ಸುಳ್ಯ: ಬಿಜೆಪಿಯ ಭದ್ರ ಕೋಟೆ ಸುಳ್ಯದಲ್ಲಿ ಮತ್ತೆ ಕಮಲ ಅರಳಿದೆ. ಕಾಂಗ್ರೆಸ್ ಹಾಗೂ ಇತರ ಅಭ್ಯರ್ಥಿಗಳು ಒಡ್ಡಿದ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಭರ್ಜರಿ ಗೆಲುವು ದಾಖಲಿಸಿದ್ದಾರೆ. 30,875 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಗೆಲುವು ಸಾಧಿಸಿದ್ದಾರೆ.1994 ರಿಂದ ನಡೆದ 7 ಚುನಾವಣೆಗಳಲ್ಲಿಯೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿ ತನ್ನ
.ಅಭ್ಯರ್ಥಿಯನ್ನು ವಿಧಾನಸಭೆಗೆ ಕಳಿಸಿದೆ. ಸತತ 7 ಬಾರಿ ಗೆಲುವು ದಾಖಲಿಸಿ ಸುಳ್ಯ ತನ್ನ ಭದ್ರ ಕೋಟೆ ಎಂಬುದನ್ನು ಬಿಜೆಪಿ ಮತ್ತೆ ಸಾಬೀತುಪಡಿಸಿದೆ. ಸುಳ್ಯದಿಂದ 29 ವರ್ಷಗಳ ಬಳಿಕ ಕಾಂಗ್ರೆಸ್ ಶಾಸಕರನ್ನು ವಿಧಾನಸಭೆಗೆ ಕಳಿಸುವ ಕಾಂಗ್ರೆಸ್ ಕನಸು ಭಗ್ನವಾಗಿದೆ. ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ನೀಡಿದ್ದ ಜಿ.ಕೃಷ್ಣಪ್ಪ ಅವರಿಗೆ ಸೋಲಾಗಿದೆ. ಈ ಮಧ್ಯೆ 2562 ಮತ ಬಿದ್ದ ನೋಟಾ ಮತ ಗಳಿಕೆಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.
ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ 93,911 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 63,036 ಮತ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ 1850, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ 1587, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಗಣೇಶ್ ಎಂ.299, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ರಮೇಶ್ ಬೂಡು 575, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸುಂದರ ಮೇರ 398, ಪಕ್ಷೇತರ ಅಭ್ಯರ್ಥಿ ಗುರುವಪ್ಪ ಕಲ್ಲುಗುಡ್ಡೆ 513 ಮತ ಪಡೆದಿದ್ದಾರೆ. ನೋಟಾಕ್ಕೆ 2562 ಮತ ಬಿದ್ದಿದೆ.