವಾ ಪೂರ್ಣ ಪ್ರಮಾಣದಲ್ಲಿ ತೊರೆಯದಿದ್ದರೆ ಮುಂದೊಂದು ದಿನ ಈ ಭಾಗದ ಕೃಷಿ ಭೂಮಿಯೇ ಬರಡು ನೆಲವಾಗಲಿದೆ.
ಕ್ಷಮಿಸಿ,
ಮುಂದಿನ ತಲೆಮಾರು ನಮ್ಮನ್ನು ಶಪಿಸದಿರಲಿ…
(ಗೋಪಾಲ್ ಪೆರಾಜೆ ಅವರು ಪ್ತಗತಿಪರ ಕೃಷಿಕರು ಹಾಗು ಲೇಖಕರು)