ಸುಳ್ಯ,: ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರವಾಗಿರುವ ಸುಳ್ಯದ ಕೆಲ ಗ್ರಾಮೀಣ ಪ್ರದೇಶಗಳಿಗೆ ಚುನಾಯಿತರು ಓಟು ಕೇಳಲು ಹೋದ ಬಳಿಕ ಮತ್ತೆ ಭೇಟಿ ನೀಡುತ್ತಿಲ್ಲ. ಇಲ್ಲಿನ ಅದೆಷ್ಟೋ ಕಾಲೋನಿಗಳ ಸ್ಥಿತಿ ಇಂದಿಗೂ ಶೋಚಾನೀಯ ಸ್ಥಿತಿಯಲ್ಲಿದೆ ಆಪ್ ಗೆಲುವು ಸಾಧಿಸಿದಲ್ಲಿ ಕಾಲೋನಿಗಳಿಗೆ ಮೂಲಸೌಕರ್ಯ ನೀಡಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಹೇಳಿದ್ದಾರೆ.
ಅವರು ಶನಿವಾರ ಸುಳ್ಯದ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೀಸಲಾತಿ ಕ್ಷೇತ್ರ ಸುಳ್ಯಕ್ಕೆ ಹೆಚ್ಚುವರಿ ಅನುದಾನ ಬರಬೇಕಾಗಿತ್ತು. ಆದರೆ ಆ ಅನುದಾನ ಏನಾಗಿದೆ ಗೊತ್ತಿಲ್ಲ. ಇಲ್ಲಿ ಅಂಬೇಡ್ಕರ್ ಭವನ, ಉದ್ಯೋಗ ಸೃಷ್ಟಿ ಆಗಿಲ್ಲ. ಜನರ ನನಗೆ ಅವಕಾಶ ಕೊಟ್ಟಲ್ಲಿ ದಿಟ್ಟ ಹೆಜ್ಜೆ ಇಟ್ಟು 110 ಕೆ.ವಿ.ಸಬ್ಸ್ಟೇಷನ್, ಗ್ರಾಮಗಳಿಗೆ ಮೂಲಭೂತ ಸೌಲಭ್ಯ ನೀಡುತ್ತೇನೆ, ಗೆಲ್ಲದೇ ಇದ್ದರೂ ಮುಂದೆಯೂ ಜನರೊಂದಿಗೆ ಇದ್ದು ಕೆಲಸ, ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದರು.
ಆಪ್ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಮಾತನಾಡಿ, ಜಿಲ್ಲೆಯ 8 ಕ್ಷೇತ್ರಗಳಲ್ಲಿ ಸಹಿತ ರಾಜ್ಯದಲ್ಲಿ 222 ಕ್ಷೇತ್ರಗಳಲ್ಲಿ ಆಪ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಸುಳ್ಯದ ಅಭ್ಯರ್ಥಿಯಾಗಿರುವ ಸುಮನಾ ಬೆಳ್ಳಾರ್ಕರ್ ಅವರು ಸ್ನಾತಕ್ಕೋತ್ತರ ಪದವಿ ಪಡೆದಿದ್ದು, ಸಮಾಜಸೇವೆಯ ದೃಷ್ಟಿಯನ್ನಿಟ್ಟುಕೊಂಡು ಪಕ್ಷಕ್ಕೆ ಸೇರಿದ್ದಾರೆ. ಸುಳ್ಯದಲ್ಲಿ ವಿರೋಧ ಪಕ್ಷ ಎಂಬುದೇ ಇಲ್ಲ ಮುಂದೆ ಆಪ್ ವಿರೋಧ ಪಕ್ಷದ ಸ್ಥಾನ ಪಡೆದು ಹೋರಾಟ ನಡೆಸಲಿದೆ ಎಂದರು. 110 ಕೆವಿ ಸಬ್ಸ್ಟೇಷನ್ ಅನುಷ್ಠಾನ, ಪುತ್ತೂರಿಗೆ ಮೆಡಿಕಲ್ ಕಾಲೇಜು, ಅಡಿಕೆ ಎಲೆ ರೋಗಕ್ಕೆ ಪರಿಹಾರ, ವೈಜ್ಞಾನಿಕ ತಳಿ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿ ಸುಳ್ಯದ ಅಭಿವೃದ್ಧಿ ಮಾಡುತ್ತೇವೆ ಎಂದು ಆಪ್ ಪಕ್ಷದ ಪ್ರಣಾಳಿಕೆ ಬಗ್ಗೆ ಮಾಹಿತಿ ನೀಡಿದರು.
ಆಪ್ ಮುಖಂಡ ಕಲಂದರ್ ಎಲಿಮಲೆ ಮಾತನಾಡಿ, ಮೇ 8ರಂದು ಸುಳ್ಯ ಕೇತ್ರದಲ್ಲಿ ಆಪ್ ವತಿಯಿಂದ ಚುನಾವಣಾ ರ್ಯಾಲಿ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಸಂಪಾಜೆಯಲ್ಲಿ ರ್ಯಾಲಿ ಆರಂಭಗೊಂಡು ಸುಳ್ಯ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ಕಡಬ, ನೆಲ್ಯಾಡಿ, ನಿಂತಿಕಲ್ಲು ಮೂಲಕ ಸಂಚರಿಸಲಿದೆ ಎಂದರು.