ಸುಳ್ಯ: ಒಂದು ವಾರದಿಂದ ಬಿರುಸಿನಿಂದ ಸುರಿದ ಮಳೆ ಇಳಿಮುಖವಾಗಿದೆ. ಎರಡು ದಿನಗಳಿಂದ ಮಳೆ ಕಡಿಮೆಯಾಗಿದೆ. ಶನಿವಾರ ಮತ್ತು ಭಾನುವಾರ ಕೆಲವು ಮಳೆ ಸುರಿದರೂ ಬಿರುಸು ಕಡಿಮೆಯಾಗಿದೆ. ನೀರಿನ ಹರಿವು ಏರಿಕೆಯಾಗಿ ಅಪಾಯಮಟ್ಟದಲ್ಲಿ
ಹರಿಯುತ್ತಿದ್ದ ನೇತ್ರಾವತಿ, ಕುಮಾರಧಾರ, ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದೆ.
ಮಳೆ ಪ್ರಮಾಣವು ಸೋಮವಾರದಿಂದ ಇನ್ನಷ್ಟು ಕಡಿಮೆಯಾಗಲಿದೆ. ಸತತವಾಗಿ ‘ರೆಡ್ ಅಲರ್ಟ್’ನಲ್ಲಿದ್ದ ಕರಾವಳಿಯ ಜಿಲ್ಲೆಗಳು ‘ಯೆಲ್ಲೊ ಅಲರ್ಟ್’ಗೆ ಬರಲಿವೆ. ರೆಡ್ ಅಲರ್ಟ್ನಲ್ಲಿದ್ದ ಮಲೆನಾಡಿನ ಜಿಲ್ಲೆಗಳು ಸಾಮಾನ್ಯ ಸ್ಥಿತಿಗೆ ಬರಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.