ಸುಳ್ಯ:ಇತಿಹಾಸದ ಪುಟಗಳನ್ನು ತೆರೆದಾಗ ನಮಗೆ ತಿಳಿಯುವುದು ಬ್ರಿಟೀಷರ ದಬ್ಬಾಳಿಕೆಯ ಸಂಕೊಲೆಯಲ್ಲಿ ನಲುಗಿದ ಭಾರತೀಯರ ಧೈರ್ಯದ ಶಬ್ದ, ವಿರೋಧ ಧ್ವನಿ ಮೊದಲು ಮೊಳಗಿದ್ದು 1857ರಲ್ಲಿ ಎಂದು. ಆ ಹೋರಾಟವನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಇತಿಹಾಸಕಾರರು ಪರಿಗಣಿಸಿದ್ದಾರೆ.ಆದರೆ ಮೊದಲ ಸ್ವಾತಂತ್ರ್ಯ ಸಮರ ನಡೆಯುವುದಕ್ಕಿಂತ ಎರಡು ದಶಕಗಳ ಮೊದಲೇ ನಡೆದಿತ್ತು ರೈತಾಪಿ ವರ್ಗದವರು ನಡೆಸಿದ ಹೋರಾಟ ‘ಅಮರ ಸುಳ್ಯ ದಂಗೆ’ ಅಥವಾ ಕೊಡಗು-ಕೆನರಾ ಬಂಡಾಯ.1837ರಲ್ಲಿ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ
ನಡೆದ ಆ ಹೋರಾಟದಲ್ಲಿ ಬ್ರಿಟೀಷರನ್ನು ಸೋಲಿಸಿ ಮಂಗಳೂರಿನ ಬಾವುಟಗುಡ್ಡೆಯಲ್ಲಿ ವಿಜಯ ಪತಾಕೆಯನ್ನು ಆರಿಸಿ 13 ದಿನಗಳ ಕಾಲ ಮಂಗಳೂರನ್ನು ಆಳಿದ್ದರು. ಭಾರತ ಸ್ವಾತಂತ್ರ್ಯದ 75 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವಾಗ ಅಮರ ಸುಳ್ಯ ಹೋರಾಟದ ನೆನಪುಗಳು ಶಾಶ್ವತವಾಗಿ ಉಳಿಯಲು ಹಲವು ಯೋಜನೆಗಳನ್ನು ರೂಪಿಸಲಾಗುತಿದೆ.ಅಂದಿನ ಹೋರಾಟದ ನೇತೃತ್ವ ವಹಿಸಿದ್ದ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮಂಗಳೂರಿನಲ್ಲಿ ಸ್ಥಾಪಿಸಲು ಸಿದ್ಧತೆ ನಡೆಸಿರುವುದು ಅದರ ಪ್ರಮುಖ ಭಾಗ.ಅಂದಿನ ಹೋರಾಟ ಏನು, ಹೇಗಿತ್ತು ಆ ಕದನ. ಅಮರ ಸುಳ್ಯ ಹೋರಾಟದ ಪುಟಗಳೆಡೆಗೆ ಒಂದು ಕಿರು ನೋಟ ಇಲ್ಲಿದೆ.
ಸೂರ್ಯ ಮುಳುಗದ ದೇಶವೆಂದು ಪ್ರಸಿದ್ಧಿಯನ್ನು ಪಡೆದಿದ್ದ ಬ್ರಿಟಿಷರನ್ನು ಬಗ್ಗು ಬಡೆದು ಎರಡು ವಾರಗಳ ಕಾಲ ಆಂಗ್ಲರಿಂದ ವಿಮೋಚನೆಯನ್ನು ಗಳಿಸಿದ ನಮ್ಮೂರಿನ ಜನರ ಅಸೀಮ ಸಾಹಸದ ಕಥೆಯು ನಮ್ಮ ದೇಶ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಹೊತ್ತಲ್ಲಿ ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ.
ಮೈಸೂರು ಸಂಸ್ಥಾನದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಮಂಗಳೂರನ್ನು ತಮ್ಮ ವಶಕ್ಕೆ ಪಡೆದುಕೊಂಡು ಒಂದು ಭದ್ರ ನೆಲೆಯಾಗಿ ರೂಪಿಸಿದ್ದ ಕಾಲವದು. ಕ್ರಿ.ಶ.1799 ರಲ್ಲಿ ನಡೆದ 4 ನೇ ಮೈಸೂರು ಯುದ್ಧದ ರಣಾಂಗಣದಲ್ಲಿ ಟಿಪ್ಪು ಮಡಿದ ನಂತರ ಮಂಗಳೂರು ಸಂಪೂರ್ಣವಾಗಿ ಇಂಗ್ಲೀಷರ ಆಡಳಿತಕ್ಕೆ ಒಳಪಟ್ಟಿತ್ತು. ಅದಾದ ಕೆಲವೇ ದಿನಗಳಲ್ಲಿ ವಿಟ್ಲದ ರವಿವರ್ಮ ನರಸಿಂಹ ದೊಂಬ ಹೆಗ್ಗಡೆ ತಾನು ಸ್ವತಂತ್ರ ರಾಜನೆಂದು ಘೋಷಿಸಿ ಈ ಪ್ರದೇಶವನ್ನು ಬ್ರಿಟಿಷರಿಂದ ಬಿಡಿಸಿಕೊಳ್ಳಲು ಯುದ್ಧದಲ್ಲಿ ತೊಡಗಿ ಪುತ್ತೂರು,ಕಡಬ , ಉಪ್ಪಿನಂಗಡಿ, ಬಂಟ್ವಾಳ , ಬೆಳ್ತಂಗಡಿ, ಜಮಲಾಬಾದ್ ಕೋಟೆ ( ಗಡಾಯಿ ಕಲ್ಲು ) ಇವುಗಳನ್ನು ಆಕ್ರಮಿಸಿಕೊಂಡರೂ , ಮಂಗಳೂರನ್ನು ಗೆಲ್ಲುವ ಆತನ ಉದ್ದೇಶ ವಿಫಲವಾಯಿತು . ಅವನನ್ನು ಮತ್ತು ಅವನ ಸೇನಾಧಿಕಾರಿಯನ್ನು ಬಂಧಿಸಿದ ಇಂಗ್ಲಿಷರು ಅವರುಗಳನ್ನು ಗಲ್ಲು ಶಿಕ್ಷೆಗೆ ಒಡ್ಡುತ್ತಾರೆ. ಮುಂದೆ ಕ್ರಿ.ಶ1811 ರಲ್ಲಿ ಮಂಗಳೂರು ಮತ್ತು ಸುತ್ತಲ ಗ್ರಾಮಗಳ ರೈತರು ಅಸಹಕಾರ ಚಳುವಳಿಗೆ ಧುಮುಕಿದರು. ಆದರೆ ಇಲ್ಲಿಯ ಜನವರ್ಗದ ಸಂಪತ್ತನ್ನು ದೋಚುವುದೇ ಬ್ರಿಟಿಷರ ಮುಖ್ಯ ಗುರಿಯಾಗಿತ್ತು. ಸ್ಥಳೀಯ ಆಡಳಿತಗಾರರಿಗೆ ಮತ್ತು ಪಾಳೆಯಗಾರರಿಗೆ ಇಲ್ಲಿನ ಜನಸಮುದಾಯವು ಭಾವನಾತ್ಮಕ ಸಂಬಂಧದ
ಪ್ರಜೆಗಳಾಗಿದ್ದರೆ, ಈ ಪರಕೀಯರಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಗಳಂತೆ ಆಗಿತ್ತು.ಕೃಷಿಕರು ಬರದಿಂದ , ರೋಗಬಾಧೆಯಿಂದ, ಕೀಟಗಳ ಉಪಟಳದಿಂದ ಬೆಳೆ ನಾಶವಾಗಿ ಸಂಕಟಪಡುತ್ತಿದ್ದ ಸಮಯದಲ್ಲಿ ಅಧಿಕಾರಿ ವರ್ಗ ನಿಷ್ಕರುಣೆಯಿಂದ ಕಂದಾಯ ವಸೂಲಾತಿ, ಗೇಣಿ ವಸೂಲಾತಿಯಲ್ಲಿ ಮಗ್ನವಾಗಿತ್ತು. ಹತಾಶರಾದ ರೈತರು ಕರ ನೀಡಲು ಸಾಧ್ಯವಾಗದೆ ಪ್ರತಿಭಟನೆಯಲ್ಲಿ ತೊಡಗಿದರು.ಅತ್ಯಂತ ಶಾಂತ ರೀತಿಯಲ್ಲಿ ನಡೆದ ಈ ಪ್ರತಿರೋಧಕ್ಕೆ ಈಸ್ಟ್ ಇಂಡಿಯಾ ಕಂಪೆನಿ ಸರಕಾರ ಒಂದಷ್ಟು ಸ್ಪಂದಿಸಿತು.ಮಹತ್ತರವಾದ ಬದಲಾವಣೆಗಳಾಗದಿದ್ದರೂ , ಅಲ್ಪಸ್ವಲ್ಪ ಪರಿಹಾರದ ದಾರಿಯನ್ನು ತೋರಿಸಿದ ಬ್ರಿಟಿಷರು ಹೋರಾಟವನ್ನು ತಣ್ಣಗಾಗಿಸಿದರು. ಇದು ನಡೆದು 20 ವರ್ಷಗಳಾಗುತ್ತಿದ್ದಂತೆ ಕೆನರಾ ಜಿಲ್ಲೆಯ ಗಡಿಪ್ರದೇಶವಾದ ಇಂದಿನ ಶಿವಮೊಗ್ಗ ಜಿಲ್ಲೆಯ ನಗರ ಎಂಬ ಊರಿನಲ್ಲಿ ರೈತ ಹೋರಾಟವೊಂದು ಮೊಗ್ಗೂಡೆಯಿತು. ಮೈಸೂರು ಮುಮ್ಮುಡಿ ಕೃಷ್ಣರಾಜ ಒಡೆಯರ ಸರಕಾರದ ಕಂದಾಯ ನೀತಿಯ ವಿರುದ್ಧ ನಡೆದ ಬಂಡಾಯವದು . ತಣ್ಣನೆ ಆರಂಭವಾದ ಈ ‘ ನಗರ ರೈತದಂಗೆ ‘ ಮುಂದೆ ಉಗ್ರ ಸ್ವರೂಪವನ್ನು ಪಡೆದುಕೊಂಡು ಹಲವು ಪ್ರದೇಶಗಳಿಗೆ ವ್ಯಾಪಿಸಿತು. ಇದೇ ಸಮಯದಲ್ಲಿ ಮಂಗಳೂರಿನ ರೈತರು ಕೂಡ ಬ್ರಿಟಿಷರನ್ನು ಪ್ರತಿಭಟಿಸುವ ದಾರಿಯನ್ನು ಹಿಡಿದರು. ರೈತಾಪಿ ಮಂದಿ ಮಂಗಳೂರು ಪಟ್ಟಣದ ಹಾಗೂ ನೆರೆಯ ಗ್ರಾಮಗಳ ಪ್ರಮುಖ ಕೇಂದ್ರಗಳಲ್ಲಿ ನಿರಂತರವಾಗಿ ಸಭೆ ಸೇರಿ ಕಂದಾಯ ಪಾವತಿಯನ್ನು ಮಾಡದಿರಲು ಜನಾಭಿಪ್ರಾಯವನ್ನು ರೂಪಿಸಿದರು. ಕೃಷಿಕರು ಗದ್ದೆ , ತೋಟಗಳಲ್ಲಿ ದುಡಿಯಲು ನಿರಾಕರಿಸಿದರು. ಗೇಣಿದಾರರು ಜಮೀನ್ದಾರರಿಗೆ ಗೇಣಿಯನ್ನು ನೀಡುವುದನ್ನು , ಜಮೀನ್ದಾರರು ಕಂಪೆನಿ ಸರಕಾರಕ್ಕೆ ಕರ ತೆರಿಗೆಗಳನ್ನು ಕೊಡುವುದನ್ನು ನಿಲ್ಲಿಸಿದರು. ಶಾಂತ ಸ್ವರೂಪದ ಪ್ರತಿಭಟನೆ ನಂತರ ದಿನಗಳಲ್ಲಿ ಹಿಂಸಾತ್ಮಕ ವಿಧಾನಕ್ಕೆ ಹೊರಕೊಂಡಿತು. ಕಂದಾಯ ವಸೂಲಾತಿಗೆ ಬಂದ ಸರಕಾರದ ನೌಕರರನ್ನು ಅಕ್ಕಪಕ್ಕ ನಿಲ್ಲಿಸಿ ಒಬ್ಬನ ತೋಳಿಗೆ ಇನ್ನೊಬ್ಬನ ತೋಳನ್ನು ಸೇರಿಸಿ ಸೂಜಿಯಿಂದ ಚುಚ್ಚಿ ದಾರದಿಂದ ಹೊಲಿದರು. ಅದೇ ರೀತಿ ಪರಸ್ಪರರ ಕಿವಿಗಳಿಗೆ ಹೊಲಿಗೆ ಹಾಕಿದರು. ಬ್ರಿಟಿಷ್ ಉದ್ಯೋಗಿಗಳಿಗೆ ಈ ಉಪಟಳದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಯಿತು.ಆಡಳಿತ ವರ್ಗ ಹತಾಶವಾಯಿತು. ಈ ವಿಶಿಷ್ಟ ಪ್ರತಿಭಟನೆಯು ‘ ಮಂಗಳೂರು ಕೂಟ ಹೋರಾಟ ‘ ಎಂದು ಪ್ರಸಿದ್ಧಿಯನ್ನು ಪಡೆದಿದೆ.
ಈ ಹೋರಾಟದಲ್ಲಿ ಭಾಗಿಗಳಾದವರನ್ನು ಬ್ರಿಟೀಷರು ಬಂಧಿಸಿ ಬಿಡುಗಡೆಗೊಳಿಸಿದರು . ಮುಂದಕ್ಕೆ ಈ ಹೋರಾಟ ಅಂತ್ಯವಾಯಿತು. ನಂತರ ನಡೆದ ಅತ್ಯಂತ ಪ್ರಮುಖ ಹೋರಾಟವೆಂದರೆ 1837 ರಲ್ಲಿ ನಡೆದ’ ಅಮರಸುಳ್ಯ ದಂಗೆ ‘ ಅಥವಾ ‘ಕೊಡಗು-ಕೆನರಾ’ ಬಂಡಾಯ ಎಂದು ಕರೆಯಲಾಗಿರುವ ಬ್ರಿಟಿಷ್ ವಿರೋಧಿ ಸಶಸ್ತ್ರ ಕದನ. ಕೊಡಗಿನ ಹಾಲೇರಿ ವಂಶದ ಅರಸ ಚಿಕ್ಕವೀರರಾಜೇಂದ್ರ ಒಡೆಯನ ವಿರುದ್ಧ ಬ್ರಿಟೀಷರು ಸುಳ್ಳು ಆರೋಪಗಳನ್ನು ಹೊರಿಸಿ , ಆತನನ್ನು ಕುತಂತ್ರದಿಂದ ಪದಚ್ಯುತಿಗೊಳಿಸಿ ಜನರ ಇಚ್ಛೆಗೆ ವಿರುದ್ಧವಾಗಿ ಕಾಶಿಗೆ ಗಡಿಪಾರು ಮಾಡಿದ್ದರು.1837 ರ ಹೋರಾಟ ಆರಂಭಗೊಳ್ಳಲು ಇದು ಮೂಲ ಕಾರಣವಾಯಿತು. ಚಿಕ್ಕವೀರರಾಜನ ಹಿರಿಯರು ಇಂಗ್ಲೀಷರಿಗೆ ಆಪ್ತರಾಗಿದ್ದರೂ ಆತ ಮಾತ್ರ ಅವರ ವಿರುದ್ಧ ಬಹಿರಂಗವಾಗಿ ತೊಡೆತಟ್ಟ ಪಂಥಾಹ್ವಾನವನ್ನು ನೀಡಿದ್ದ. ಶಿವಮೊಗ್ಗದ ನಗರ ದಂಗೆಗೆ ಬೆಂಬಲ ಕೊಟ್ಟದ್ದಲ್ಲದೆ , ಬೆಂಗಳೂರಿನ ಬ್ರಿಟಿಷ್ ಮಿಲಿಟಲಿ ದಂಡಿನಲ್ಲಿ ಕ್ಷೋಭೆಯನ್ನು ಹುಟ್ಟಿಸುವಲ್ಲ ಯಶಸ್ವಿಯಾಗಿದ್ದ. ಹೈದರಾಬಾದ್, ಪಂಜಾಬ್ಗಳ ರಾಜರೊಡನೆ ಸೇರಿ ಬ್ರಿಟಿಷ್ ವಿರೋಧಿ ಒಕ್ಕೂಟವನ್ನು ರೂಪಿಸುವ ಪ್ರಯತ್ನ ನಡೆಸಿದ್ದ. ಇದೇ ಹೊತ್ತಲ್ಲಿ ಕೊಡಗಿನೊಳಗೆ ರಾಜಕುಟುಂಬದಲ್ಲಿದ್ದ ಆಂತರಿಕ ಭಿನ್ನಾಭಿಪ್ರಾಯವನ್ನು ಬಳಸಿ ಅವನನ್ನು ಸಿಂಹಾಸನದಿಂದ ಕೆಳಗಿಳಿಸಲಾಯಿತು. ಆ ವೇಳೆಗೆ ಕೊಡಗಿನ ವಿವಿಧ ಗಡಿಗಳಲ್ಲಿ ನಡೆಯುತ್ತಿದ್ದ ಜದ್ದಾಜಿದ್ದಿನ ಕದನದಲ್ಲಿ ಮೇಲುಗೈ ಸಾಧಿಸಿದ್ದ ಅರಸ ಎಲ್ಲವನ್ನು ತೊರೆದು ನಿರ್ಗಮಿಸುವುದು ಅನಿವಾರ್ಯವಾಯಿತು . ಇದರಿಂದ ರಾಜನ ಆಪ್ತರಾದ ಒಂದು ವರ್ಗದ ರೈತರು ವ್ಯಗ್ರರಾದರು.ಅದು ಮುಂದೆ 1837 ರ ಹೋರಾಟದ ಮೂಲದ್ರವ್ಯವಾಯಿತು. ಇಂಗ್ಲೀಷರ ಮೇಲಿನ ಅತೀವ ಅಸಹನೆಯು ವ್ಯವಸ್ಥಿತವಾದ ಸಶಸ್ತ್ರ ಸಮರಕ್ಕೆ ನಾಂದಿಯಾಯಿತು.
(ಮುಂದುವರಿಯುವುದು).
ನಿರೂಪಣೆ:ಗಂಗಾಧರ ಕಲ್ಲಪಳ್ಳಿ.
ಮಾಹಿತಿ ಕೃಪೆ: ಹಿರಿಯ ಸಾಹಿತಿ ವಿದ್ಯಾಧರ ಕುಡೆಕಲ್ಲು ಅವರ ‘ಅಮರ ಸುಳ್ಯ -1837’ ಕೃತಿ ಹಾಗು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಪ್ರಕಟಿಸಿದ ಕೈಪಿಡಿ.