ಸುಳ್ಯ:ಕಳೆದ ವರ್ಷ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಬಿಜೆಪಿ ವತಿಯಿಂದ ನಿರ್ಮಿಸಿ ನೀಡಿದ ನೂತನ ಮನೆಯ ಗೃಹ ಪ್ರವೇಶ ಏ.27 ರಂದು ನಡೆಯಿತು.ಗಣಪತಿ ಹವನ, ಸತ್ಯನಾರಾಯಣ ಪೂಜೆಯೊಂದಿಗೆ ಬೆಳಿಗ್ಗೆ 8.45ಕ್ಕೆ ಗೃಹ ಪ್ರವೇಶ ನಡೆಯಿತು. ಯತಿಗಳು, ಸಾಮಾಜಿಕ, ಧಾರ್ಮಿಕ ಹಾಗು ರಾಜಕೀಯ ಕ್ಷೇತ್ರದ ಪ್ರಮುಖರು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.ಮನೆಯ ಸಮೀಪ ನಿರ್ಮಿಸಿದ ಪ್ರವೀಣ್ ನೆಟ್ಟಾರು ಅವರ ಪ್ರತಿಮೆಯನ್ನು
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅನಾವರಣ ಮಾಡಿ ಮಾತನಾಡಿದರು.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಆಗಮಿಸಿ ಆಶೀರ್ವಚನ ನೀಡಿದರು. ಆರ್ಎಸ್ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ಆಗಮಿಸಿದ್ದರು. ಇವರ ನೇತೃತ್ವದಲ್ಲಿ ಮಂಗಳ ನಿಧಿ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು,ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿ ಸುಳ್ಯ ಕ್ಷೇತ್ರದ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಪುತ್ತೂರು ಅಭ್ಯರ್ಥಿ ಆಶಾ ತಿಮ್ಮಪ್ಪ, ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮುಖಂಡರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಕಸ್ತೂರಿ ಪಂಜ, ಜಯಂತ ನಡುಬೈಲು, ಕಸ್ತೂರಿ ಪಂಜ, ಮುರಳೀಕೃಷ್ಣ ಹಸಂತಡ್ಕ,ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಆರ್ ಕೆ ಭಟ್ ಕುರುಂಬುಡೇಲು, ಶ್ರೀನಾಥ್ ಬಾಳಿಲ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಸೇರಿ ಹಲವು ಮಂದಿ ಪ್ರಮುಖರು ಆಗಮಿಸಿದ್ದರು. ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಭಜನಾ ಸಂಕೀರ್ತನೆ ನಡೆಯಿತು. ರಾತ್ರಿ 7 ಗಂಟೆಗೆ ಕಲ್ಲುರ್ಟಿ ದೈವದ ನೇಮ ನಡೆಯಲಿದೆ.
ಬಿಜೆಪಿ ವತಿಯಿಂದ ಮನೆ ನಿರ್ಮಾಣ:
ದಕ್ಷಿಣ ಕನ್ನಡ ಲೋಕಸಭಾ ಸದಸ್ಯರು ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ 2800 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಲಾಗಿದೆ. ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ಪಕ್ಷದ ವತಿಯಿಂದ ಮನೆ ನಿರ್ಮಿಸಲಾಗಿದೆ.
ಮನೆಗೆ ‘ಪ್ರವೀಣ್ ನಿಲಯ’ ಎಂದು ಹೆಸರಿಡಲಾಗಿದೆ.
ನವೆಂಬರ್ 2ರಂದು ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಮುಗ್ರೋಡಿ ಕನ್ ಸ್ಟ್ರಕ್ಷನ್ ಕಂಪನಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು ಕೇವಲ ಐದೂವರೆ ತಿಂಗಳಲ್ಲಿ ಸುಂದರ ಮನೆ ನಿರ್ಮಿಸಲಾಗಿದೆ.