ಬೆಂಗಳೂರು:ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಭರ್ಜರಿ ಇನ್ನಿಂಗ್ಸ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ದಿನೇಶ್ ಕಾರ್ತಿಕ್ ಹಾಗೂ ಮಹಿಪಾಲ್ ಲ್ಯಾಮ್ರೋರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ರೋಯಲ್ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ
ಪಂಜಾಬ್ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 176 ರನ್ ಗಳಿಸಿತು. 177 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ 19.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನನ ನೀಡಿದ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 77 ರನ್ ಸಿಡಿಸಿದರು. ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ಏಕಾಂಗಿಯಾಗಿ ಸ್ಕೋರ್ ಏರಿಸುತ್ತಾ ಹೋದರು. ನಾಯಕ ಪ್ಯಾಫ್ ಡುಪ್ಲೆಸಿಸ್( 3), ಕ್ಯಾಮರೂನ್ ಗ್ರೀನ್(3), ರಜತ್ ಪಾಟೀದಾರ್(18), ಗ್ಲೆನ್ ಮ್ಯಾಕ್ಸ್ವೆಲ್(3), ಅನೂಜ್ ರಾವತ್ ನಿರಾಶೆ ಮೂಡಿಸಿದರು.
ಈ ಹಂತದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಲ್ಯಾಮ್ರರೋರ್ ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲಿವಿನ ಉಡುಗೊರೆ ನೀಡಿದರು. ದಿನೇಶ್ ಕಾರ್ತಿಕ್ ಕೇವಲ 10 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ ಅಜೇಯ 28 ರನ್ ಗಳಿಸಿದರೆ, ಲ್ಯಾಮ್ರೋರ್ 8 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 17 ರನ್ ಗಳಿಸಿದರು. ಇವರಿಬ್ಬರು ಸೇರಿ 7ನೇ ವಿಕೆಟ್ಗೆ 18 ಎಸೆತಗಳಲ್ಲಿ48 ರನ್ ಸಿಡಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಪರ ನಾಯಕ ಶಿಖರ್ ಧವನ್ (45; 37ಎ, 4X5, 6X1) ರನ್ ಗಳಿಸಿದರು.ಆರ್ಸಿಬಿಯ ವಿಕೆಟ್ಕೀಪರ್ ಅನುಜ್ ರಾವತ್ ನಾಲ್ಕು ಕ್ಯಾಚ್ ಪಡೆದು ಗಮನ ಸೆಳೆದರು. ಮಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತಲಾ ಎರಡು ವಿಕೆಟ್ ಪಡೆದರು.