ಡಾ.ಸುಂದರ ಕೇನಾಜೆ.
ಇತ್ತೀಚೆಗೆ ಪತ್ರಿಕೆಯಲ್ಲೊಂದು ವರದಿ ಪ್ರಕಟಗೊಂಡಿತ್ತು. ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ, ಆಂದ್ರಪ್ರದೇಶಕ್ಕೆ ಅಧ್ಯಯನ ತಂಡ ಕಳುಹಿಸಿ ಕೊಡುವ ಬಗ್ಗೆ. ಇಂತಹಾ ವರದಿಗಳು ತುಳುವರಿಗೆ ಸಂತಸ ತರುವ ಸಂಗತಿಗಳು. ಕಳೆದ ಮೂವತ್ತು-ನಲವತ್ತು ವರ್ಷಗಳಿಂದ ತುಳುಭಾಷೆಗೆ ಸಂಬಂಧಿಸಿ ಮುನ್ನಲೆಯಲ್ಲಿ ಇರುವ ಎರಡು ವಿಷಯಗಳೆಂದರೆ, ಒಂದು ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು, ಇನ್ನೊಂದು
ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು. ಒಂದು ಕೇಂದ್ರಕ್ಕೆ ಸಂಬಂಧಿಸಿದ್ದು, ಇನ್ನೊಂದು ರಾಜ್ಯದ್ದು. ಒಂದಕ್ಕೆ ರಾಜ್ಯದ ಜನಪ್ರತಿನಿಧಿಗಳೆಲ್ಲರ ಬೆಂಬಲಬೇಕು, ಇನ್ನೊಂದಕ್ಕೆ ಕರಾವಳಿಯವರು ಒಟ್ಟಾಗಬೇಕು.
2003ರಲ್ಲಿ ಎಂಟನೇ ಪರಿಚ್ಛೇದಕ್ಕೆ ಸಂಬಂಧಿಸಿ ತುಳುನಾಡಿನಿಂದ ನಾವೆಲ್ಲ ದೆಹಲಿಗೊಂದು ನಿಯೋಗ ಹೋಗಿದ್ದೆವು. ದೆಹಲಿಯಲ್ಲಿ ಬಹಳ ಉನ್ನತ ಮಟ್ಟದ ಸಮಾವೇಶ ಹಾಗೂ ಸಭೆಯೂ ನಡೆದಿತ್ತು. ಇನ್ನೇನೋ ತುಳುಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರಿಯೇ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಪ್ರಭಾವ-ಪ್ರಚಾರ ಪಡೆಯಿತ್ತು. ಆದರೆ ವರ್ಷ ಇಪ್ಪತ್ತೆರಡು ಕಳೆದರೂ ಹಕ್ಕೊತ್ತಾಯವಂತೂ ನಿಲ್ಲಲೇ ಇಲ್ಲ. ಈಗಂತೂ ಇಂತಹಾ ಹಕ್ಕೊತ್ತಾಯ ಮಾಡುವ ಭಾಷೆಗಳ ಪಟ್ಟಿಯೂ ಉದ್ದವಾಗಿದೆ. ಹಾಗಾಗಿ ತುಳುವಿಗೆ ಸಿಗುವ ಈ ಮಾನ್ಯತೆಯ ಉತ್ಸಾಹವೂ ಕ್ಷಿಣಿಸುತ್ತಿದೆ.
ಈ ಮಧ್ಯೆ ರಾಜ್ಯದ ಎರಡನೇ ಭಾಷೆಯಾಗಿ ತುಳುವನ್ನು ಸೇರಿಸಬೇಕೆನ್ನುವ ಹಕ್ಕೊತ್ತಾಯವೂ ತೀವ್ರಗೊಳ್ಳುತ್ತಿದೆ(ಹಾಗೇ ಯಕ್ಷಗಾನವನ್ನು ಅಧಿಕೃತ ಕಲೆಯಾಗಿಯೂ ಘೋಷಿಸಬೇಕು) ಹಾಗೇ ನೋಡಿದರೆ, ಈ ಬೇಡಿಕೆ ಅಪ್ರಸ್ತುತವೇನೂ ಅಲ್ಲ. ಸಮರ್ಥಿಸುವುದಕ್ಕೆ ಹಲವು ಕಾರಣಗಳೂ ಇವೆ. ಕರ್ನಾಟಕವನ್ನೊಮ್ಮೆ ಗಮನಿಸಿ, ಎಷ್ಟು ರಾಜಮನೆತನಗಳು ಇಲ್ಲಿ ಆಳ್ವಿಕೆ ನಡೆಸಿಲ್ಲ? ಅವುಗಳಲ್ಲಿ ಬಹುತೇಕ ಕನ್ನಡ ಮೂಲದವುಗಳು. ಆದರೆ ಪಶ್ಚಿಮ ಫಟ್ಟದ ಈ ಕೆಳಭಾಗವನ್ನು ಆಳಿದ ಸಾಮಂತ ರಾಜರಗಳು ಮಾತ್ರ ತುಳುರಾಜ್ಯವೆಂದು ಹೆಸರಿನಲ್ಲಿ, ಕನ್ನಡ ರಾಜರುಗಳೊಂದಿಗೆ ಅನುಸಂಧಾನ ಮಾಡಿಕೊಂಡಿದ್ದರು. ತುಳುವನ್ನೇ ಆಡಳಿತ(ಪ್ರಥಮ) ಭಾಷೆಯಾಗಿಟ್ಟು ಸಾವಿರಾರು ವರ್ಷ ಆಳ್ವಿಕೆ ನಡೆಸಿದರು. ಆದರೆ ಸ್ವಾತಂತ್ರ್ಯ ಮತ್ತು

ಭಾಷಾವಾರು ಪ್ರಾಂತ್ಯ ರಚನೆಯ ಇತ್ತೀಚಿನ ಕಾಲಾನಂತರ ಈ ಪ್ರಥಮ ಭಾಷೆಯ ಸ್ಥಾನವನ್ನು ಕನ್ನಡ ಪಡೆದುಕೊಂಡಿತು. ಪರಿಣಾಮ, ತುಳು ಎನ್ನುವ ಅಧಿಕೃತ ಭಾಷೆ ಮೂಲೆ ಸೇರಿತು. ಆದರೂ ತುಳುವರ ಭಾಷಾಭಿಮಾನದಿಂದ ಇಂದು ಜಗತ್ತಿನಾದ್ಯಂತ ತುಳು ಮಾತನಾಡುವವರ ಸಂಖ್ಯೆ ಕೋಟಿಗೆ ತಲುಪುತ್ತಿದೆ. ಅದೇ ಕರಾವಳಿಯಲ್ಲಿ ಸುಮಾರು 49 ಶೇಖಡಾದಷ್ಟಿದೆ. ಕರ್ನಾಟಕದಲ್ಲಿ ಕನ್ನಡ ಹಾಗೂ ಅನ್ಯ ರಾಜ್ಯಾಶ್ರಯವಿರುವ (ಉರ್ದು, ತೆಲುಗು, ತಮಿಳು)ಭಾಷೆಗಳನ್ನು ಬಿಟ್ಟರೆ, ಅತೀ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ತುಳು ಪ್ರಥಮ ಸ್ಥಾನದಲ್ಲಿದೆ.
ತುಳು ಪಂಚದ್ರಾವಿಡ ಭಾಷೆಗಳಲ್ಲಿ ಒಂದು. ಭಾಷಾವಿಜ್ಞಾನಿಗಳ ಪ್ರಕಾರ, ದ್ರಾವಿಡ ಭಾಷಾ ಕುಟುಂಬದ ಪ್ರತ್ಯೇಕೀಕರಣ ಪ್ರಕ್ರಿಯೆಯಲ್ಲಿ ತುಳು ಎರಡನೇ ಭಾಷೆಯಾಗಿ(2500ವರ್ಷಗಳಿಗೂ ಮುನ್ನ) ಹೊರಬಂತು. ಅಲ್ಲದೇ ಲಿಖಿತ ಕಾವ್ಯ(ತಿಂಗಳಾರಿ ಲಿಪಿ) ಪರಂಪರೆಯನ್ನು ಸುಮಾರು 12ನೇ ಶತಮಾನಕ್ಕಿಂತಲೂ ಪೂರ್ವದಲ್ಲಿ ಆರಂಭಿಸಿತ್ತು.
ತುಳು ಜಾನಪದದ ವಿಚಾರಕ್ಕೆ ಬಂದಾಗಲೂ ಇದು ಅತ್ಯಂತ ಸಂಮೃದ್ಧ, ಸೀಮಿತ ಪ್ರಾದೇಶಿಕ ವ್ಯಾಪ್ತಿಯಲ್ಲಿದ್ದರೂ ಕನ್ನಡವನ್ನು ಹೊರತುಪಡಿಸಿದರೆ, ತುಳುವಿನ ಜಾನಪದ ಜಗತ್ತು ಆಶ್ಚರ್ಯ ಹುಟ್ಟಿಸುವಂತದ್ದು. ಏಳು ರಾತ್ರಿ-ಹಗಲು ಹಾಡಿದರೂ ಮುಗಿಯದ ಜನಪದ ಮಹಾಕಾವ್ಯಗಳು, ಸಾವಿರಾರು ಪಾಡ್ದನಗಳು(ಕಥನ ಕಾವ್ಯ), ಅಷ್ಟೇ ವಿಸ್ತೃತ ಕಬಿತ(ನಾಟಿ ಹಾಡು), ಕಥೆ, ಗಾದೆ, ಒಗಟು, ಉರಲ್(ಉಳುಮೆಯ ಹಾಡು) ಐತಿಹ್ಯ, ಭೂತಾರಾಧನೆಗೆ ಸಂಬಂಧಿಸಿದ ನುಡಿಕಟ್ಟು, ಕುಣಿತದ ಹಾಡು, ಯಕ್ಷಗಾನದ ವಾಕ್ಪರಂಪರೆ ಎಲ್ಲವೂ ದಕ್ಷಿಣ ರಾಜ್ಯಗಳ ಪ್ರಮುಖ ಭಾಷೆಗಳಷ್ಟೇ ಪ್ರಭಾವಶಾಲಿಯಾದುದು. ಇವುಗಳ ಸಂಗ್ರಹ ಮತ್ತು ಅಧ್ಯಯನದಲ್ಲೂ ತುಳುನಾಡು ಹಿಂದೆ ಬಿದ್ದಿಲ್ಲ. ಸಮೀಕ್ಷೆಯೊಂದರ ಪ್ರಕಾರ, ದಕ್ಷಿಣ ಭಾರತದ ಉಪಭಾಷೆಗಳ ಜಾನಪದವೊಂದು ಇಷ್ಟರಮಟ್ಟಿಗೆ ಅಧ್ಯಯನಕ್ಕೊಳಗಾದ ಹಾಗೂ ಅಸಂಖ್ಯ ಅಧ್ಯಯನಕಾರರಿಗೆ ಆಶ್ರಯ ನೀಡಿದ ಇನ್ನೊಂದು ಭಾಷೆಯೇ ಇಲ್ಲ.
ಆಧುನಿಕ ರಂಗಭೂಮಿಗಳನ್ನು ಗಮನಿಸಿದಾಗಲೂ ತುಳು ಎಲ್ಲೂ ಹಿಂದೆ ಬಿದ್ದಿಲ್ಲ. ಕರಾವಳಿಯ ಪ್ರಧಾನ ಕಲೆಯಾದ ಯಕ್ಷಗಾನ ರಂಗವೂ ಸುಮಾರು 150 ವರ್ಷಗಳ ಹಿಂದಿನಿಂದಲೇ ತುಳು ಭಾಷೆಯನ್ನು ಗಟ್ಟಿಗೊಳಿಸುತ್ತಾ ಬಂದಿದೆ. 1887ರಲ್ಲೇ ತುಳುವಿನಲ್ಲಿ ಯಕ್ಷಗಾನ ಪ್ರಸಂಗ ಪ್ರಕಟವಾಗಿದೆ(ಸಂಕಯ್ಯ ಭಾಗವತರ ಪಂಚವಟಿ ವಾಲಿ ಸುಗ್ರೀವೆರೆ ಕಾಳಗೋ) ಅಲ್ಲಿಂದ ಮುಂದುವರಿದ ಈ ಪ್ರಸಂಗಗಳ ಪಯಣದಲ್ಲೂ ಚಾರಿತ್ರಿಕ ದಾಖಲೆಗಳಿವೆ. 80-90ರ ದಶಕದ ಈ ಓಟವಂತೂ ವಿಶ್ವ ರಂಗಭೂಮಿಯಲ್ಲೇ ವಿಸ್ಮಯಕಾರಿ ಸಾಧನೆ. ಇದೇ ರೀತಿ ನಾಟಕ ರಂಗದಲ್ಲೂ ತುಳುವಿನ ಕೊಡುಗೆ ಸಣ್ಣದೇನೂ ಅಲ್ಲ. ಕನ್ನಡದ ಕಂಪನಿ ನಾಟಕಗಳಿಗೆ ಸರಿಸಮಾನವಾಗಿ 1933ರಿಂದ ಇಂದಿನವರೆಗೂ ತುಳು ಭಾಷೆಯ ನಾಟಕಗಳು ಅಮೋಘ ಪ್ರದರ್ಶನಗಳನ್ನೇ ಕೊಟ್ಟಿವೆ. ಆಶ್ಚರ್ಯವೆಂದರೆ, ಎಂಬತ್ತರ ದಶಕದಲ್ಲಿ ಕನ್ನಡ ವೃತ್ತಿ ರಂಗಭೂಮಿ ಹವ್ಯಾಸದತ್ತ ಹೊರಳಲಾರಂಭಿಸಿದರೆ, ತುಳು ರಂಗಭೂಮಿ ಹವ್ಯಾಸದಿಂದ ವೃತ್ತಿಯತ್ತ ಮುಖ ಮಾಡಿತು.
ತುಳುಭಾಷೆ ಸಿನಿಮಾ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯೂ ಅಸಾಮಾನ್ಯವಾದುದು. 1971ರಿಂದ ಆರಂಭವಾದ ತುಳು ಸಿನಿಮಾರಂಗ ಮುಂದೆ ಕೋಸ್ಟಲ್ ವುಡ್ ಆಗಿ ಬೆಳೆದ ಸಾಧನೆಯ ಹೆಜ್ಜೆಗಳೂ ಗಮನಾರ್ಹ. ಕೇವಲ ಮೂರು ಜಿಲ್ಲೆಗಳಲ್ಲಿ ಅಧಿಕೃತ ಬಳಕೆಯಲ್ಲಿರುವ ಈ ಭಾಷೆಯಲ್ಲಿ ನೂರಕ್ಕೂ ಹೆಚ್ಚಿನ ಸಿನಿಮಾಗಳು ತೆರೆ ಕಂಡದ್ದು ಹಾಗೂ ರಾಜ್ಯ-ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದು ಕಡಿಮೆ ಸಾಧನೆಯಲ್ಲ. ಇದು ಈ ಭಾಷೆಯ ಗಟ್ಟಿತನಕ್ಕೆ ಸಾಕ್ಷಿ. ಕನ್ನಡದ ಅನೇಕ ಶ್ರೇಷ್ಠ ನಟ-ನಟಿಯರನ್ನು, ನಿರ್ದೇಶಕರನ್ನು ಸೃಷ್ಟಿಸಿದ, ದಕ್ಷಿಣ ಭಾರತದ(ಹಿಂದಿಯ ಕೂಡ) ಉನ್ನತ ಹಿನ್ನೆಲೆ ಗಾಯಕರ ಕಂಠಗಳಿಗೂ ಒಲಿದ ಹಿರಿಮೆ ತುಳು ಭಾಷೆಗಿದೆ.
ಇಲ್ಲಿಯ ಮೂಲನಿವಾಸಿಗಳಿಂದ ಹಿಡಿದು ಪಾರುಪತ್ಯಗಳ ಯಜಮಾನಿಕೆಯನ್ನೂ ಬಳಸುತ್ತಾ ಬಂದು ತುಳು, ಆಧುನಿಕ ಸಾಹಿತ್ಯ ಪರಂಪರೆಯನ್ನೂ ಮುಂದುವರಿಸಿದೆ. ಅನಾದಿಕಾಲದ ಲಿಪಿಯ ಕೊರತೆಯನ್ನೂ ಮೀರಿ ಮಹಾಕಾವ್ಯದಿಂದ ಹಿಡಿದು ಕನ್ನಡ ಸಾಹಿತ್ಯ ಪರಂಪರೆಯ ಎಲ್ಲ ಪ್ರಕಾರಗಳನ್ನೂ ಇದು ಮುಡಿಗೇರಿಸಿದೆ. ಅಕಾಶವಾಣಿ, ದೂರದರ್ಶನ, ಭಾಷಣ, ಉಪನ್ಯಾಸ ಎಲ್ಲಬಿಟ್ಟು ರಾಜಕೀಯ ಪ್ರಚಾರಗಳೂ ತುಳುವಿನಲ್ಲೇ ನಡೆಸಬಹುದಾದ ವಿಶಿಷ್ಟ ಸಂವೇದನಾಶೀಲ ಭಾಷೆಯಿದು. ಹಾಗಾಗಿ ಇಡೀ ರಾಜ್ಯಕ್ಕೆ ಕರಾವಳಿ ಬ್ಯಾಂಕಿಂಗ್, ಶಿಕ್ಷಣ, ಸಹಕಾರಿ, ವಾಣಿಜ್ಯ, ಮೀನುಗಾರಿಕೆಯಂತಹಾ ಪ್ರಗತಿಪರ ಕೊಡುಗೆಗಳನ್ನು ನೀಡುತ್ತಾ ಬಂದಂತೆ, ಒಂದು ಪ್ರತ್ಯೇಕ ಭಾಷಾ ಸಂಸ್ಕೃತಿಯನ್ನೂ ಕನ್ನಡತನಕ್ಕೆ ಕೊಟ್ಟಿದೆ. ಆದ್ದರಿಂದ ತುಳುಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗುವ ಎಲ್ಲ ಅರ್ಹತೆ ಹಾಗೂ ಅದನ್ನು ಪಡೆಯುವ ಹಕ್ಕು ಎರಡೂ ಇದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಸಮಸ್ತ ಜನಪ್ರತಿನಿಧಿಗಳು, ತುಳು ಸಂಘಟನೆಗಳು ಈ ವರದಿಗೆ ಪೂರಕವಾದ ಇಚ್ಛಾಶಕ್ತಿಯನ್ನು ಪ್ರಕಟಿಸಬೇಕು, ಕರ್ನಾಟಕದ ಸಮಸ್ತ ಜನಪ್ರತಿನಿಧಿಗಳು ಹಾಗೂ ಭಾಷಾ ಬಾಂಧವರು ಸೋದರಿ ಭಾಷೆಯ ಬೆಳವಣಿಗೆಯೊಂದಕ್ಕೆ ಅವಕಾಶ ನೀಡಬೇಕು ಇದೇ ಸಮಸ್ತ ತುಳುವರ ಆಶಯ ಕೂಡ.

(ಡಾ.ಸುಂದರ ಕೇನಾಜೆ ಲೇಖಕರು, ಅಂಕಣಕಾರರು, ಜಾನಪದ ಸಂಶೋಧಕರು)