ಸುಳ್ಯ:ನಮ್ಮ ಬದುಕಿಗೆ ಶ್ರೀರಾಮನು ಮಹಾ ಮೌಲ್ಯಗಳನ್ನು ನೀಡಿದ್ದಾರೆ. ನಮ್ಮ ಬದುಕಿನ ಗುರಿಯನ್ನು ಮುಟ್ಟಲು ಶ್ರೀರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ
ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಸುಳ್ಯ ಶ್ರೀರಾಮ ಪೇಟೆಯ ಶ್ರೀರಾಮ ಮಂದಿರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀರಾಮನ ಆದರ್ಶ ಮತ್ತು
ಜೀವನ ಸಂಹಿತೆ ಸಾರ್ವಕಾಲಿಕ. ಧರ್ಮ ಸಾಧನೆಗೆ, ಮನಸ್ಸಿನ ಚಾಂಚಲ್ಯಗಳನ್ನು ಮೀರಿ ಬದುಕನ್ನು ಮುನ್ನಡೆಸಲು ಶ್ರೀರಾಮನ ಆದರ್ಶ ನಮಗೆ ದಾರಿದೀಪ. ಶ್ರೀರಾಮನ ಆದರ್ಶಗಳನ್ನು ಅನುಸರಿಸಬೇಕು ಅದನ್ನು ಅನುಕರಿಸಬಾರದು ಎಂದು ಅವರು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ‘ಭಕ್ತಿಯಿಂದ ಮಾಡುವ ಸೇವೆಯಿಂದ ಭಗವಂತನ ಅನುಗ್ರಹ ಪಡೆಯಲು ಸಾಧ್ಯ. ಭಕ್ತಿಯ ಸೇವೆ ಮತ್ತು ಭಜನೆಯ ಮೂಲಕ ಬದುಕಿನಲ್ಲಿ ಪರಿವರ್ತನೆ ಸಾಧ್ಯ ಎಂದು ಹೇಳಿದರು.ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆದ ಇದೇ ಸಂದರ್ಭದಲ್ಲಿ ಸುಳ್ಯದ ಶ್ರೀರಾಮ ಮಂದಿರದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರುವುದು ನಮ್ಮ ಪುಣ್ಯ ಎಂದು ಅವರು ಹೇಳಿದರು.

ಧಾರ್ಮಿಕ ಉಪನ್ಯಾಸ ನೀಡಿದ ಮಧ್ವಾಧೀಶ ವಿಠಲದಾಸ ನಾಮಾಂಕಿತರಾದ ರಾಮಕೃಷ್ಣ ಕಾಟುಕುಕ್ಕೆ ಮಾತನಾಡಿ’ ಬದುಕಿನ ಸಾರ್ಥಕ್ಯತೆಗೆ ಭಜನೆ ಆಧಾರ. ಭಜನೆಯಿಂದ ಭಗವಂತ ಒಲಿಯುತ್ತಾನೆ ಎಂದು ಹೇಳಿದರು.
ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಉಪೇಂದ್ರ ಪ್ರಭು ಕೆ ಅಧ್ಯಕ್ಷತೆ ವಹಿಸಿದ್ದರು. ಮಹಾ ದ್ವಾರವನ್ನು ಎ.ಒಎಲ್.ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಿದರು. ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಅತಿಥಿಗಳಾಗಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ, ಕೋಶಾಧಿಕಾರಿ ಡಾ.ಲೀಲಾಧರ್ ಡಿ.ವಿ, ಆರ್ಥಿಕ ಸಮಿತಿಯ ಸಂಚಾಲಕರಾದ ಅಶೋಕ್ ಪ್ರಭು, ಧರ್ಮದರ್ಶಿ ಮಂಡಳಿಯ ಕಾರ್ಯದರ್ಶಿ ಎನ್.ಶ್ರೀನಿವಾಸ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರ್ಥಿಕ ಸಮಿತಿಯ ಸಂಚಾಲಕರಾದ ಅಶೋಕ್ ಪ್ರಭು ಸ್ವಾಗತಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಡಾ.ಲೀಲಾಧರ್ ಡಿ.ವಿ ವಂದಿಸಿದರು. ಆರತಿ ಕೇರ್ಪಳ ಪ್ರಾರ್ಥಿಸಿದರು. ಶಿವಪ್ರಸಾದ್ ಆಲೆಟ್ಟಿ ಮತ್ತು ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.
ಬಲಿಕ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸ ಭಕ್ತಿಗಾನ ಮಂಜರಿ ಕಾರ್ಯಕ್ರಮ ನಡೆಯಿತು.