*ಅನಿಲ್ ಹೆಚ್.ಟಿ. ಮಡಿಕೇರಿ.
ತಡಿಯಂಡಮೋಳ್ ಎಂಬ ಕೊಡಗಿನ ಅತೀ ಎತ್ತರದ ಶಿಖರ ಶ್ರೇಣಿಗೆ ಚಾರಣ ತೆರಳಿ 4 ದಿನಗಳಿಂದ ನಾಪತ್ತಯಾಗಿದ್ದ ಕೇರಳದ ಟೆಕ್ಕಿ 36 ವಷ೯ದ ಶರಣ್ಯ ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗುವುದರೊಂದಿಗೆ ಬೆಟ್ಟದಲ್ಲಿ ಮಿಸ್ಸಿಂಗ್ ಕೇಸ್ ಸುಖಾಂತ್ಯಗೊಂಡಿದೆ.ಕಾಣೆಯಾದ ಶರಣ್ಯಳಿಗಾಗಿ 4 ದಿನಗಳಿಂದ ಬಿರು ಬಿಸಿಲಲ್ಲಿ, ಅನ್ನಆಹಾರ ಬಿಟ್ಟು ಶೋಧಕಾಯಾ೯ಚರಣೆ ಕೈಗೊಂಡ ಪೊಲೀಸರು, ಅರಣ್ಯ ಇಲಾಖೆ, ನಕ್ಸಲ್ ನಿಗ್ರಹ ಪಡೆ, ಗ್ರಾಮಸ್ಥರು, ಮುಖ್ಯವಾಗಿ
ಸ್ಥಳೀಯ ಕುಡಿಯ ಜನಾಂಗದವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.
ರಾಜ್ಯ ಸಕಾ೯ರ ಕೂಡ ಶರಣ್ಯ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರಖಂಡ್ರೆ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ವಿಶೇಷ ಉಸ್ತುವಾರಿ ವಹಿಸಿ ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ಶರಣ್ಯ ಪತ್ತೆಗೆ ಸೂಚನೆ ನೀಡಿದ್ದರು.ಕುಡಿಯ ಜನಾಂಗದವರು ತಮ್ಮ ಕುಲದೇವರಿಗೆ ಶರಣ್ಯಳ ಸುರಕ್ಷಿತ ಬರುವಿಕಗಾಗಿ ಪ್ರಾಥ೯ನೆ ಕೂಡ ಸಲ್ಲಿಸಿದ್ದರು.ಎಲ್ಲರ ಪ್ರಾಥ೯ನೆ ಫಲಿಸಿದಂತೆ ಭಾನುವಾರ ಸಂಜೆ ಕೊನೆಗೂ 4 ದಿನಗಳ ನಂತರ ಶರಣ್ಯ ಎಂಬ ಟೆಕ್ಕಿ ಪತ್ತೆಯಾಗಿದ್ದಾಳೆ.
ಕುಡಿಯ ಜನಾಂಗದ ಅಯ್ಯಪ್ಪ, ಸುಬ್ರಹ್ಮಣಿ, ಮಣಿಕಂಠ, ರಾಜು, ಮಣಿ ಎಂಬ ಐವರು ಯುವಕರಿದ್ದ ತಂಡ ಶರಣ್ಯಳನ್ನು ತಡಿಯಂಡಮೋಳ್ ಬೆಟ್ಟದ ಎಂಬಲ್ಲಿ ಪತ್ತೆಹಚ್ಚಿದೆ. ತಂಡದ ಸದಸ್ಯ ಅಯ್ಯಪ್ಪ ಈ ರೋಚಕ ಕಾಯಾ೯ಚರಣೆ ಬಗ್ಗೆ ವಿವಿಸಿದ್ದು ಹೀಗೆ.
ನಾವು ಎಂಬ ಕಾಫಿ ತೋಟಮಾಲೀಕರಲ್ಲಿ ಕೂಲಿಕೆಲಸ ಮಾಡುವವರು. ನಮ್ಮ ಮಾಲೀಕರಾದ ಅರೆಯಡ ರತ್ತು ಅವರ ಸೂಚನೆಯಂತೆ ಇಂದು ನಾವು ಶೋಧ ಕಾಯ೯ಕ್ಕೆ ಮುಂದಾದೆವು. ಮೂರು ದಿನಗಳು ಇತರರು ಶೋಧ ನಡೆಸಿದ್ದರು. ಆದರೆ ಕಾಡಿನಲ್ಲಿ ಮುಖ್ಯ ಹಾದಿಯಲ್ಲಿ ಶೋಧ ಮಾಡುವುದಕ್ಕಿಂತ ಬೆಟ್ಟದ ತಪ್ಪಲಲ್ಲಿರುವ ಕಲ್ಲುಬಂಡೆಯನ್ನು ಪತ್ತೆ ಹಚ್ಚಿ ಅಲ್ಲಿ ಹುಡುಕಾಟ ನಡೆಸಬೇಕಾಗುತ್ತದೆ. ನಾವು ಅದನ್ನೇ ಮಾಡಲು ನಿಧ೯ರಿಸಿದೆವು.
ಇಂದು ಅಂದರೆ ಭಾನುವಾರ ಬೆಳಗ್ಗೆ ನಮ್ಮ ದೈವರಿಗೆ ಪ್ರಾಥ೯ನೆ ಸಲ್ಲಿಸಿ ಕಾಡಿನೊಳಗೆ ಹೆಜ್ಜೆ ಹಾಕಿದೆವು. ಎಂಬಲ್ಲಿ ನಮ್ಮದೊಂದು ಪುಟ್ಟ ಗುಡಿಯಿದೆ. ಆ ಗುಡಿಗೆ ತೆರಳುವ ಕಡಿದಾದ ಹಾದಿಯಲ್ಲಿಯೇ ನಡೆದೆವು. ವಷ೯ಕ್ಕೊಮ್ಮೆ ಇದೇ ಹಾದಿಯಲ್ಲಿ ನಾವು ಜೇನು ಹುಡುಕಿಕೊಂಡು ಹೋಗುತ್ತಿರುತ್ತೇವೆ. ದಾರಿ ನಮಗೆ ಚಿರಪರಿಚಿತ..
ಅಲ್ಲೊಂದು ಕಡೆ ನದಿ ಹರಿಯುತ್ತದೆ. ಅಲ್ಲಿ ಬಳಲಿದ್ದ ನಾವು ನೀರು ಕುಡಿಯುತ್ತಾ.. ಕೂ.. ಕೂ… ಶರಣ್ಯ .. ಶರಣ್ಯ ಎಂದು ಕೂಗು ಹಾಕಿದೆವು. ಒಂದು ಬಾರಿ.. ಎರಡು ಬಾರಿ.. ಮೂರು ಬಾರಿ ಕೂಗಿದರೂ ಆ ದಟ್ಟ ಕಾಡಿನಲ್ಲಿ ನಮ್ಮ ಕೂಗು ನಮಗೇ ಕೇಳುವಂತಾಯಿತು. ಆದರೂ ನಾಲ್ಕನೇ ಸಲ ಕೂಗಿದೆವು.
ಓ ಎಂದು ಹೆಣ್ಣೊಬ್ಬಳು ದೂರದಿಂದ ಕೂಗಿದ್ದು ಅಸ್ಪಷ್ಟವಾಗಿ ಕೇಳಿಸಿತು. ಕೂಡಲೇ ಸಂಭ್ರಮದಿಂದ ನಾವೂ ಶರಣ್ಯ ಕೂ.. ಕೂ.. ಎಂದು ಕೂಗಿದೆವು. ಆಗ ಅಲ್ಲಿಂದಲೂ ಕೂಗು ಕೇಳತೊಡಗಿತು. ಆ ಧ್ವನಿ ಕೇಳಿಬಂದ ದಿಕ್ಕು ನಾವು ಇದ್ದ ಸ್ಥಳದಿಂದ 3-4 ಕಿ.ಮೀ. ದೂರದಲ್ಲಿತ್ತು.
ಆ ಕಾಡಿನ ಕಾಲು ಹಾದಿಯಲ್ಲಿ ಕಷ್ಟಪಟ್ಟು ಓಡುತ್ತಾ, ಜಾರುತ್ತಾ ಕೂಗು ಬಂದ ದಿಕ್ಕಿನತ್ತ ಸಾಗಿದೆವು. ತಡಿಯಂಡಮೋಳ್ ನಿಂದ ಸುಮಾರು 7 ಕಿ.ಮೀ. ದೂರದಲ್ಲಿ.. ಇರುವ ಆ ಸ್ಥಳವನ್ನು ನಾವು ಕೇವಲ 20 ನಿಮಿಷಗಳಲ್ಲಿಯೇ ಪಾಂಡನಮಲೆ ಎಂಬ ಆ ಸ್ಥಳ ತಲುಪಿದಾಗ ಅಲ್ಲಿ ಕಂಡದ್ದು..
ಹರಿಯುವ ಎರಡು ಕಿರಿದಾದ ನದಿ.. ಬದಿಯಲ್ಲೊಂದು ದೊಡ್ಡದಾದ ಮರ.. ಅದರ ಪಕ್ಕದ ಬಂಡೆಯಲ್ಲಿ ಈ ಶರಣ್ಯ ಕಕ್ಕಾಬಿಕ್ಕಿಯಾಗಿ ನಿಂತಿದ್ದಳು. ನಮ್ಮನ್ನು ಕಂಡ ಕೂಡಲೇ ಅವಳಿಗೆ ಸಂತೋಷದಿಂದ ಕಣ್ಣೀರು ಬಂತು. ನಾವು ಐವರೂ ಆಕೆಯನ್ನು ಜೀವಂತ ಕಂಡದ್ದೇ ಶರಣ್ಯ ಶರಣ್ಯ ಎಂದು ಮತ್ತೆ ಮತ್ತೆ ಖಚಿತಪಡಿಸಿಕೊಂಡು ಆಕೆಯ ಕೈಹಿಡಿದು ಆ ಸ್ಥಳದಿಂದ ಬೆಟ್ಟದ ಮತ್ತೊಂದು ಬದಿಗೆ ಕರೆತಂದೆವು. ಶರಣ್ಯ ಆ ಕಿರಿದಾದ ಹಾದಿಯಲ್ಲಿ ಕೋಲಿನ ಸಹಾಯದಿಂದ ಕಷ್ಟಪಟ್ಟು ನಮೊಂದಿಗೆ ಹೆಜ್ಜೆ ಹಾಕುತ್ತಾ ಬೆಟ್ಟದ ಹಾದಿ ಇಳಿದು ತಡಿಯಂಡಮೋಳ್ ನ ಕೆಳಬದಿಯಲ್ಲಿರುವ ಬೇಸ್ ಕ್ಯಾಂಪ್ ತಲುಪಿದೆವು.
ಶಾಸಕರಾದ ಪೊನ್ನಣ್ಣ ಸರ್ ನಮ್ಮನ್ನು ಪ್ರೀತಿಯಂದ ಬರಮಾಡಿಕೊಂಡು ಸ್ವಾಗತಿಸಿದರು. ಶರಣ್ಯ ತನ್ನ ಅಪ್ಪ, ಅಣ್ಣನನ್ನು ಕಂಡು ಅವರನ್ನು ತಬ್ಬಿಕೊಂಡಳು.
ಸರ್.. ಶರಣ್ಯಳಿದ್ದ ಜಾಗ ನಮಗೆ ಹೊಸದ್ದೇನಲ್ಲ. ನಾವು ಆಗಾಗ್ಗೆ ಅಲ್ಲಿಗೆ ಹೋಗುತ್ತಾ ಇರುತ್ತೇವೆ. ತಡಿಯಂಡಮೋಳ್ ಅಪಾಯಕಾರಿ ಅಲ್ಲವೇ ಅಲ್ಲ. ಇಲ್ಲಿ ಕೊಂಚ ದಾರಿ ತಪ್ಪಿದರೂ ಗಾಭರಿಯಾಗಬಾರದು. ಕೇವಲ ಕೆಲವೇ ಗಂಟೆಗಳಲ್ಲಿ ಮುಖ್ಯ ಹಾದಿ ತಲುಪಲು ಸಾಧ್ಯವಿದೆ. ಆದರೆ ಶರಣ್ಯ ದಾರಿ ತಪ್ಪಿದಾಗ ಸಿಕ್ಕಾಪಟ್ಟೆ ಗೊಂದಲಕ್ಕೊಳಗಾಗಿದ್ದಾಳೆ. ಹೀಗಾಗಿ ದಾರಿ ಹುಡುಕುವ ಅವಕಾಶವನ್ನೇ ಮಿಸ್ ಮಾಡಿಕೊಂಡು ಬೆಟ್ಟದ ಕಳಗಡೆಯ ಬಂಡೆಕಲ್ಲಿನಲ್ಲಿ ಆಶ್ರಯ ಪಡೆದಿದ್ದಾಳೆ. ಹರಿಯುವ ನೀರು ಕಂಡದ್ದರಿಂದಾಗಿ ಆಕೆ ನೀರು ಕುಡಿದೇ ನಾಲ್ಕೂ ದಿನ ಕಳೆದಿದ್ದಾಳೆ.
ನಿಜ ಸರ್. ಬಿಸ್ಕೆಟ್ ಪ್ಯಾಕೇಟ್ ಮತ್ತು ನೀರಿನ ಬಾಟಲಿ ಬಿಟ್ಟರೆ ಆಕೆ ಚಾರಣಕ್ಕೆ ಏನನ್ನೂ ಕೊಂಡೊಯ್ಯಲಿಲ್ಲ. ಹೀಗಾಗಿ ಮೊದಲ ದಿನವೇ ಬಿಸ್ಕೆಟ್ ಖಾಲಿಯಾಗಿದೆ. ನೀರು ಕುಡಿದುಕೊಂಡೇ 4 ದಿನ ಹಸಿವು ನೀಗಿಸಿದ್ದಾಳೆ. ಆಕೆಯ ದೈಯ೯ ಮೆಚ್ಚುವಂಥದ್ದು. ಮಾನಸಿಕವಾಗಿ ಮತ್ತು ದೈಹಿಕವಾಗಿ ಶರಣ್ಯ ಸೊರಗಿರಲಿಲ್ಲ ಎಂದು ವಿವರಿಸಿದರು.
ನಮಗೆ ಕಾಡಿನ ಇಂಚಿಂಚೂ ಗೊತ್ತಿದೆ. ಪ್ರತೀ ಹೆಜ್ಜೆಯಲ್ಲಿಯೂ ನಮ್ ಕಾಡಿನ ದೈವ ನಮಗೆ ನೆರವಾಗುತ್ತಾನೆ ಸರ್. ನಾವ್ ಕಾಡನ್ನೇ ನಂಬಿ ಉಸಿರಾಡೋರು.. ಕಾಡೇ ನಮ್ಮ ದೇವರು.. ನಾವು ನಂಬಿದ ದೇವರು ನಮಗೆ ಎಂದೂ ಮೋಸ ಮಾಡೋಲ್ಲ ಸಾರ್.ಅಯ್ಯಪ್ಪ ಮಾತು ಮುಗಿಸಿದರು.
ಮಾತು ಮುಗಿದಿತ್ತು. ಪಕ್ಕದ ದಟ್ಟ ಕಾಡು ಮತ್ತೆ ಮೌನಕ್ಕೆ ಜಾರಿತ್ತು…!

ಅನಿಲ್ ಎಚ್.ಟಿ.ಹಿರಿಯ ಪತ್ರಕರ್ತರು. ಕೊಡಗಿನ ಟಿವಿ1 ಸುದ್ದಿವಾಹಿನಿಯ ಪ್ರಧಾನ ಸಂಪಾದಕರು









