ಬೆಳ್ಳಾರೆಯಿಂದ 1837 ಮಾರ್ಚ್ 30 ರಂದು ಕಾಸರಗೋಡನ್ನು ಲಗ್ಗೆ ಹಾಕಲು ಹೊರಟ ತಂಡವು ಅದರಲ್ಲಿ ಇನ್ನಿಲ್ಲದ ಯಶಸ್ಸನ್ನು ಕಂಡಿತು. ಕಾಸರಗೋಡು , ಕುಂಬ್ಳೆ , ಮಂಜೇಶ್ವರಗಳನ್ನು ಗೆದ್ದ ಆ ರೈತರು ಪುತ್ತೂರಿನಿಂದ ಸೇನೆಯು ಮಂಗಳೂರು ಸೇರುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿತು. ಈ ನಡುವೆ ಚಂದ್ರಗಿರಿ ಫೆರಿ, ಬಿಸಲೆ ಪಾಸ್ ಮತ್ತಿತರ ದಾರಿಗಳ ಮೂಲಕ ನಡೆಯುತ್ತಿದ್ದ ಕಂಪೆನಿಯ ಟಪ್ಪಾಲು ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿಫಲಗೊಳಿಸಲಾಗಿತ್ತು . ಹೋರಾಟಗಾರರು
ಪ್ರತಿಯೊಂದು ಉಕ್ಕಡದಲ್ಲಿಯೂ , ಪ್ರತಿಯೊಂದು ಗಡಿಯಲ್ಲಿಯೂ ಕಾವಲು ಪಡೆಯನ್ನು ನಿಯೋಜಿಸಿದ್ದರು.ಉದ್ದೇಶಿತ ಹೋರಾಟ ಪ್ರಥಮ ಹಂತದಲ್ಲಿ ಅಭೂತಪೂರ್ವ ಜಯವನ್ನು ಗಳಿಸಿ ಸುಳ್ಯ,ಸುಬ್ರಹ್ಮಣ್ಯ , ಬಿಸಲೆ,ಉಪ್ಪಿನಂಗಡಿ , ಬೆಳ್ತಂಗಡಿ, ಕುಂಬ್ಳೆ , ಕಾಸರಗೋಡು,ಮಂಜೇಶ್ವರ , ಬಂಟ್ವಾಳ, ಮುಲ್ಕಿ ,ಸುರತ್ಕಲ್ , ಪುತ್ತೂರು ಈ ಎಲ್ಲಾ ಊರುಗಳೂ ರೈತಸೈನ್ಯದ ಕೈವಶವಾಗುತ್ತವೆ.ಕೊನೆಗೆ ನಡೆದ ಮಂಗಳೂರು ಆಕ್ರಮಣದಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಮತ್ತಿತರರು ಅಪಾರ ಸಾಹಸವನ್ನು ತೋರಿಸುತ್ತಾರೆ. ಕೆನರಾ ಜಿಲ್ಲೆಯ ಕೇಂದ್ರಸ್ಥಾನ ಪತನಗೊಳ್ಳುತ್ತದೆ. ಆ ಸಮಯದಲ್ಲಿ ಸಂಗ್ರಾಮದ ಯೋಧರ ಸಂಖ್ಯಾಬಲ 10 ರಿಂದ 12 ಸಾವಿರಷ್ಟು ಇತ್ತು . ಎಂದು ಬ್ರಿಟಿಷ್ ದಾಖಲೆಗಳು ತಿಳಿಸುತ್ತವೆ.ಮಂಗಳೂರನ್ನು ಆಕ್ರಮಿಸಿದ ಹೋರಾಟಗಾರರ ಸೈನ್ಯ ಮೊದಲು ಮಾಡಿದ ಕಲಸವೆಂದರೆ ಲೈಟ್ಹೌಸ್ ಪ್ರದೇಶದಲ್ಲಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ
7 ಬಾವುಟವನ್ನು ಕೆಳಗಿಳಿಸಿ ಹಾಲೇರಿ ರಾಜಲಾಂಛನದ ಧ್ವಜವನ್ನು ಅರಿಸಲಾಗುತ್ತದೆ . ಹೋರಾಟದ ಮುಖ್ಯಸ್ಥರಲ್ಲೊಬ್ಬನಾದ ಗುಡ್ಡೆಮನೆ ತಮ್ಮಯ್ಯರು ರಾಮಯ್ಯ ಗೌಡರ ಸೂಚನೆಗೆ ಅನುಗುಣವಾಗಿ ಈ ಕಾರ್ಯವನ್ನು ನೆರವೇರಿಸಿ ವಿಜಯದ ಸಂಕೇತವನ್ನು ಸಾರುತ್ತಾರೆ.ಅಂದಿನಿಂದ ಮಂಗಳೂರಿನ ಈ ಉನ್ನತ ಮತ್ತು ಪ್ರಮುಖ ಪ್ರದೇಶವು ‘ಬಾವುಟ ಗುಡ್ಡ’ ಎಂಬ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತದೆ. ನಂತರ ಸೈನ್ಯವು ಇಂಗ್ಲೀಷರ ಕಟ್ಟಡಗಳನ್ನು , ಕುರುಹುಗಳನ್ನು ಸುಟ್ಟು ಹಾಕುತ್ತದೆ . ಸೆರೆಮನೆಯನ್ನು ಒಡೆದು , ಬ್ರಿಟಿಷ್ ನ್ಯಾಯವ್ಯವಸ್ಥೆಯಲ್ಲಿ ವಿನಾಕಾರಣ ಶಿಕ್ಷೆಗೆ ಈಡಾಗಿದ್ದ ಸ್ಥಳೀಯ ಜನರನ್ನು ಮುಕ್ತಗೊಳಿಸಲಾಗುತ್ತದೆ . ಅವರು ಸ್ವಂತ ಇಚ್ಛೆಯಿಂದ ಸೈನ್ಯಕ್ಕೆ ಸೇರ್ಪಡೆಗೊಳ್ಳುತ್ತಾರೆ . ನಂತರ ಮಂಗಳೂರಿನ ಜನವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ . ಆಡಳಿತವನ್ನು ವಹಿಸಿಕೊಂಡ ಹೋರಾಟಗಾರರು ರೈತರಿಗೆ ಕಂದಾಯ ವಿನಾಯತಿಯನ್ನು ಘೋಷಿಸುತ್ತಾರೆ.ಮಂಗಳೂರಿನ ವರ್ತಕರ ಬೆಂಬಲವನ್ನು ಪಡೆದುಕೊಳ್ಳುತ್ತಾರೆ.ಎಲ್ಲವೂ ಸುಗಮವಾಗಿ ನಡೆಯುತ್ತದೆ . ಮಂಗಳೂರನ್ನು ಭದ್ರಪಡಿಸಿದ ನಂತರ ಹೋರಾಟಗಾರರ ಹಲವು
ಪ್ರಮುಖರು ಮಡಿಕೇರಿ ಪಟ್ಟಣಕ್ಕೆ ಲಗ್ಗೆ ಹಾಕಲು ಸುಳ್ಯ , ಸುಬ್ರಹ್ಮಣ್ಯದ ಕಡೆ ಹಿಂದಿರುಗುತ್ತಾರೆ. ಕೂಜುಗೋಡು ಅಪ್ಪಯ್ಯ ಗೌಡ ಮತ್ತು ಕೂಜುಗೋಡು ಮಲ್ಲಪ್ಪ ಗೌಡ ಇವರ ನೇತೃತ್ವದಲ್ಲಿ ಬಿಸಿಲೆ ಘಾಟಿಯ ಮುಖಾಂತರ ರೈತಸೈನ್ಯ ಮಡಿಕೇರಿಯ ಕಡೆ ಸಾಗಿತು.ಬಲಮುರಿಯ ಗುಡ್ಡೆಮನೆ ಅಪ್ಪಯ್ಯ ಗೌಡ ಮಡಿಕೇರಿಗೆ ಮುತ್ತಿಗೆ ಹಾಕಲು ಜನರನ್ನು ಒಟ್ಟು ಸೇರಿಸಲು ಪಾಡಿ ನಾಲ್ಕುನಾಡಿನ ಕಡೆ ತೆರಳಿದರು. ಆದರೆ ಅಷ್ಟು ಹೊತ್ತಿಗಾಗಲೇ ಮೇಜರ್ ಡ್ರಾಯರ್ನ ಬೆಟಾಲಿಯನ್ ಪಾಂಡವಪುರದಿಂದ ಮಡಿಕೇರಿಯನ್ನು ತಲಪಿಯಾಗಿತ್ತು.ಮಡಿಕೇರಿಯ ಉತ್ತರ ದಿಕ್ಕಿನ ಉಕ್ಕಡದ ಬಳಿ ಉಗ್ರ ಗುಂಡಿನ ಕಾಳಗ ನಡೆಯಿತು.ಆದರೆ ರೈತಸೇನೆಯ ಕಾದಾಟ ಕೊನೆಗೂ ಫಲಪ್ರದವಾಗಲಿಲ್ಲ. ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತಿತರರ ಕೆಚ್ಚೆದೆಯ ಪ್ರತಾಪವು ಸಾಫಲ್ಯವನ್ನು ಪಡೆಯಲಿಲ್ಲ. ಸಂಗ್ರಾಮದಲ್ಲಿ ವೀರೋಚಿತ ಸೋಲು ಎದುರಾಯಿತು.ಅತ್ತ ಮಂಗಳೂರಿನ ಬ್ರಿಟೀಷರ ಸಹಾಯಕ್ಕೆ ಮುಂಬಯಿಯಿಂದ ಸೈನ್ಯ ,ಮದ್ದುಗುಂಡು,ಸಂಗ್ರಾಮ ಸಾಧನಗಳು ಬರುವ ವ್ಯವಸ್ಥೆಯಾಯಿತು. ಸೈನಿಕರನ್ನೂ ,ಸಾಮಾನು ಸರಂಜಾಮನ್ನು ಒಯ್ಯಲು ಜಹಜುಗಳು ಸಿದ್ಧವಾದವು , ಧಾರವಾಡ , ಬೆಳಗಾಂಗಳಿಂದ ಸೈನ್ಯಗಳು ಮಂಗಳೂರಿಗೆ ಹೊರಟವು. ಕೆನರಾ ಸೈನ್ಯಗಳ ನಾಯಕ ಬ್ರಿಗೇಡಿಯರ್ ಅಲನ್ಗೆ ಮಂಗಳೂರಿನ ಸಮಾಚಾರ ಹೋಯಿತು . ಕೂಡಲೇ ಕರ್ನಲ್ ಗ್ರೀನ್ ನಾಯಕತ್ವದಲ್ಲಿ ಸೈನ್ಯವನ್ನು ಮಂಗಳೂರಿಗೆ ಕಳುಹಿಸಿದ ಮುಂಬೈ ಕಡೆಯಿಂದಲೂ ಸೈನ್ಯ ಬಂತು.ಎಪ್ರಿಲ್ 16 ರ ವೇಳೆಗೆ ಬ್ರಿಟಿಷ್ ಅಧಿಕಾರಿಗಳೆಲ್ಲ ಕಲೆತು ವಿಚಾರ ಮಾಡಿ , ಹೋರಾಟಗಾರರನ್ನು ಎದುರಿಸುವ ನಿಶ್ಚಯ ಮಾಡಿದರು.
(ಮುಂದುವರಿಯುವುದು)
ನಿರೂಪಣೆ:ಗಂಗಾಧರ ಕಲ್ಲಪಳ್ಳಿ.
ಮಾಹಿತಿ ಕೃಪೆ: ಹಿರಿಯ ಸಾಹಿತಿ ವಿದ್ಯಾಧರ ಕುಡೆಕಲ್ಲು ಅವರ ‘ಅಮರ ಸುಳ್ಯ -1837’ ಕೃತಿ ಹಾಗು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಪ್ರಕಟಿಸಿದ ಕೈಪಿಡಿ.