ಕೋಝಿಕೋಡ್:ಮರಣದಂಡನೆಗೆ ಗುರಿಯಾಗಿ ಕಳೆದ 18 ವರ್ಷಗಳಿಂದ ಸೌದಿ ಆರೇಬಿಯಾದ ಜೈಲಿನಲ್ಲಿರುವ ಕೇರಳದ ಕ್ಯಾಲಿಕಟ್ ಮೂಲದ ಅಬ್ದುಲ್ ರಹೀಂನ ಬಿಡುಗಡೆಗಾಗಿ ಇಡೀ ಕೇರಳ ರಾಜ್ಯವೇ ಜಾತಿ, ಧರ್ಮ ಮೀರಿ ಒಂದಾದರು, ಆತನ ಬಿಡುಗಡೆಗೆ ಬೇಕಿದ್ದ ದಯಾ ನಿಧಿ 34 ಕೋಟಿ ರೂ.ಸಂಗ್ರಹಿಸಿ ಇಡೀ ವಿಶ್ವದ ಗಮನವನ್ನೇ ತನ್ನೆಡೆಗೆ ಸೆಳೆದಿದ್ದಾರೆ. ಕರುಣೆ ಹರಿಸಿದ ಮಾನವೀಯತೆಯ ಅದ್ಭುತ ಸ್ಟೋರಿ ರಚಿಸಿದ್ದಾರೆ.
ಡ್ರೈವರ್ ವಿಸಾದಲ್ಲಿ ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ತೆರಳಿದ್ದ ಅಬ್ದುಲ್ ರಹೀಂ 2006ರಲ್ಲಿ
ಕೊಲೆ ಆರೋಪದಲ್ಲಿ ಜೈಲು ಸೇರಿದ್ದರು. ಆಗ ಅಬ್ದುಲ್ ರಹೀಂಗೆ ಕೇವಲ 26 ವರ್ಷವಾಗಿತ್ತು. ಡ್ರೈವರ್ ವಿಸಾದಲ್ಲಿ ತೆರಳಿದ್ದ ರಹೀಂಗೆ ತನ್ನ ಪ್ರಾಯೋಜಕ ಅರಬಿಯ ಪುತ್ರ ಕುತ್ತಿಗೆ ಕೆಳಗೆ ಬಲಹೀನಗೊಂಡ ಬಾಲಕನನ್ನು ನೋಡಿಕೊಳ್ಳುವುದು ಪ್ರಮುಖ ಕೆಲಸವಾಗಿತ್ತು. ಕುತ್ತಿಗೆಗೆ ಅಳವಡಿಸಲಾಗಿದ್ದ ಉಪಕರಣದ ಮೂಲಕ ಅವನಿಗೆ ಅನ್ನ, ಆಹಾರವನ್ನು ನೀಡಲಾಗುತ್ತಿತ್ತು. ಆದರೆ 2006 ಡಿಸೆಂಬರ್ 24ರಂದು ಆತನನ್ನು ಕಾರಿನಲ್ಲಿ ಕೊಂಡೊಯ್ಯುವ ವೇಳೆ ಪ್ರಮಾದ ವಶಾತ್ ಅಬ್ದುಲ್ ರಹೀಂನ ಕೈ ತಾಗಿ ಕುತ್ತಿಗೆಗೆ ಅಳವಡಿಸಿದ್ದ ವಿಶೇಷ ಉಪಕರಣ ಕಳಚಿ ಬಿದ್ದಿತ್ತು. ಇದರಿಂದಾಗಿ ಬಾಲಕನ ಆರೋಗ್ಯ ಹದಗೆಟ್ಟಿದ್ದಲ್ಲದೇ, ಬಳಿಕ ಮೃತಪಟ್ಟಿದ್ದ. ಕೊಲೆ ಆರೋಪದ ಮೇಲೆ ಜೈಲು ಪಾಲಾಗಿದ್ದ ಅಬ್ದುಲ್ ರಹೀಂಗೆ ವಿಚಾರಣೆ ಬಳಿಕ ರಿಯಾದ್ನ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.
ಶಿಕ್ಷೆಯಿಂದ ಪಾರುಗೊಳಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಪ್ರಯತ್ನಗಳು ನಡೆದರೂ ಮೃತ ಬಾಲಕನ ಕುಟುಂಬ ಕ್ಷಮಾಪಣೆ ನೀಡಿರಲಿಲ್ಲ. ಕೊನೆಗೆ 34 ಕೋಟಿ ರೂ. ದಯಾ ನಿಧಿ ನೀಡಿದರೆ ಕ್ಷಮಾಪಣೆ ನೀಡಿ ಜೈಲಿನಿಂದ ಬಿಡುಗಡೆ ಗೊಳಿಸುವುದಾಗಿ ಮೃತ ಬಾಲಕನ ಪೋಷಕರು ಹೇಳಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಅಬ್ದುಲ್ ರಹೀಂ ನ್ಯಾಯಾಲಯದ ವಿಧಿಯಂತೆ ಮರಣ ದಂಡನೆಗೆ ಒಳಗಾಗಬೇಕಿತ್ತು. 34 ಕೋಟಿ ರೂ. ಸಂಗ್ರಹಿಸಲಾಗದೆ ಕ್ಯಾಲಿಕಟ್ನಲ್ಲಿದ್ದ ರಹೀಂ ಕುಟುಂಬ ಆಸೆಯನ್ನೇ ಬಿಟ್ಟಿದ್ದರು. ಆದರೆ ತೀರ್ಪು ಅನುಷ್ಠಾನಗೊಳಿಸುವ ದಿನ ಹತ್ತಿರ ಬರುತ್ತಿದ್ದಂತೆ ಕೇರಳದ ಜನ ಒಟ್ಟಾದರು. ಅಬ್ದುಲ್ ರಹೀಂ ಬಿಡುಗಡೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಅಭಿಯಾನವನ್ನೇ ನಡೆಸಿದರು. ಕ್ರೌಡ್ ಫಂಡ್ ಸಂಗ್ರಹಿಸುವ ನಿಟ್ಟಿನಲ್ಲಿ ಸೇವ್ ಅಬ್ದುಲ್ ರಹೀಂ ಎಂಬ ಆ್ಯಪ್ ರಚಿಸಿ ಹಣ ಸಂಗ್ರಹ ಮಾಡತೊಡಗಿದರು.
ಆರಂಭಿಕ ಹಂತದಲ್ಲಿ ಕೇವಲ ಲಕ್ಷಗಳಷ್ಟೇ ಹಣ ಸಂಗ್ರಹವಾಗಿತ್ತು. ಬಳಿಕ ಪ್ರಚಾರವನ್ನು ತೀವ್ರಗೊಳಿಸಲಾಗಿತ್ತು. ಇದಕ್ಕೆ ಕೇರಳದ ಪ್ರಮುಖ ಸ್ವರ್ಣ ಉದ್ಯಮಿ ಬೋಬಿ ಚೆಮ್ಮನ್ನೂರು ಕೈ ಜೋಡಿಸಿ ಧನ ಸಂಗ್ರಹಕ್ಕೆ ನೇತೃತ್ವ ವಹಿಸಿದಾಗ ಹಣ ಮತ್ತಷ್ಟು ವೇಗವಾಗಿ ಸಂಗ್ರಹವಾಗತೊಡಗಿತು.
ಇದೀಗ 34 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಈ ಮೊತ್ತವನ್ನು ನೀಡಿ ರಹೀಂ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.