ಮಂಗಳೂರು:ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುರುವಾರ ಮಳೆಯಾಗಿದೆ.ಮಂಗಳೂರು ನಗರ ಸೇರಿ ವಿವಿಧ ಕಡೆ ರಾತ್ರಿಯಿಂದಲೇ ಮೋಡ ಕವಿದ ವಾತಾವರಣವಿದ್ದು, ಬೆಳಗ್ಗೆ ಮಳೆ ಆರಂಭಗೊಂಡಿದೆ. ಹಲವು ಕಡೆಗಳಲ್ಲಿ ಮಧ್ಯಾಹ್ನದ ವೇಳೆಗೆ ಉತ್ತಮ ಮಳೆಯಾಗಿದೆ. ದಿನ ಪೂರ್ತಿ ತುಂತುರು ಮಳೆ, ಹನಿ ಮಳೆ ಮುಂದುವರಿದಿದೆ.
ಜಿಲ್ಲಾದ್ಯಂತ
ಮೋಡ ಕವಿದ ವಾತಾವರಣವಿದ್ದು, ಸುಳ್ಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನಾದ್ಯಂತ ಬೆಳಗ್ಗೆಯಿಂದ ಮಳೆ ಸುರಿದಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯಾಗುತಿದೆ. ಅಕಾಲಿಕ ಮಳೆಯಿಂದ ಅಡಿಕೆ ಒಣಗಿಸುವುದಕ್ಕೆ ಕೃಷಿಕರಿಗೆ ಸಮಸ್ಯೆಯಾಗಿದೆ. ರಾಜ್ಯದ ಚಿಕ್ಕಮಗಳೂರು ಮಡಿಕೇರಿ, ಮಂಗಳೂರು ಉತ್ತರ ಕನ್ನಡದ ಹಲವೆಡೆ ಅಕಾಲಿಕ ಮಳೆಯಾಗಿದೆ. ಹಲವು ಕಡೆ

ಧಾರಾಕಾರ ಮಳೆಯಾಗಿದ್ದು ಭತ್ತ ಮತ್ತು ಅಡಕೆ ಬೆಳೆಗೆ ಸಮಸ್ಯೆಯಾಗಿದೆ. ಕೊಡಗು ಜಿಲ್ಲೆಯಲ್ಲೂ ಅಕಾಲಿಕ ಮಳೆಯಿಂದ ಕಾಫಿ ಕೊಯ್ಲಿಗೆ ತೊಂದರೆಯಾಗಿದೆ. ಅಕಾಲಿಕ ಮಳೆ ಗೇರು ಬೀಜ, ಮಾವು ಸೇರಿದಂತೆ ಈಗ ಹೂ ಬಿಡುವ ಹಲವು ಕೃಷಿಗೆ ಸಮಸ್ಯೆಯಾಗುವ ಆತಂಕ ಇದೆ ಎಂದು ಕೃಷಿಕರು ಹೇಳುತ್ತಾರೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ ಮಳೆ ಮುಂದುವರಿಯಲಿದ್ದು ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.














