ಸುಳ್ಯ:ಗೂನಡ್ಕದ ತೆಕ್ಕಿಲ್ ಮಾದರಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ವ್ಯವಸ್ಥೆಯಾದ ಅಲ್-ಬಿರ್ ಇಸ್ಲಾಮಿಕ್ ಪ್ರಿ ಸ್ಕೂಲ್ ಜೂ.11 ರಂದು ಉದ್ಘಾಟನೆಯಾಗಲಿದೆ ಎಂದು ತೆಕ್ಕಿಲ್ ಮಾದರಿ ಶಾಲೆಯ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ತಾಲೂಕಿನಲ್ಲಿ ಪ್ರಥಮ ಬಾರಿಗೆ ಅಲ್ ಬಿರ್ ಪ್ರಿ ಸ್ಕೂಲ್ ಆರಂಭಗೊಳ್ಳಲಿದೆ. ಅಂತಾರಾಷ್ಟ್ರೀಯ
ಮಟ್ಟದ ಶಿಕ್ಷಣ ವ್ಯವಸ್ಥೆ ಇದಾಗಿದ್ದು ಎಲ್ಕೆಜಿ ಮತ್ತು ಯುಕೆಜಿ ತರಗತಿಗಳು ನಡೆಯಲಿದೆ. ಈ ವರ್ಷದಿಂದ ಎಲ್ಕೆಜಿ ತರಗತಿಗಳು ನಡೆಯಲಿದ್ದು 24 ಮಕ್ಕಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇದೆ.ಈ ವರ್ಷ ಎಲ್ಕೆಜಿ ಪೂರ್ತಿ ಮಾಡಿದ ಮಕ್ಕಳು ಯುಕೆಜಿಗೆ ಸೇರ್ಪಡೆಯಾಗುತ್ತಾರೆ. ಕನ್ನಡ, ಇಂಗ್ಲೀಷ್, ಅರೆಬಿಕ್ ಭಾಷಾ ಶಿಕ್ಷಣ ನೀಡಲಾಗುವುದು. ಅದಕ್ಕೆ ಸ್ಮಾರ್ಟ್ ಕ್ಲಾಸ್ ತರಗತಿಗಳು ಸಿದ್ಧಗೊಂಡಿದೆ ಎಂದರು.
ತೆಕ್ಕಿಲ್ ಮಾದರಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಉನೈಸ್ ಪೆರಾಜೆ ಮಾತನಾಡಿ ‘ಅಲ್ -ಬಿರ್ ಶಿಕ್ಷಣ ಪದ್ಧತಿ ವಿಭಿನ್ನ ಶಿಕ್ಷಣ ಪದ್ಧತಿಯಾಗಿದ್ದು ತೆಕ್ಕಿಲ್ ಶಾಲೆಯಲ್ಲಿ ತರಗತಿಗಳ ಆರಂಭಕ್ಕೆ ಎಲ್ಲಾ ಸಿದ್ಧತೆಗಳು ಪೂರ್ತಿಗೊಂಡಿದೆ ಎಂದು ಹೇಳಿದರು. ಜೂ.11ರಂದು ಪೂ.10 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಉದ್ಘಾಟಿಸಲಿದ್ದಾರೆ. ಅರಂತೋಡು ಜುಮ್ಮಾ ಮಸೀದಿಯ ಖತೀಬರಾದ ಇಸಾಕ್ ಬಾಖವಿ ದುವಾ ನೆರವೇರಿಸುವರು. ವಿವಿಧ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರಹೀಂ ಬೀಜದಕಟ್ಟೆ, ತಾಜ್ ಮಹಮ್ಮದ್ ಸಂಪಾಜೆ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸಂಚಾಲಕ ಟಿ.ಎಂ.ಜಾವೇದ್, ಆಸಿಫ್ ಪನ್ನೆ, ಸಾದಿಕ್ ಮಾಸ್ತರ್ ಉಪಸ್ಥಿತರಿದ್ದರು.