ಪಂಜ:ಸೀಮೆ ದೇವಸ್ಥಾನ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ನಡೆಯುತ್ತಿರುವ ಧನುಪೂಜೆಗೆ ಪ್ರತಿ ದಿನವೂ ಭಕ್ತ ಸಂದಣಿ ಕಂಡು ಬರುತ್ತಿದೆ. ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸುಮಾರು 300ಕ್ಕೂ ಅಧಿಕ ಭಕ್ತರು ಪ್ರತಿದಿನ ಮುಂಜಾನೆ ದೇವಸ್ಥಾನಕ್ಕೆ ಆಗಮಿಸಿ ಧನು ಪೂಜೆಯಲ್ಲಿ ಭಾಗವಹಿಸುತ್ತಾರೆ. ಡಿ.16ರಿಂದ ಧನುಪೂಜೆ ಆರಂಭಗೊಂಡಿದ್ದು ಜ.14 ತನಕ ಪ್ರಾತಃ ಕಾಲ 5.30ಕ್ಕೆ ಸರಿಯಾಗಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರಿಗೆ
ಧನು ಪೂಜೆ ನಡೆಯಲಿದೆ. ರುದ್ರಾಭಿಷೇಕ, ಧನು ಪೂಜೆ, ಮಹಾಪೂಜೆ ಸೇವೆಗಳು ಇರುತ್ತದೆ. ಪ್ರತಿ ದಿನ ಸುಮಾರು 50 ರಿಂದ 75 ಧನುಪೂಜೆ, 30-40 ರುದ್ರಾಭಿಷೇಕ ನಡೆದರೆ, ಕೆಲವರು ಮಹಾಪೂಜೆ ಮಾಡಿಸುತ್ತಾರೆ. ಧನುಪೂಜೆ ಇತರ ಸೇವೆ ಮಾಡುವವರು ಆಯಾ ದಿವಸ ಬಂದು ರಶೀದಿ ಮಾಡಿ ಹೆಸರು, ನಕ್ಷತ್ರ ಹೇಳಿ ಸಂಕಲ್ಪ ಮಾಡಿ ಪೂಜೆ ಮಾಡಿಸುತ್ತಾರೆ.
ಪೂಜೆ ಆದ ಬಳಿಕ ಪ್ರಸಾದ ನೀಡಲಾಗುತ್ತದೆ.ಬೆಳಗ್ಗಿನ ಉಪಾಹಾರದ ವ್ಯವಸ್ಥೆಯೂ ಇದೆ. ಪ್ರಾತಃ ಕಾಲ ನಡೆಯುವ ಸೇವೆಗಳು ರುದ್ರಾಭಿಷೇಕ(ರೂ.50) ಧನುಪೂಜೆ,(ರೂ.150) ಮಹಾಪೂಜೆ (ರೂ.400)ಇರಲಿದೆ.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಭಕ್ತರು ಉಪಸ್ಥಿತರಿರುತ್ತಾರೆ.
ನಾಳೆ ಪೂರ್ವಭಾವಿ ಸಭೆ:
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ-2026ರ ಪೂರ್ವಭಾವಿ ಸಭೆಯು ಡಿ.21 ರಂದು ಸಂಜೆ ಗಂಟೆ 4.30ಕ್ಕೆ ದೇಗುಲದಲ್ಲಿ ನಡೆಯಲಿದೆ ಎಂದು ದೇವಳದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.ಈ ಸಭೆಗೆ ಸೀಮೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.







