ಸುಳ್ಯ:ಎರಡು ದಿನ ನಿರಂತರ ಮಳೆ ಸುರಿದ ಕಾರಣ ಬತ್ತಿ ಬರಡಾಗಿದ್ದ ಪಯಸ್ವಿನಿ ನದಿಯಲ್ಲಿ ಮತ್ತೆ ನೀರಿನ ಹರಿವು ಆರಂಭಗೊಂಡಿದ್ದು ಜೀವನದಿಗೆ ಮತ್ತೆ ಜೀವಕಳೆ ಬಂದಿದೆ.
ಬರಡಾಗಿದ್ದ ನದಿಯ ಒಡಲು ಮತ್ತೆ ನೀರು ತುಂಬಿಕೊಳ್ಳುತಿದೆ. ಕಳೆದ ಹಲವಾರು ದಿನಗಳಿಂದ ಬತ್ತಿ ಬರಡಾಗಿ ಕಲ್ಲುಗಳೇ
ಪ್ರತ್ಯಕ್ಷವಾಗುತ್ತಿದ್ದ, ಮೈದಾನದಂತೆ ಭಾಸವಾಗಿದ್ದ ನದಿಯ ಒಡಲಿನಲ್ಲಿ ಜೀವಜಲ ಹರಿದಿದೆ.ಕಳೆದ ಎರಡು ದಿನಗಳಿಂದ ಎಲ್ಲೆಡೆ ವ್ಯಾಪಕ ಮಳೆಯಾಗಿತ್ತು. ಸೋಮವಾರ ಬೆಳಗ್ಗಿನ ಜಾವ ಭರ್ಜರಿ ಮಳೆಯಾಗಿತ್ತು. ಬಿಸಿಲಿನ ಝಳ, ಏರಿದ ಉಷ್ಣಾಂಶದಿಂದ
ಓಡಬಾಯಿ, ಪೈಚಾರ್ , ಮುರೂರು, ಪಂಜಿಕಲ್ಲು ಭಾಗ ಸೇರಿದಂತೆ ಪಯಸ್ವಿನಿ ನದಿ ಸಂಪೂರ್ಣ ಹರಿವು ನಿಲ್ಲಿಸಿ ಬತ್ತಿ ಹೋಗಿತ್ತು. ಅಲ್ಲಲ್ಲಿ ಹೊಂಡದಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ತುಂಬಿತ್ತು. ಇದೀಗ ಉತ್ತಮ ಮಳೆ ಬಂದಿರುವ ಕಾರಣ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಓಡಬಾಯಿ, ಪೈಚಾರ್ ಭಾಗದಲ್ಲಿ ನದಿಯಲ್ಲಿ ನೀರು ತುಂಬಿದ್ದು ಹರಿವು ಹೆಚ್ಚಳವಾಗಿದೆ. ಸೋಮವಾರ ಬೆಳಗ್ಗಿನ ಜಾವ ಉತ್ತಮ ಮಳೆಯಾಗಿತ್ತು. ಅಲ್ಲದೆ ಸಂಪಾಜೆ ಹಾಗೂ ಕೊಡಗಿನ ಭಾಗದಲ್ಲಿ ಕೂಡ ಉತ್ತಮ ಮಳೆಯಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದ ನದಿಯು ತನ್ನ ವೈಭವವನ್ನು ಮರಳಿ ಪಡೆಯುತ್ತಿದೆ.