ಬೆಂಗಳೂರು:ಬೆಂಗಳೂರು ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ ಸೇರಿ ರಾಜ್ಯದ ವಿವಿಧ ಕಡೆ ಶುಕ್ರವಾರ ಸಂಜೆ ಮಳೆಯಾಗಿದೆ.ಬೆಂಗಳೂರು ನಗರದ ಹಲವೆಡೆ ಮಧ್ಯಾಹ್ನ 2.30ರಿಂದ 3ಗಂಟೆಯವರೆಗೆ ಬಿರುಸಿನ ಮಳೆಯಾಯಿತು.ಮೈಸೂರು ನಗರ ಸೇರಿ ಜಿಲ್ಲೆಯ ವಿವಿಧೆಡೆ
ಸಂಜೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಯಿತು. ಜಿಲ್ಲೆಯ ಬಿಳಿಕೆರೆ, ಕೆ.ಆರ್.ನಗರ, ಧರ್ಮಾಪುರ, ಪಿರಿಯಾಪಟ್ಟಣ, ಹುಣಸೂರು, ತಿ.ನರಸೀಪುರ, ನಂಜನಗೂಡು, ಬೆಟ್ಟದಪುರದಲ್ಲಿ ಮಳೆ ತಂಪೆರೆಯಿತು.ಚಾಮರಾಜನಗರ ಜಿಲ್ಲೆಯಲ್ಲಿ ಮಳೆಯಾಗಿದೆ.
ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಮದ್ದೂರು, ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ, ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಗಾಳಿ, ಗುಡುಗು, ಸಿಡಿಲಿನ ಮಳೆ ಸುರಿಯಿತು. ನಾಪೋಕ್ಲು ವ್ಯಾಪ್ತಿಯಲ್ಲಿ ಬಿರುಗಾಳಿ ಬೀಸಿತು. ಗೋಣಿಕೊಪ್ಪಲು, ಪೊನ್ನಂಪೇಟೆ, ಬೇಗೂರು, ಬಿ. ಶೆಟ್ಟಿಗೆರಿ, ಕುಂದ ಭಾಗಕ್ಕೆ ವರ್ಷದ ಮೊದಲ ಮಳೆ ಸುರಿಯಿತು. ವಿರಾಜಪೇಟೆ, ಸಿದ್ದಾಪುರ ಭಾಗದಲ್ಲೂ ಮಳೆ ಸುರಿದಿದೆ. ಹಾಸನ ಜಿಲ್ಲೆಯ ಅರಕಲಗೂಡು, ಹಳೇಬೀಡಿನಲ್ಲಿ ತುಂತುರು ಮಳೆಯಾಯಿತು. ರಾಮನಗರ, ಕೋಲಾರ ಜಿಲ್ಲೆಯಲ್ಲಿ ಮಳೆಯಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ, ಸುಬ್ರಹ್ಮಣ್ಯ ಭಾಗದಲ್ಲಿ ಉತ್ತಮ ಮಳೆಯಾಗಿದೆ.
ಇಂದು ಮಳೆ ಸಾಧ್ಯತೆ:
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರವೂ ಬಿಸಿ ಗಾಳಿ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಬೆಂಗಳೂರು ಸೇರಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಕೊಡಗು ಮೈಸೂರು ಮಂಡ್ಯ ರಾಮನಗರ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಇದೇ 6ರವರೆಗೂ ಒಣಹವೆ ಇರಲಿದ್ದು 7ರಿಂದ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. 9ರಿಂದ ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಹಗುರ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.