*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಸಣ್ಣಗೆ ಮಳೆಯ ಹನಿ ಸುರಿಯುತ್ತಿದ್ದರೆ ಒಂದು ಕಾಫಿಯ ಜೊತೆಗೆ ಒಂದು ಕರಿದ ಸಿಹಿ ತಿಂಡಿ ಯಾರಿಗೆ ಇಷ್ಟ ಇಲ್ಲಾ ಹೇಳಿ.. ಇಲ್ಲಿ ಒಂದಲ್ಲಾ.. ಎರಡಲ್ಲಾ.. 30 ಕ್ಕೂ ಹೆಚ್ಚು ಬಾಯಲ್ಲಿ ನೀರೂರಿಸುವ ಘಮ ಘಮಿಸುವ ರುಚಿಕರವಾದ ತಿಂಡಿ ತಿನಿಸುಗಳು.. ನಾಲಗೆಗೆ ರಚಿಯ ವೈವಿಧ್ಯತೆ ಸಾರಿದ ಒಂದಕ್ಕೊಂದು ಭಿನ್ನವಾದ ತಿಂಡಿಗಳ ರಾಶಿಗಳು… ಯಾವುದು ತಿನ್ನುವುದು.. ಯಾವುದು ಬಿಡುವುದು ಎಂಬ ಕನ್ಫ್ಯೂಷನ್ ತರಿಸುವಷ್ಟು
ಭಿನ್ನತೆ. ಸುಳ್ಯದ ಶಿವಳ್ಳಿ ಸಂಪನ್ನದ ತಿಂಡಿಮೇಳ ಈ ವರ್ಷವೂ ನೆರೆದ ಜನರ ನಾಲಗೆಗೆ ಭರಪೂರ ರುಚಿಯನ್ನು ಉಣ ಬಡಿಸಿ ಸಂಪನ್ನಗೊಂಡಿತು.
ಮಳೆಗಾಲದಲ್ಲಿ ಹಾಗೂ ಇತರ ದಿನಗಳಲ್ಲಿ ಮನೆ ಮನೆಗಳಲ್ಲಿ ಮಾಡುವ ವಿವಿಧ ತಿಂಡಿಗಳ ರುಚಿ ಮತ್ತು ಪರಿಚಯ ಎಲ್ಲರಿಗೂ ತಿಳಿಸಬೇಕು. ಜೊತೆಗೆ ಎಲ್ಲರೂ ಒಟ್ಟಾಗಿ ತಿಂಡಿಯ ರುಚಿ ಸವಿದು ಸಂಭ್ರಮಮಿಸಬೇಕು ಎಂಬ ನೆಲೆಯಲ್ಲಿ ಶಿವಳ್ಳಿ ಸಂಪನ್ನದ ವತಿಯಿಂದ ಪ್ರತಿ ವರ್ಷ ತಿಂಡಿ ಮೇಳ ಆಯೋಜನೆ ಮಾಡಲಾಗುತ್ತದೆ. ಸಂಘಟನೆ ಇನ್ನಷ್ಟು ಗಟ್ಟಿಯಾಗಬೇಕು ಕುಟುಂಬಗಳ ಮಧ್ಯೆಯ ಸ್ನೇಹ, ಭಾಂಧವ್ಯ ಇನ್ನಷ್ಟು
ಸದೃಢವಾಗಬೇಕು ಎಂಬ ನೆಲೆಯಲ್ಲಿ ಸಂಘಟನೆ ಕಳೆದ 15 ವರ್ಷಗಳಿಂದ ತಿಂಡಿ ಮೇಳವನ್ನು ಆಯೋಜಿಸುತ್ತಾ ಬಂದಿದೆ. ಪಯಸ್ವಿನಿ ತಟದ ಶ್ರೀ ಗುರು ರಾಘವೇಂದ್ರ ಮಠದ ಸಭಾ ಭವನದಲ್ಲಿ ನಡೆದ ತಿಂಡಿ ಮೇಳ ಈ ಬಾರಿಯೂ ವೈವಿಧ್ಯ ರುಚಿಯ ಅನುಭವವನ್ನು ನೀಡಿತು.
ರುಚಿಕರವಾದ ಅಡುಗೆ ತಯಾರಿಸುವುದರಲ್ಲಿ ಶಿವಳ್ಳಿ ಬ್ರಾಹ್ಮಣ ಕುಟುಂಬಗಳು ಸದಾ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. ಆದುದರಿಂದಲೇ ಪ್ರತಿ ಕುಟುಂಬಗಳು ತಯಾರಿಸಿದ ತಿಂಡಿಗಳು ರುಚಿಯಲ್ಲಿ ಇನ್ನಿಲ್ಲದ ಸ್ವಾದ, ಭಿನ್ನತೆ. ಒಂದೊಂದು ಕುಟುಂಬಗಳು ಒಂದೊಂದು ರೀತಿಯ ಬೇರೆ ಬೇರೆ ರುಚಿಯ ತಿಂಡಿ ತಿನಿಸುಗಳನ್ನು ಮಾಡಿ ತಂದು ಉಣ ಬಡಿಸಿದರು. ಪ್ರಾಕೃತಿಕವಾಗಿ ದೊರೆಯುವ ವಸ್ತುಗಳನ್ನು ಬಳಸಿಯೇ ಬಹುತೇಕ ತಿಂಡಿಗಳನ್ನು ತಯಾರಿಸಲಾಗಿತ್ತು. 21 ಕೌಂಟರ್ಗಳಲ್ಲಿ 30ಕ್ಕೂ ಹೆಚ್ಚು ತಿಂಡಿಗಳಿದ್ದವು. ಪ್ರತಿ ತಿಂಡಿಯ ಹೆಸರನ್ನು ಪ್ರದರ್ಶಿಸಲಾಗಿತ್ತು. ಅದನ್ನು ಮಾಡುವ ವಿಧಾನವನ್ನು ವಿವರಿಸಿ ಹೇಳಲಾಗುತ್ತಿತ್ತು.
ಈ ಬಾರಿ ಇದ್ದ ವಿಶೇಷ ಖಾದ್ಯಗಳು:
ಗುಳಿ ಅಪ್ಪ ಚಟ್ನಿ, ಫ್ಲವರ್ ಸಮೋಸ, ಸಿಹಿ ಪತ್ರೊಡೆ, ಶಂಕರ್ಪೋಲಿ, ತುಕುಡಿ, ಪೆಲಕಾಯಿ ಸೋಂಟೆ, ಉಂಡ್ಲಕ, ಟೊಮೆಟೊ ಸೂಪ್, ಚಿಲ್ಲಿ, ಸಜ್ಜಿಗೆ ಕೇಸರಿಬಾತ್, ಗೊದಿ ಹಲ್ಬಾಯಿ, ಕ್ಯಾಬೇಜ್ ಪಕೋಡಾ, ಚಟ್ನಿ, ಸಾಸ್, ಖಾರ ಪತ್ರೊಡೆ, ಕ್ಯಾಪ್ಸಿಕಂ ಬಾತ್, ಕ್ಯಾರೆಟ್ ಹಲ್ವ,ಮೆಂತೆ ಸೊಪ್ಪಿನ ಪಲಾವ್, ಅರಳಿನ ಉಂಡೆ, ಅವಲಕ್ಕಿ ಚೂಡ, ಕಾಯಿ ಕಜ್ಜಾಯ, ಸಪ್ಸಿಗೆ ಫಲಾವ್, ಪೆಲಕಾಯಿ ಒಗ್ಗರಣೆ, ಉಂಡ್ಲಕ, ಬೀಟ್ರೋಟ್ ಕಟ್ಲೇಟ್, ಕ್ಯಾರೆಟ್ ಕೀರ್, ನಿಪ್ಪಟ್ಟು, ಪಂಚ ಕಜ್ಜಾಯ ಹೀಗೆ ವೈವಿಧ್ಯ ತಿಂಡಿಗಳು ನೆರೆದ ಜನರ ಬಾಯಿಗೆ ರುಚಿಯ ಅನನ್ಯತೆಯನ್ನು ಧಾರೆಯೆರೆಯಿತು.
ಹಿರಿಯ ಪತ್ರಕರ್ತ ಹಾಗೂ ಶಿವಳ್ಳಿ ಸಂಪನ್ನದ ಮಾಜಿ ಅಧ್ಯಕ್ಷ ಗಂಗಾಧರ ಮಟ್ಟಿ ಗೋಳಿ ಬಜೆಯನ್ನು ಎಣ್ಣೆಗೆ ಬಿಡುವ ಮೂಲಕ ತಿಂಡಿಮೇಳವನ್ನು ಉದ್ಘಾಟಿಸಿದರು. ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಶಿವಳ್ಳಿ ಸಂಪನ್ನದ ಅಧ್ಯಕ್ಷ ರಮೇಶ್ ಕುಮಾರ್, ಕಾರ್ಯದರ್ಶಿ ನವೀನ ಸೋಮಯಾಗಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಮೂಡಿತ್ತಾಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ನಾವಡ, ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಅಖಿಲ್ ಸೋಮಯಾಗಿ ಮತ್ತಿತರರು ಉಪಸ್ಥಿತರಿದ್ದರು.