ಧರ್ಮಶಾಲ: ಐಪಿಎಲ್ನ 66ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 4 ವಿಕೆಟ್ಗಳ ಅಂತರದಿಂದ ಮಣಿಸಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 188 ರನ್ ಗುರಿ ಪಡೆದಿದ್ದ ರಾಜಸ್ಥಾನ 19.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಗೆದ್ದರೂ 14 ಪಂದ್ಯಗಳಿಂದ 14 ಅಂಕ ಪಡೆದ ರಾಯಲ್ಸ್ ಪ್ಲೇ ಆಫ್
ಪ್ರವೇಶಕ್ಕೆ ಇತರ ತಂಡಗಳ ಸೋಲು-ಗೆಲುವನ್ನು ಅವಲಂಬಿಸಬೇಕಾಗಿದೆ. ತಮ್ಮ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಭಾರೀ ಅಂತರದಲ್ಲಿ ಸೋತರೆ ಮಾತ್ರ ರಾಜಸ್ಥಾನಕ್ಕೆ ಪ್ಲೇ ಆಫ್ ಪ್ರವೇಶ ಸಾಧ್ಯತೆ ತೆರೆದುಕೊಳ್ಳಲಿದೆ.
ರಾಜಸ್ಥಾನ ಪರ ದೇವದತ್ತ ಪಡಿಕ್ಕಲ್(51 ರನ್, 30 ಎಸೆತ) ಹಾಗೂ ಯಶಸ್ವಿ ಜೈಸ್ವಾಲ್(50 ರನ್,36 ಎಸೆತ) ಅರ್ಧಶತಕದ ಕೊಡುಗೆ ನೀಡಿದರೆ
ಶಿಮ್ರನ್ ಹೆಟ್ಮೆಯರ್(46 ರನ್, 28 ಎಸೆತ) ,ರಿಯಾನ್ ಪರಾಗ್(20 ರನ್, 12 ಎಸೆತ)ಹಾಗೂ ಧ್ರುವ್ ಜುರೆಲ್(ಔಟಾಗದೆ 10) ಎರಡಂಕೆಯ ಸ್ಕೋರ್ ಗಳಿಸಿದರು.ಪಂಜಾಬ್ ಪರ ಕಾಗಿಸೊ ರಬಾಡ(2-40)ಯಶಸ್ವಿ ಬೌಲರ್ ಎನಿಸಿಕೊಂಡರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಆಲ್ರೌಂಡರ್ ಸ್ಯಾಮ್ ಕರನ್(ಔಟಾಗದೆ 49, 31 ಎಸೆತ), ಜಿತೇಶ್ ಶರ್ಮಾ(44 ರನ್, 28 ಎಸೆತ) ಹಾಗೂ ಶಾರೂಖ್ ಖಾನ್(ಔಟಾಗದೆ 41 ರನ್, 23 ಎಸೆತ)ಅವರ ಸಂಘಟಿತ ಪ್ರಯತ್ನದ ಫಲವಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು.