ಸುಳ್ಯ:ಸುಳ್ಯ ನಗರದ ಶಾಂತಿನಗರದ ತಾಲೂಕು ಕ್ರೀಡಾಂಗಣದ ಕಾಮಗಾರಿ ನಡೆಸಿದಾಗ ಗ್ರೌಂಡ್ನ ಕೆಳ ಭಾಗದಲ್ಲಿ ಹಾಕಿದ ಬೆಟ್ಟದೆತ್ತರದ ಮಣ್ಣು ಕುಸಿಯದಂತೆ ನಿರ್ಮಿಸುವುದಾಗಿ ಹೇಳಿದ್ದ ತಡೆಗೋಡೆ ಇನ್ನೂ ನಿರ್ಮಾಣಗೊಂಡಿಲ್ಲ. ವರ್ಷ ಒಂದು ಸರಿದು ಮತ್ತೊಂದು ಮಳೆಗಾಲ ಸಮೀಪಿಸುತ್ತಿದ್ದು ಗ್ರೌಂಡ್ನ ಕೆಳ ಭಾಗದಲ್ಲಿ ವಾಸಿಸುವ ಜನರಲ್ಲಿ ಮತ್ತೆ ಆತಂಕ, ಭಯ, ನಡುಕ ಮುಡುಗಟ್ಟಿದೆ. ಕಳೆದ ವರ್ಷದ ಬೇಸಿಗೆ
ಕಾಲದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ನಡೆದ ಸಂದರ್ಭದಲ್ಲಿ ತೆಗೆಯಲಾದ ಭಾರೀ ಪ್ರಮಾಣದ ಮಣ್ಣನ್ನು ಗ್ರೌಂಡ್ನ ಕೆಳ ಭಾಗದಲ್ಲಿ ಬೆಟ್ಟದಂತೆ ಎತ್ತರದಲ್ಲಿ ಅವೈಜ್ಞಾನಿಕವಾಗಿ ತುಂಬಿಡಲಾಗಿತ್ತು.ಇದರಿಂದ ಆತಂಕಗೊಂಡ ಜನರು ಮಳೆಗಾಲದಲ್ಲಿ ಮಣ್ಣು ಕುಸಿಯುವ ಅಪಾಯ ಇದೆ ಎಂದು ಸಚಿವರುಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಇದು ‘ಸುಳ್ಯ ಮಿರರ್’ ಸೇರಿದಂತೆ ಮಾಧ್ಯಮಗಳಲ್ಲಿ ದೊಡ್ಟ ವರದಿಯಾಗಿ ಗಮನ ಸೆಳೆದಿತ್ತು. ಗ್ರೌಂಡ್ನ ಕೆಳ ಭಾಗದಲ್ಲಿ ಈ ರೀತಿ ಮಣ್ಣು ತುಂಬಿರುವುದು ದೊಡ್ಡ ವಿವಾದವೇ ಉಂಟಾಗಿ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿತ್ತು. ಕಳೆದ ಮಳೆಗಾಲದಲ್ಲಿ ಈ ಮಣ್ಣಿನ ಗುಡ್ಡ
ಕುಸಿಯದಂತೆ ತಾತ್ಕಾಲಿಕವಾಗಿ ಮಣ್ಣಿನ ಮೇಲೆ ಪ್ಲಾಸ್ಟಿಕ್ ಹೊದಿಕೆಯನ್ಬು ಹಾಸಲಾಗಿತ್ತು. ಮಳೆಗಾಲ ಮುಗಿದ ಕೂಡಲೇ ತಡೆಗೋಡೆ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಭಾರೀ ಮಳೆ, ಗಾಳಿಗೆ ಪ್ಲಾಸ್ಟಿಕ್ ಹೊದಿಕೆ ಕೆಲವೇ ತಿಂಗಳಲ್ಲಿ ಹರಿದು ಹೋಗಿತ್ತು. ಇದೀಗ ಒಂದು ವರ್ಷ ಕಳೆದರೂ ತಡೆಗೋಡೆ ನಿರ್ಮಾಣ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಕೆಲವು ದಿನಗಳ ಹಿಂದೆ ಇಲ್ಲಿ ಕೆಲವು ಕಾಮಗಾರಿ ನಡೆಸಿದ್ದು ಮಣ್ಣಿನ ದಿಬ್ಬವನ್ನು ಕಡಿದು ‘ಪ್ಲಾಟ್ಫಾರಂ’ಗಳಂತೆ ಮಾಡಲಾಗಿದೆ. ಆದರೆ ಮಳೆ ಬಂದರೆ ನೀರು ಇಳಿದು ಮಣ್ಣು ಕುಸಿಯುವುದನ್ನು ತಡೆಯಲು ಇದು ಪೂರಕವಾಗಿಲ್ಲ.ಈ ರೀತಿ ಯಾಕೆ ಮಾಡಿದ್ದಾರೆ ಎಂದು ಅರ್ಥ ಆಗ್ತಾ ಇಲ್ಲಾ ಎಂದು ಸ್ಥಳೀಯರು ಹೇಳುತ್ತಾರೆ. ಗುಡ್ಡ ಅಲ್ಲಲ್ಲಿ ಕಡಿದು ಹಾಕಿದ್ದು ಕೆಲವು ದಿನಗಳಿಂದ ಆ
ಕೆಲಸವೂ ಸ್ಥಗಿತಗೊಂಡಿದೆ. ಮಳೆಗಾಲದಲ್ಲಿ ಗ್ರೌಂಡ್ನ ಕೆಳ ಭಾಗದಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಹಾಕಿದ ಮಣ್ಣು ಕುಸಿಯದಂತೆ ಕಲ್ಲು ಅಥವಾ ಕೆಂಪುಕಲ್ಲಿನ ತಡೆಗೋಡೆ ನಿರ್ಮಿಸಲಾಗುವುದು. ಅದಕ್ಕೆ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಸಚಿವರು ಸೇರಿ ಜನಪ್ರತಿನಿಧಿಗಳು ನಮಗೆ ತಿಳಿಸಿದ್ದರು. ಆದರೆ ತಡೆಗೋಡೆ ನಿರ್ಮಾಣ ಇನ್ನೂ ಆರಂಭ ಆಗಿಲ್ಲ. ಕೆಲವು ದಿನಗಳಿಂದ ಅಲ್ಲಲ್ಲಿ ಕಡಿದು ಹಾಕಲಾಗಿದ್ದು ಅದು ಕೂಡ ಈಗ ಸ್ಥಗಿತವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದೀಗ ಕೆಲವೇ ದಿನದಲ್ಲಿ ಮಳೆಗಾಲ ಅರಂಭವಾಗಲಿದ್ದು ಗ್ರೌಂಡ್ನ ಕೆಳ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದ್ದು ಭಯದ ನೆರಳು ಆವರಿಸಿದೆ.