ಮುಂಬೈ:ಐಪಿಎಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲು ಅನುಭವಿಸಿತು. ಇತ್ತ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವು ಆಡಿದ ಮೂರು ಪಂದ್ಯ ಗೆದ್ದು ಗೆಲುವಿನ ‘ಹ್ಯಾಟ್ರಿಕ್’ ಸಾಧನೆ ಮಾಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೇಗದ ಬೌಲರ್
ಟ್ರೆಂಟ್ ಬೌಲ್ಟ್ (22ಕ್ಕೆ3), ಸ್ಪಿನ್ನರ್ ಯಜುವೇಂದ್ರ ಚಾಹಲ್ (11ಕ್ಕೆ3) ಅವರ ದಾಳಿ ಮತ್ತು ರಿಯಾನ್ ಪರಾಗ್ ಅರ್ಧಶತಕದ ಬಲದಿಂದ ರಾಯಲ್ಸ್ ತಂಡವು 6 ವಿಕೆಟ್ಗಳಿಂದ ಜಯಿಸಿತು.
ಟಾಸ್ ಗೆದ್ದ ರಾಯಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು 15.3 ಓವರ್ಗಳಲ್ಲಿ 4 ವಿಕೆಟ್ಗಳಿಗೆ 127 ರನ್ ಗಳಿಸಿತು. ರಿಯಾನ್ ಪರಾಗ್ (54 ರನ್) ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ಪರ ತಿಲಕ್ ವರ್ಮಾ (32, 29ಎಸೆತ) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (34, 21ಎ, 4×6) ಸೇರಿ 36ಎಸೆತಗಳಲ್ಲಿ 56 ರನ್ ಸೇರಿಸಿ ಚೇತರಿಕೆ ನೀಡಿದ್ದರು.