ಸುಳ್ಯ: ಇಂದು ಸುರಿದ ಭಾರೀ ಮಳೆ ಹಾಗು ಬೀಸಿದ ಗಾಳಿಯಿಂದ ಸುಳ್ಯ ನಗರ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಸುಳ್ಯ ನಗರ ಸೇರಿದಂತೆ ಎಲ್ಲೆಡೆ ಕತ್ತಲು ಆವರಿಸಿದೆ. ಸಂಜೆ 4.30ರ ವೇಳೆಗೆ ಗುಡಗು, ಸಿಡಿಲು, ಗಾಳಿ ಸಹೀತ ಮಳೆ ಆರಂಭಗೊಂಡಾಗ ವಿದ್ಯುತ್ ಸಂಪರ್ಕ ಕಡಿತವಾಗಿದೆ. ರಾತ್ರಿ 9.30ರವರೆಗೂ
ಸಂಪರ್ಕ ಪುನಃ ಸ್ಥಾಪನೆಯಾಗಿಲ್ಲ. ಗಾಳಿ ಮಳೆಗೆ ವಿವಿಧ ಕಡೆ ವಿದ್ಯುತ್ ಕಂಬ, ವಿದ್ಯುತ್ ಲೈನ್ಗಳಿಗೆ ಹಾನಿ ಆಗಿದೆ. ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ಲೈನ್ನಲ್ಲಿಯೂ ತಾಂತ್ರಿಕ ದೋಷ ಕಂಡು ಬಂದಿದೆ. ಇದರಿಂದ ಸಂಪರ್ಕ ಕಡಿತವಾಗಿದೆ. ಇದನ್ನು ಸರಿ ಪಡಿಸುವ ಕಾರ್ಯ ನಡೆಯುತಿದೆ. ರಾತ್ರಿ 10 ಗಂಟೆಯ ಬಳಿಕ ವಿದ್ಯುತ್ ಸಂಪರ್ಕ ಸರಿಯಾಗುವ ಸಾಧ್ಯತೆ ಇದೆ ಎಂದು ಸುಳ್ಯದ ಮೆಸ್ಕಾಂ ಉಪ ವಿಭಾಗದ ಇಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ.ಮುಖ್ಯ ಲೈನ್ ಮಾತ್ರವಲ್ಲದೆ ವಿವಿಧ ಕಡೆಯೂ ಸಮಸ್ಯೆ ಆಗಿರುವ ಸಾಧ್ಯತೆ ಇದೆ ಎನ್ನಲಾಗುತಿದೆ.
ದಶಕಗಳ ಪಾಡು:
ಮಳೆ ಬಂದ ಕೂಡಲೇ ಸುಳ್ಯದ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಸುಳ್ಯ ಕತ್ತಲಲ್ಲಿ ಕಳೆಯಬೇಕಾಗಿ ಬರುವುದು ಹಲವು ದಶಕಗಳ ಪಾಡು ಎಂದು ಸುಳ್ಯ ನಗರದ ಜನತೆ ಹೇಳುತ್ತಾರೆ. 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಪೂರ್ತಿಗೊಂಡರೆ ಈ ಸಮಸ್ಯೆ ಪರಿಹಾರವಾಗಬಹುದೇನೋ ಎಂಬುದಷ್ಟೇ ಜನರ ನಿರೀಕ್ಷೆ.