ಕಡಬ:ದ.ಕ ಜಿಲ್ಲೆಯ ಆರ್ಥಿಕ ಮೂಲವಾದ ಅಡಿಕೆ ಬೆಳೆಗಾರರರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಸಮರ್ಥವಾಗಿ ಧ್ವನಿ ಎತ್ತುವ ಕೆಲಸವಾಗುತ್ತಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಎಲ್ಲಾ ಕಡೆ ಕಾಂಗ್ರೇಸ್ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದೇ ಸಾಕ್ಷಿಯಾಗಿದೆ. ನಾನು ಸಂಸತ್ತಿನಲ್ಲಿ ಅಡಿಕೆ ಬೆಳಗಾರರ ಧ್ವನಿಯಾಗಿ ಕರ್ತವ್ಯ ನಿರ್ವಹಿಸುವೆ ಎಂದು
ದ.ಕ ಜಿಲ್ಲಾ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಹೇಳಿದರು. ಅವರು ಶನಿವಾರ ಸಂಜೆ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಅಡಿಕೆ ಆಮದಿನ ವಿರುದ್ಧ ಸಂಸತ್ತಿನಲ್ಲಿ ಮಾತನಾಡುವುದು ಆಗಬೇಕು. ಅಡಿಕೆಗೆ ಎದುರಾಗಿರುವ ರೋಗಬಾಧೆಗಳ ನಿವಾರಣೆಗೆ ಸಂಶೋಧನಾ ಕೇಂದ್ರ ತೆರೆಯುವ ಕೆಲಸವಾಗಬೇಕು, ಜೊತೆಗೆ ಕೃಷಿ ಹಾಗೂ ಕೃಷಿ ಮಾರುಕಟ್ಟೆಗೆ ಪೂರಕವಾದ ವಾತಾವರಣ ಕಲ್ಪಿಸುವ ಅಗತ್ಯ ಇದೆ. ನಾನು ಸಂಸತ್ತಿನಲ್ಲಿ ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸುತ್ತೇನೆ ಎಂದರು.
ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಮಾತನಾಡಿ ಕಡಬವನ್ನು ತಾಲೂಕಾಗಿ ಘೋಷಣೆ ಮಾಡಿದ್ದು ಮಾಜಿ ಸಚಿವ ರಮಾನಾಥ ರೈಗಳ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ಸರಕಾರ. ಅದೇ ಸಂದರ್ಭ ನಾವು ಕಡಬ ಹಾಗೂ ವಿಟ್ಲವನ್ನು ಪಟ್ಟಣ ಪಂಚಾಯತ್ ಆಗಿಯೂ, ಪುತ್ತೂರನ್ನು ನಗರಸಭೆ ಆಗಿಯೂ ಘೋಷಣೆ ಮಾಡಿದೆವು. ಆದ್ದರಿಂದ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಪರವಾಗಿ ನಿಂತಿದೆ ಎಂದ ಅವರು ರಮಾನಾಥ ರೈ ಅವರು ಈ ಭಾಗದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ ಎಂದರು.
ಎಐಸಿಸಿ ಸದಸ್ಯ ಐವನ್ ಡಿ ಸೋಜಾ, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ ಪದ್ಮರಾಜ್ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಎಂದು ಕರೆ ನೀಡಿದರು. ಕಾಂಗ್ರೆಸ್ ವಿಧಾನಸಭಾ ಕ್ಷೇತ್ರ ಚುನಾವಣೆ ಅಭ್ಯರ್ಥಿ ಜಿ. ಕೃಷ್ಣಪ್ಪ, ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ್, ಕೆಪಿಸಿಸಿ ಸದಸ್ಯ ಡಾ. ರಘು, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಚುನಾವಣಾ ಉಸ್ತುವಾರಿ ಬಾಲಕೃಷ್ಣ ಬಳ್ಳೇರಿ, ಸುಳ್ಯ ಪ್ರಚಾರ ಸಮಿತಿ ಉಸ್ತುವಾರಿ ವೆಂಕಪ್ಪ ಗೌಡ, ಕಿರಣ್ ಬುಡ್ಲೆಗುತ್ತು, ಕಡಬ ಬ್ಲಾಕ್ ಕಾರ್ಯದರ್ಶಿ ಸತೀಶ್ ನಾಯ್ಕ್ ಮೇಲಿನಮನೆ ಮೊದಲಾದವರು ಉಪಸ್ಥಿತರಿದ್ದರು.
ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ತಾಪಂ ಮಾಜಿ ಸದಸ್ಯೆ ಉಷಾ ಅಂಚನ್ ನಿರೂಪಿಸಿದರು.