ಸುಳ್ಯ: ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದಲ್ಲಿ ಶ್ರೀ ಭಗವತಿಯ ದೊಡ್ಡಮುಡಿ ವೈಭವ.ಭಕ್ತಿ ಸಂಭ್ರಮದಲ್ಲಿ ನಡೆದ ಉತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿ ದೊಡ್ಡ ಮುಡಿಯ ದರ್ಶನ ಪಡೆದರು. ದೊಡ್ಡಮುಡಿಯ ವೈಭವನ್ನು ಕಣ್ತುಂಬಿಕೊಳ್ಳಲು ಕೇರಳ, ಕರ್ನಾಟಕ ರಾಜ್ಯಗಳಿಂದ ಆಗಮಿಸಿ ಕಾತರದಿಂದ ಕಾದಿದ್ದ
ಸಾವಿರಾರು ಮಂದಿ ಭಕ್ತರಿಗೆ ದರ್ಶನ ನೀಡಿದ ಭಗವತಿಯು ನೆರೆದ ಭಕ್ತ ಸಮೂಹವನ್ನು ಹರಸಿ ಅನುಗ್ರಹಿಸಿತು. ಸುಮಾರು 30 ಅಡಿಗಳಿಗಿಂತಲೂ
ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ ಎತ್ತರವಾದ ಮತ್ತು ತೀರಾ ಅಪರೂಪವಾದ ಭಗವತಿಯ ಮುಡಿ ಇಲ್ಲಿನ ವಿಶೇಷತೆ. 30 ಅಡಿ ಎತ್ತರದ ತೆಳ್ಳಗೆ ಸಿಗಿದ ಬಿದಿರಿನ ಸಲಾಕೆಗಳಿಂದ ಗೋಪುರಾಕಾರ ನಿರ್ಮಿಸಿ, ಅದಕ್ಕೆ ಕೆಂಪು ಬಣ್ಣದ ಬಟ್ಟೆ ಸುತ್ತಿ, ಹೂವುಗಳಿಂದ ಸಿಂಗರಿಸಿದ ಮುಡಿಯ ವೈಭವವನ್ನು ಭಕ್ತರು ಕಣ್ತುಂಬಿಕೊಂಡರು.ಏ.1ರಂದು ಬೆಳಿಗ್ಗೆ 6 ರಿಂದ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ, ಬೇಟೆ ಕರಿಮಗನ್ ಈಶ್ವರನ್ ದೈವಗಳ ಕೋಲಗಳು ನಡೆದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಅಪರಾಹ್ನ ಗಂಟೆ 5ಕ್ಕೆ ಶ್ರೀ ಭಗವತಿ ದೊಡ್ಡಮುಡಿಯ
ದರ್ಶನವಾಯಿತು. ಬಳಿಕ ಪ್ರಸಾದ ವಿತರಿಸಲಾಯಿತು. ನೆರೆದ ಸಾವಿರಾರು ಮಂದಿ ಭಗವತಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಪೆರಾಜೆಯಲ್ಲಿ ಮೂಲ ದೇವರಾ ಗಿ ಧರ್ಮಶಾಸ್ತಾರನ ಆರಾಧನೆ ಮಾಡಲಾಗುತ್ತದೆ. ಪಾರ್ವತಿಯ ರೂಪವಾಗಿ ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ. ಭೂತರಾಧನೆಗೆ ಪ್ರಸಿದ್ಧಿ ಪಡೆದ ಈ ಕ್ಷೇತ್ರದಲ್ಲಿ ಭಗವತಿ ಹಾಗು ವಿವಿಧ ದೈವಗಳ ಕೋಲಗಳನ್ನು ಕಟ್ಟಿ ಆಡಿಸಲಾಗುತ್ತದೆ.
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಾ.9ರಿಂದ ಕಾಲಾವಧಿ ಜಾತ್ರೋತ್ಸವ ಪ್ರಾರಂಭಗೊಂಡಿದ್ದು, ಏ.10ರವರೆಗೆ ನಡೆಯಲಿದೆ. ಪ್ರತಿವರ್ಷ ಏ.1ರಂದು ನಡೆಯುವ ಭಗವತಿಯ ದೊಡ್ಡಮುಡಿ ಇಲ್ಲಿನ ಪ್ರಮುಖ ಆಕರ್ಷಣೆ.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,
ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ,ದೇವತಕ್ಕರಾದ ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದ
ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ ಪುರುಷೋತ್ತಮ ನಿಡ್ಯಮಲೆ.
ಆಡಳಿತ ಸಮಿತಿ ಸದಸ್ಯರುಗಳು, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಮುಖಂಡೆಉ, ಅರ್ಚಕ ವೃಂದ ಮತ್ತು ಸಿಬ್ಬಂದಿವರ್ಗ ಹಾಗೂ ಊರ ಪರವೂರ ಭಗವದ್ಭಕ್ತರು ಇದ್ದರು.