ಅಹಮದಾಬಾದ್: ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ವಿರುದ್ಧ 7 ವಿಕೆಟ್ ಅಂತರದ ಗೆಲುವು ಸಾಧಿಸಿತು.ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 163 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೈಟನ್ಸ್, ಇನ್ನೂ
5 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು.ಇನಿಂಗ್ಸ್ ಆರಂಭಿಸಿದ ನಾಯಕ ಶುಭಮನ್ ಗಿಲ್ (36) ಮತ್ತು ವೃದ್ಧಿಮಾನ್ ಸಹಾ (25) ಉತ್ತಮ ಆರಂಭ ನೀಡಿದರು. ಇವರಿಬ್ಬರೂ ಔಟಾದ ಬಳಿಕ ಜೊತೆಯಾದ ಸಾಯಿ ಸುದರ್ಶನ್ ಹಾಗೂ ಡೇವಿಡ್ ಮಿಲ್ಲರ್ 3ನೇ ವಿಕೆಟ್ ಪಾಲುದಾರಿಕೆಯಲ್ಲಿ 64 ರನ್ ಸೇರಿಸಿದರು.ಸುದರ್ಶನ್ 36 ಎಸೆತಗಳಲ್ಲಿ 45 ರನ್ ಗಳಿಸಿದರೆ, ಮಿಲ್ಲರ್ 27 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿ, ಜಯ ತಂದುಕೊಟ್ಟರು.
ಇದರೊಂದಿಗೆ, ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ಸಾಧಿಸಿದ ಟೈಟನ್ಸ್, ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿತು. ರೈಸರ್ಸ್ ಸಹ ಇಷ್ಟೇ ಪಂದ್ಯ ಆಡಿದ್ದು, ಒಂದರಲ್ಲಷ್ಟೇ ಗೆದ್ದು 5ನೇ ಸ್ಥಾನದಲ್ಲಿ ಉಳಿದಿದೆ.
ಟಾಸ್ ಗೆದ್ದ ಎಸ್ಆರ್ಎಚ್ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಶಿಸ್ತಿನ ದಾಳಿ ಸಂಘಟಿಸಿದ ಟೈಟನ್ಸ್ ಬೌಲರ್ಗಳು, ರೈಸರ್ಸ್ ಬಳಗದ ಬ್ಯಾಟರ್ಗಳು ಬೃಹತ್ ಮೊತ್ತ ಕಲೆಹಾಕದಂತೆ ಕಡಿವಾಣ ಹಾಕಿದರು. ಅಭಿಷೇಕ್ ಶರ್ಮಾ ಮತ್ತು ಅಬ್ದುಲ್ ಸಮದ್ ತಲಾ 29 ರನ್ ಗಳಿಸಿದ್ದೇ ಗರಿಷ್ಠ ಮೊತ್ತವೆನಿಸಿತು. ಇದರಿಂದಾಗಿ, ಕಮಿನ್ಸ್ ಬಳಗ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು.
ಆತಿಥೇಯ ತಂಡದ ಪರ ಮೋಹಿತ್ ಶರ್ಮಾ 4 ಓವರ್ಗಳಲ್ಲಿ 25 ರನ್ ನೀಡಿ ಮೂರು ವಿಕೆಟ್ ಪಡೆದರು.