ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ 4 ವಿಕೆಟ್ ಗೆಲುವು ದಾಖಲಿಸಿದೆ.ಮೊದಲು ಬ್ಯಾಟ್ ಮಾಡಿದ ಗುಜರಾತ್ 19.3 ಓವರ್ಗಳಲ್ಲಿ 147 ರನ್ ಗಳಿಸಿತು. ಆರ್ಸಿಬಿ 13.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಗೆಲುವಿನ ನಗೆ ಬೀರಿತು. ನಾಯಕ ಪಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಆರ್ಸಿಬಿಗೆ ಸ್ಪೋಟಕ ಆರಂಭ
ನೀಡಿದರು. ಮೊದಲ ವಿಕೆಟ್ಗ್ ಇವರು 5.5 ಓವರ್ಗಳಲ್ಲಿ 92 ರನ್ ಜೊತೆಯಾಟ ಕಟ್ಟಿದರು. ಡುಪ್ಲೆಸಿಸ್ ಕೇವಲ 23 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 64 ರನ್ ಸಿಡಿಸಿದರು. 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ಡುಪ್ಲೆಸಿಸ್ ಐಪಿಎಲ್ನ ಎರಡನೇ ಅತಿ ವೇಗದ ಅರ್ಧ ಶತಕ ಬಾರಿಸಿದರು.
ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು. ಆದರೆ ಆರ್ಸಿಬಿ ಮಧ್ಯಮ ಬ್ಯಾಟಿಂಗ್ ಮತ್ತೊಮ್ಮೆ ವಿಫಲವಾಯಿತು. ವಿಕೆಟ್ ನಷ್ಟವಿಲ್ಲದೆ 92 ಎಂಬ ಭದ್ರವಾದ ಸ್ಥಿತಿಯಿಂದ 117 ರನ್ಗೆ 6 ವಿಕೆಟ್ ಎಂಬ ಸ್ಥಿತಿಗೆ ಕುಸಿಯಿತು. ವಿಲ್ ಜಾಕ್ಸ್ 1, ರಜತ್ ಪಾಟಿದಾರ್ 2, ಗ್ಲೆನ್ ಮ್ಯಾಕ್ಸ್ವೆಲ್ 4, ಕ್ಯಾಮರೂನ್ ಗ್ರೀನ್ 1 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಲ್ ಸಿಂಗ್ 7 ನೇ ವಿಕೆಟ್ಗೆ 35 ರನ್ ಸೇರಿಸಿ ಗೆಲುವಿನ ದಡ ಸೇರಿಸಿದರು. ಕಾರ್ತಿಕ್ 12 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ ಅಜೇಯ 21 ರನ್ ಬಾರಿಸಿದರೆ, ಸ್ವಪ್ನಲ್ ಸಿಂಗ್ 9 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 15 ರನ್ ಬಾರಿಸಿದರು.
ಇದಕ್ಕೂ ಮೊದಲು ಆರ್ಸಿಬಿ ಬೌಲರ್ಗಳ ಬಿಗು ದಾಳಿ ಮುಂದೆ ಗುಜರಾತ್ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಮೊದಲ 6 ಓವರ್ ಪವರ್ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 23 ರನ್ಗಳಷ್ಟೇ ಗಳಿಸಿತ್ತು. ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಉತ್ತಮ ಬ್ಯಾಟಿಂಗ್ ನಡೆಸಿ ಸಾಧಾರಣ ಮೊತ್ತ ಪೇರಿಸಲು ನೆರವಾದರು.
ಶಾರುಖ್ ಖಾನ್ 24 ಎಸೆತಗಳಲ್ಲಿ 37 ರನ್, ಡೇವಿಡ್ ಮಿಲ್ಲರ್ 20 ಎಸೆತಗಳಲ್ಲಿ 30 ರನ್, ರಾಹುಲ್ ತೆವಾಟಿಯ 21 ಎಸೆತಗಳಲ್ಲಿ 35, ರಶೀದ್ ಖಾನ್ 14 ಎಸೆತಗಳಲ್ಲಿ18 ರನ್ ಬಾರಿಸಿದರು. ಆರ್ಸಿಬಿ ಪರ ಮಹಮ್ಮದ್ ಸಿರಾಜ್,
ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವೈಶಾಕ್ ವಿಜಕುಮಾರ್ ತಲಾ ಎರಡು ವಿಕೆಟ್ ಪಡೆದರು.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಟಾಸ್ ಗೆದ್ದ ಫಫ್ ಡುಪ್ಲೆಸಿ ಬಳಗವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.11 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿರುವ ಆರ್ಸಿಬಿ ಪ್ಲೇ ಆಪ್ ಸಾಧ್ಯತೆಯನ್ನು ಜೀವಂತವಾಗಿರಿಸಿದೆ.