ಸುಳ್ಯ: ತೀವ್ರಗೊಂಡಿರುವ ಸುಳ್ಯದ ವಿದ್ಯುತ್ ಸಮಸ್ಯೆಯ ಬಗ್ಗೆ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಪ್ರಸ್ತುತ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆದಿದ್ದಾರೆ.ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲ್ಲೂಕಿನ ಮೆಸ್ಕಾಂನ ವಿವಿಧ ಉಪವಿಭಾಗಗಳಿಗೆ ಮಂಜೂರಾದ ಮತ್ತು ಪ್ರಸ್ತುತ ಖಾಲಿ ಇರುವ
ಪವರ್ಮ್ಯಾನ್ ಹುದ್ದೆಗಳ ಸಂಖ್ಯೆ ಎಷ್ಟು, ಯಾವ ಕಾಲಮಿತಿಯೊಳಗೆ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಲು ಸರ್ಕಾರ ಕ್ರಮ ವಹಿಸುವುದು ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲೂಕಿನ, ಸುಳ್ಯ, ಕಡಬ ಮತ್ತು ಸುಬ್ರಹ್ಮಣ್ಯ ಉಪವಿಭಾಗಗಳ ಶಾಖಾ ವ್ಯಾಪ್ತಿಯಲ್ಲಿ ದಿನಾಂಕ 30.06.2024 ಅಂತ್ಯಕ್ಕಿರುವಂತೆ ಮಂಜೂರಾದ, ಭರ್ತಿಯಾದ ಮತ್ತು ಖಾಲಿ ಇರುವ ಪವರ್ಮಾನ್ ಹುದ್ದೆಗಳ ವಿವರಗಳನ್ನು ನೀಡಿರುವ ಸರಕಾರ ಮೆಸ್ಕಾಂನಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಉತ್ತರಿಸಿದ್ದಾರೆ.
ಸುಳ್ಯದಲ್ಲಿ 20 ಪವರ್ಮ್ಯಾನ್ ಹುದ್ದೆ ಮಂಜೂರಾಗಿದ್ದು 16 ಭರ್ತಿಯಾಗಿದ್ದು 4 ಹುದ್ದೆ ಖಾಲಿ ಇದೆ, ಕಡಬದಲ್ಲಿ 11 ಹುದ್ದೆಗಳು ಮಂಜೂರಾಗಿದ್ದು 7 ಹುದ್ದೆ ಭರ್ತಿಯಾಗಿದ್ದು 4 ಹುದ್ದೆ ಖಾಲಿಯಿದೆ. ಸುಬ್ರಹ್ಮಣ್ಯದಲ್ಲಿ ಮಂಜೂರಾದ 8 ಹುದ್ದೆಗಳಲ್ಲಿ 5 ಹುದ್ದೆ ಭರ್ತಿಯಾಗಿದೆ 3 ಹುದ್ದೆ ಖಾಲಿ ಇದೆ ಎಂದು ಸರಕಾರ ಮಾಹಿತಿ ನೀಡಿದೆ.