ಜೈಪುರ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.ಈ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಶ್ರೇಯಸ್ ಅಯ್ಯರ್ ಬಳಗವು, ಪ್ಲೇ-ಆಫ್ನಲ್ಲಿ ‘ಮೊದಲ ಕ್ವಾಲಿಫೈಯರ್’ ಹಣಾಹಣಿಯಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಪಂಜಾಬ್, 14 ಪಂದ್ಯಗಳಲ್ಲಿ
ಒಂಬತ್ತು ಗೆಲುವು ಹಾಗೂ ನಾಲ್ಕು ಸೋಲಿನೊಂದಿಗೆ ಒಟ್ಟು 19 ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಐಪಿಎಲ್ ಲೀಗ್ನ ಕೊನೆಯ ಪಂದ್ಯದಲ್ಲಿ ಆರ್ಸಿಬಿ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ಮಾತ್ರ ಆರ್ಸಿಬಿ ಟಾಪ್ 2ರಲ್ಲಿ ಸ್ಥಾನ ಪಡೆಯಲಿದೆ.
ಮತ್ತೊಂದೆಡೆ ಮುಂಬೈ ತಂಡವು ಈ ಸೋಲಿನಿಂದಾಗಿ ಎಲಿಮಿನೇಟರ್ ಪಂದ್ಯವನ್ನು ಆಡಬೇಕಿದೆ. ಹಾರ್ದಿಕ್ ಪಾಂಡ್ಯ ಪಡೆ 14 ಪಂದ್ಯಗಳಲ್ಲಿ ಎಂಟು ಗೆಲುವು, ಆರು ಸೋಲಿನೊಂದಿಗೆ 16 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಅರ್ಸಿಬಿಗೆ ಲಖನೌ ವಿರುದ್ಧದ ಪಂದ್ಯ ಮಹತ್ವದ್ದಾಗಿದೆ.
ಲಖನೌ ವಿರುದ್ಧ ಪಂದ್ಯ ಗೆದ್ದಲ್ಲಿ ಆರ್ಸಿಬಿಗೆ ಮೊದಲ ಕ್ವಾಲಿಫೈಯರ್ ಸ್ಥಾನ ಖಚಿತವಾಗಲಿದೆ.ಲಖನೌ ವಿರುದ್ಧ ಗೆದ್ದರೆ ಆರ್ಸಿಬಿ ಕೂಡ 19 ಅಂಕಗಳನ್ನು ಗಳಿಸಲಿದೆ. ಅಂದರೆ ರನ್ರೇಟ್ ಆಧಾರದಲ್ಲಿ ಅಗ್ರಸ್ಥಾನ ನಿರ್ಧಾರವಾಗಲಿದೆ. ಈಗ ಆರ್ಸಿಬಿ +0.255 ರನ್ರೇಟ್ ಕಾಪಾಡಿಕೊಂಡಿದೆ.
ಇನ್ನೊಂದೆಡೆ ಗುಜರಾತ್ ಟೈಟನ್ಸ್ 14 ಪಂದ್ಯಗಳಲ್ಲಿ ಒಂಬತ್ತು ಗೆಲುವು, ಐದು ಸೋಲಿನೊಂದಿಗೆ 18 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದೆ.ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ 1ರಲ್ಲಿ ಆಡಲಿವೆ. ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ. ಸೋತ ತಂಡ ಕ್ವಾಲಿಫೈಯರ್ 2ರಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಎದುರಿಸಬೇಕಾಗುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ನಲ್ಲಿ ಮುಖಾಮುಖಿಯಾಗಲಿವೆ.
Llಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಸೂರ್ಯಕುಮಾರ್ ಯಾದವ್ ಅರ್ಧಶತಕದ (57 ರನ್, 39 ಎಸೆತ) ಬಲದಿಂದ ಏಳು ವಿಕೆಟ್ ನಷ್ಟಕ್ಕೆ 184 ರನ್ ಪೇರಿಸಿತು. ರೋಹಿತ್ ಶರ್ಮಾ (24), ಹಾರ್ದಿಕ್ ಪಾಂಡ್ಯ (26), ನಮನ್ ಧಿರ್ (20) ಹಾಗೂ ರಯಾನ್ ರಿಕೆಲ್ಟನ್ (27) ಉಪಯುಕ್ತ ಕೊಡುಗೆ ನೀಡಿದರು.ಪಂಜಾಬ್ ಪರ ಅರ್ಷದೀಪ್ ಸಿಂಗ್ ಹಾಗೂ ಕನ್ನಡಿಗ ವೈಶಾಖ ವಿಜಯಕುಮಾರ್ ತಲಾ ಎರಡು ವಿಕೆಟ್ ಗಳಿಸಿದರು.ಈ ಗುರಿ ಬೆನ್ನಟ್ಟಿದ ಪಂಜಾಬ್ ಮಗದೊಮ್ಮೆ ಅಗ್ರ ಕ್ರಮಾಂಕದ ಬ್ಯಾಟರ್ಗಳ ಅಮೋಘ ಪ್ರದರ್ಶನದ ಬಲದಿಂದ 18.3 ಓವರ್ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ 62 ರನ್ ಗಳಿಸಿ ಅಬ್ಬರಿಸಿದರು. ಪ್ರಿಯಾಂಶ್ ಹಾಗೂ ಜೋಶ್ ಇಂಗ್ಲಿಸ್ ದ್ವಿತೀಯ ವಿಕೆಟ್ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು. 42 ಎಸೆತಗಳನ್ನು ಎದುರಿಸಿದ ಜೋಶ್ 73 ರನ್ ಸಿಡಿಸಿದರು. ನಾಯಕ ಶ್ರೇಯಸ್ ಅಯ್ಯರ್ ಅಜೇಯ 26 ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.





