*ಎಂ. ನಾ. ಚಂಬಲ್ತಿಮಾರ್.
*ಚಿತ್ರಗಳು:ಶಿವಸುಬ್ರಹ್ಮಣ್ಯ ಕಲ್ಮಡ್ಕ.
ಇಂದು ವಿಶ್ವ ಫೋಟೋಗ್ರಾಫಿ ದಿನ…
ನನಗೆ ಫೋಟೊ ಎಂದರೆ ಎಳವೆಯಿಂದಲೇ ಆಸೆ, ಕೌತುಕ. ಶಾಲೆಗೆ ಫೋಟೋ ತೆಗೆಯಲು ಬರುತ್ತಿದ್ದವರನ್ನು ಬೆರಗು ಕಂಗಳಿಂದ ನೋಡಿಯೇ ಬೆಳೆದಿದ್ದೆ. ಪೇಟೆಗೆ ಹೋಗಿದ್ದಾಗ ಸ್ಟುಡಿಯೋ ಕಂಡರೆ ಅದರೆದುರು ನೇತುಹಾಕಿದ್ದ ಮರದ ಫ್ರೇಮಿನ ಆ ಕಾಲದ ಕಪ್ಪುಬಿಳುಪಿನ ಸುಂದರ,ಸುಂದರಿಯರ ಚಿತ್ರ ನೋಡಿ ನನ್ನ ಪಟವೂ ಭವಿಷ್ಯದಲ್ಲಿ
ಹೀಗೆಯೇ ಅಲಂಕಾರಗೊಳ್ಳಬೇಕೆಂದು ಆಸೆ ಪಟ್ಟಿದ್ದೆ…,ಕನಸುಕಂಡಿದ್ದೆ.
ಅದು ಹುಡುಗತನದ ಮುಗ್ಧ ವಯಸ್ಸಿನ ಮನಸ್ಸು…!
ಆದರಿಂದು ಕಾಲವೇ ಬದಲಾಗಿದೆ. ಕೈಯ್ಯಲೊಂದು ಚಂದದ ಮೊಬೈಲ್ ಇದ್ದರೆ ಸಾಕು, ಯಾರು ಬೇಕಿದ್ದರೂ ಫೋಟೋ ತೆಗೆಯುವ ಕಾಲ. ಪ್ರತಿಯೊಬ್ಬರೂ ಛಾಯಾಗ್ರಾಹಕರೇ ಆಗಿರುವ ಕಾಲ. ಫೋಟೋಗ್ರಾಫಿ ಕಲಿಸುವುದಲ್ಲ, ಕಲಿಯುವುದು. ಅದನ್ನ ಕಲಿಸಲು ಕಷ್ಟ, ಕಲಿಯುವುದೇ ಸುಲಭ. ಜೀವನದಲ್ಲಿ ದಾಟಿಬಂದ ಅಮೂಲ್ಯ ಕ್ಷಣಗಳ, ಅನನ್ಯ ಮುಹೂರ್ತಗಳನ್ನು ಅದ್ದಿ ತೆಗೆದು ಮರುನೆನಪಿಸುವ ಚಿತ್ರಗಳೆಂದರೆ ಪ್ರತಿಯೊಬ್ಬರಿಗೂ ಒಳಗೊಳಗೇ ಪುಳಕ.. ನಾನು ಚಂದ ಕಾಣಬೇಕೆಂಬುದೇ ಆಂತರಂಗಿಕ ತವಕ. ಇಂಥ ಚಿತ್ರ ತೆಗೆಯುವುದೂ ಒಂದು ಕಲೆ.
ಅದು ಬೆಳಕಿನಾಟ..
ಫೊಟೋ ಎಂದರೆ ನಿಸರ್ಗದತ್ತ ಬೆಳಕಿನಲ್ಲಿ ಮೂಡಿಸಬಹುದಾದ
ಕಾವ್ಯ ಚಿತ್ತಾರ. ನಮ್ಮೊಳಗಿನ ಭಾವಕ್ಕೆ ಬೀರುವ ಬೆಳಕೂ ಹೌದು. ಹಿಂದೆ ಒಂದು ಚಂದದ ದ್ವನಿಪೂರ್ಣ ಫೊಟೊ ತೆಗೆಯಬೇಕಿದ್ದರೆ ಹರಸಾಹಸ ಪಡಬೇಕಿತ್ತು.ದಿನವಿಡೀ ಪರಿಶ್ರಮಿಸಬೇಕಿತ್ತು. ಸುಧಾರಿತ ತಂತ್ರಜ್ಞಾನದ ಕೆಮರವೂ ಬೇಕಿತ್ತು.ಆದರಿಂದು ಅತ್ಯಾಧುನಿಕ, ನವೀನ ತಾಂತ್ರಿಕತೆಯ ಡಿಜಿಟಲ್ ಕೆಮರಾ ಎಲ್ಲೆಲ್ಲೂ ಇದೆ.
ಎಲ್ಲರೂ ಛಾಯಾಗ್ರಾಹಕರೇ…!
ಈಗ ಫೋಟೋಗಳು ಹಿಂದಿನಂತಲ್ಲ, ದಿನ ಸಾಗಿದಂತೆ ಹೆಚ್ಚೆಚ್ಚು ಸ್ಪಷ್ಟ!
ಕನ್ನಡಿ ಬಿಳುಪಾದಂತೆ ಮುಖ ಕಪ್ಪಿಡುತ್ತದಂತೆ! ಆದರೆ ಫೋಟೋಗ್ರಾಫಿ ಎಂಥ ಕುರೂಪಿಯ ಮುಖವನ್ನೂ ಈಗ ಸುರ ಸುಂದರನನ್ನಾಗಿಸುತ್ತದೆ. ತನ್ನನ್ನು ತಾನೇ ನೋಡಿ ಒಳಗೊಳಗೇ ಖುಷಿಪಡೆಯಲಾಗುತ್ತದೆ..
ಆದ್ದರಿಂದಲೇ ಫೋಟೋ ಎಲ್ಲರಿಗೂ, ಎಂಥವರಿಗೂ ಭಾವಮಿಲನದ ಆತ್ಮ ಸಂಗಾತಿ.. ನಮ್ಮನ್ನು ಸಹಜವಾಗಿರುವ ಚೆಲುವಿಕೆಗಿಂತಲೂ ಮುಮ್ಮಡಿ ಚೆಲುವಾಗಿಸುವ ಈ ಸೌಂದರ್ಯ ಆರಾಧನಾ ಕಲೆಗೂ ಒಂದು ದಿನ ಎಂದರೆ… ಅತಿಶಯವೇನಿಲ್ಲ.
World photography Day ಆರಂಭವಾದದ್ದು 1839ರಲ್ಲಿ.
ಇದು ಫ್ರೆಂಚ್ ಸರಕಾರದ ಕೊಡುಗೆ. ಛಾಯಾಗ್ರಹಣದ ಆರಂಭಿಕ ಸ್ವರೂಪ ಎಂದೆನಿಸಿದ ಡೈಗ್ರೋಟೈಪ್ ಫೋಟೋಗ್ರಫಿಯನ್ನು ವಿಶ್ವಕ್ಕೆ ಪರಿಚಯಿಸಿರುವುದರ ಸವಿನೆನಪಿಗಾಗಿ ಈ ದಿನಾಚರಣೆ ನಡೆಯುತ್ತದೆ. ಲೂಯಿ ಟ್ವಿಗ್ವೇರಾ ಎಂಬ ಫ್ರೆಂಚ್ ಫೋಟೊಗ್ರಾಫರ್ ಈ ಕಲ್ಪನೆಯ ವಿಕಾಸದ ಪಿತಾಮಹ. ಆದರೆ ಈತನಿಗಿಂತಲೂ ಅದೆಷ್ಟೋ ಮೊದಲು ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಛಾಯಾಕಲೆಯ ಕುರಿತು ವಿಶ್ವಕ್ಕೆ ಬೋಧಿಸಿದ್ದ. ಈ ಕಲ್ಪನೆಗಳ ಅರಿವಿನ ವಿಕಾಸಗಳಿಂದಲೇ ಕೆಮರಾಗಳು ವಿನ್ಯಾಸಗೊಂಡವು ಎನ್ನಲಾಗುತ್ತಿದೆ.
ಇಂದು ಛಾಯಾಕಲೆ ಕ್ರಾಂತಿಯನ್ನು ಕಂಡಿದೆ.ಮರದ ಪೆಟ್ಟಿಗೆಯ ಕೆಮರಾದಿಂದ ಮೊದಲ್ಗೊಂಡ ಕೆಮರಾ ಇತಿಹಾಸ ನೂರಾರು ಅವತಾರ ದಾಟಿದೆ. ಇಂದೀಗ ಅಂಗೈ ಅಗಲದ ಪುಟ್ಟ ಮೊಬೈಲಿನಲ್ಲೇ ಅತ್ಯದ್ಭುತ ದೃಶ್ಯಕಾಂತಿಯ ಸಿನಿಮಾಗಳು ಮೂಡುತ್ತವೆ. ಫೋಟೋಗ್ರಫಿ ಕೇವಲ ಮನುಷ್ಯರ ಚಿತ್ರಗಳ ವರ್ತಮಾನ ದಾಖಲಾತಿಗಷ್ಟೇ ಅಲ್ಲ ಮಾನವ ಕಣ್ಣಿಗೆ ಗೋಚರಿಸುವ ಸಕಲವನ್ನೂ ಸೌಂದರ್ಯದಿಂದ ನೋಡುವ ಬೃಹತ್ ಕಲೋದ್ಯಮ ಆಗಿ ಬೆಳೆದಿದೆ. ಅದರ ಸಾಧ್ಯತೆಯ ಬಾಹುಗಳು ಗಗನದಷ್ಟೇ ಎತ್ತರ, ವಿಶಾಲವಾಗಿದೆ.
ಫೋಟೋ ವ್ಯಾಪ್ತಿಯ ಸಾಧ್ಯತೆಗಳ ವ್ಯಾಪ್ತಿ ವಿಸ್ತಾರಗೊಂಡಂತೆಯೇ ಕೆಮರಾಗಳು ಅನಂತ ಸಾಧ್ಯತೆಯಿಂದ ಬೆಳೆಯುತ್ತಲೇ ಕಿರಿದಾಗಿದೆ.ಮೊಬೈಲಿನಲ್ಲಿ, ಪೆನ್ನಿನಲ್ಲಿ, ಶರ್ಟಿನ ಬಟನ್ ನಲ್ಲೂ ಕೆಮರಾ ಅವಿತು ಕೂತಿವೆ! ಇದನ್ನೆಲ್ಲ ಬೇಕೋ, ಬೇಡವೋ ಎಂಬಂತೆ ಬಳಸುವ
ಎಲ್ಲರಿಗೂ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು..
(ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ಹಿರಿಯ ಪತ್ರಕರ್ತರು. ಪರಿಸರ ವನ್ಯಜೀವಿ ಛಾಯಾಚಿತ್ರಗ್ರಾಹಕರು.)
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು.)