ಮಡಿಕೇರಿ:ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಗುರುವಾರ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ (36) ಭಾನುವಾರ ಸಂಜೆ ಪತ್ತೆಯಾಗಿದ್ದಾರೆ.ಇಂದು ಹುಡುಕಾಟ ನಡೆಸುವಾಗ ಕಾಡಿನೊಳಗೆ ಇವರು ಪತ್ತೆಯಾಗಿದ್ದು, ಅವರನ್ನು ಕಾಡಿನಿಂದ
ಹೊರ ಕರೆ ತರಲಾಗಿದೆ ಎಂದು ವರದಿಯಾಗಿದೆ.ಇವರ ಪತ್ತೆಗಾಗಿ ಅರಣ್ಯ, ಪೊಲೀಸ್, ನಕ್ಸಲ್ ನಿಗ್ರಹ ದಳ ಹಾಗೂ ಸ್ಥಳೀಯರು ಸೇರಿದಂತೆ ಒಟ್ಟು 9 ತಂಡಗಳನ್ನು ನಿಯೋಜಿಸಲಾಗಿತ್ತು. ಥರ್ಮಲ್ ಡ್ರೋನ್ ಕ್ಯಾಮೆರಾ, ಶ್ವಾನದಳವನ್ನೂ ಬಳಸಲಾಗಿತ್ತು.
ಕೇರಳದಿಂದ ಒಬ್ಬರೇ ಬಂದಿದ್ದ ಅವರು ಆನ್ಲೈನ್ನಲ್ಲಿ ನೋಂದಾಯಿಸಿ ಚಾರಣಕ್ಕಾಗಿ ಹೊರಟಿದ್ದರು.ತಾವು ತಂಗಿದ್ದ ಹೋಂಸ್ಟೇಯವರನ್ನು ಗುರುವಾರ ಮಧ್ಯಾಹ್ನ ಸಂಪರ್ಕಿಸಿದ್ದ ಶರಣ್ಯ, ದಾರಿ ತಪ್ಪಿರುವುದಾಗಿ ಹೇಳಿದ್ದರು. ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು.
ಬಳಿಕ ನಿರಂತರ ಹುಡುಕಾಟ ನಡೆಸಿದ ಬಳಿಕ ಇವರನ್ನು ಪತ್ತೆ ಹಚ್ಚಲಾಗಿದೆ. ಶರಣ್ಯ ಆರೋಗ್ಯದಿಂದ ಇದ್ದಾರೆ ಎಂದು ಮೂಲಗಳು ಹೇಳಿವೆ.









