ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್ ಲ್ಯಾಂಡರ್ನ ಚಿತ್ರವನ್ನು ರೋವರ್ ಪ್ರಗ್ಯಾನ್ ಬುಧವಾರ ಸೆರೆ ಹಿಡಿದಿದೆ.ಈ ಚಿತ್ರವನ್ನು ಇಸ್ರೊ ಸಾಮಾಜಿಕ ಜಾಲತಾಣ ‘ಎಕ್ಸ್‘ನಲ್ಲಿ ಹಂಚಿಕೊಂಡಿದೆ. ಪ್ರಗ್ಯಾನ್ನಲ್ಲಿ ಅಳವಡಿಸಿರುವ ಕ್ಯಾಮೆರಾದಿಂದ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೊ ಹೇಳಿದೆ. ದಕ್ಷಿಣ ಧ್ರುವದಲ್ಲಿ
ಮೇಲ್ಮೈಯಲ್ಲಿ ಈಗಾಗಲೇ ಆಮ್ಲಜನಕ ಧಾತುವನ್ನು ಪತ್ತೆಹಚ್ಚಲಾಗಿದೆ. ಸದ್ಯ ಈಗ ಜಲಜನಕದ ಹುಡುಕಾಟ ನಡೆದಿದೆ. ಜಲಜನಕ ದೊರೆತರೆ ಚಂದ್ರನ ಮೇಲೆ ನೀರಿನ ಉಪಸ್ಥಿತಿಯು ತಿಳಿಯುತ್ತದೆ ಎಂದು ಇಸ್ರೊ ಹೇಳಿದೆ. ಪ್ರಗ್ಯಾನಲ್ಲಿರುವ ಲಿಬ್ಸ್ ಉಪಕರಣವು ನಿರೀಕ್ಷೆಯಂತೆ ಅಲ್ಯುಮಿನಿಯಂ ಕ್ಯಾಲ್ಷಿಯಂ,ಕಬ್ಬಿಣ, ಕ್ರೋಮಿಯಂ, ಟೈಟೆನಿಯಂ, ಮ್ಯಾಂಗನೀಸ್, ಸಿಲಿಕಾನ್ ಧಾತುಗಳನ್ನು ಪತ್ತೆ ಮಾಡಿದೆ. ಈ ಲಿಬ್ಸ್ ಉಪಕರಣವನ್ನು ಬೆಂಗಳೂರಿನ ಎಲೆಕ್ಟ್ರೊ– ಆಪ್ಟಿಕ್ಸ್ ಸಿಸ್ಟಮ್ ಪ್ರಯೋಗಾಲಯ ಅಭಿವೃದ್ಧಿಪಡಿಸಿತ್ತು.ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಇಳಿದು ಬುಧವಾರಕ್ಕೆ ಒಂದು ವಾರ ತುಂಬಲಿದೆ. ಇನ್ನು ಏಳು ದಿನಗಳ ಕಾಲ ಪ್ರಯೋಗ ಮುಂದುವರಿಸಲಿದೆ. ಅಂದರೆ ಸೆ. 5 ರವೇಳೆಗೆ ಚಂದ್ರನಲ್ಲಿ ಕತ್ತಲು ಆವರಿಸಲಿದೆ. ಅಲ್ಲಿ ಇನ್ನು ಬೆಳಕು ಕಾಣಲು ಮುಂದಿನ 14 ದಿನಗಳು ಕಾಯಬೇಕು. ಆ ಬಳಿಕ ಮತ್ತೆ ಲ್ಯಾಂಡರ್ ಮತ್ತು ರೋವರ್ಗಳಿಗೆ ಮರು ಜೀವ ನೀಡಲು ಸಾಧ್ಯವೇ ಎಂಬುದನ್ನು ಇಸ್ರೊ ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.