ಬಾಲಸೋರ್: ಒಡಿಶಾದ ಬಾಲಾಸೋರ್ನಲ್ಲಿ ನಡೆದ ಭೀಕರ ರೈಲು ಅಪಘಾತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೇ ಅಧಿಕಾರಿಗಳು ಅಪಘಾತದ ಮಾಹಿತಿಯನ್ನು ಮೋದಿಗೆ ನೀಡಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಘಟನಾ ಸ್ಥಳದಲ್ಲಿದ್ದ ಮೋದಿ, ಭೀಕರ
ಅಪಘಾತದ ಮಾಹಿತಿ ಪಡೆದಿದ್ದಾರೆ.ದುರಂತ ಸ್ಥಳ ಕಂಡು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಭೀಕರ ಅಪಘಾತದ ಸಂಭವಿಸಿದ್ದು ಹೇಗೆ? ಕಾರಣಗಳೇನು ಅನ್ನೋ ಕುರಿತು ಮೋದಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಜೊತೆ ಮಾತನಾಡಿದ ಮೋದಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಒಡಿಶಾದ ಬಾಲಸೋರ್ ಬಳಿ 3 ರೈಲುಗಳು ಅಪಘಾತಕ್ಕೆ ಈಡಾದ ಬೆನ್ನಲ್ಲೇ ತಮ್ಮೆಲ್ಲ ಅಧಿಕೃತ ಪ್ರವಾಸ ರದ್ದುಗೊಳಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘಟನಾ ಸ್ಥಳಕ್ಕೆ ಶುಕ್ರವಾರ ತಡರಾತ್ರಿಯೇ ಆಗಮಿಸಿ ರಕ್ಷಣಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದ್ದಾರೆ.