*ಎಂ.ನಾ.ಚಂಬಲ್ತಿಮಾರ್.
ಮತ್ತೊಮ್ಮೆ ಓಣಂ ಬಂದಿದೆ…
ಕೇರಳದ ಮಲಯಾಳಿಗಳೆಂದಲ್ಲ.., ಮನಜ ಮತವನ್ನು, ಮತೀತವಾದ ಸಮತೆಯನ್ನು ಬಯಸಿ ಪ್ರೀತಿಸುವವರು ಯಾರೆಲ್ಲ, ಎಲ್ಲೆಲ್ಲಿ ಇದ್ದಾರೋ…ಅವರೆಲ್ಲ ಆಚರಿಸುವ ರಾಷ್ಟೀಯ ಹಬ್ಬ ಓಣಂ. ಅದಿಂದು ಕೇವಲ ಕೇರಳಕ್ಕಷ್ಟೇ ಸೀಮಿತವಾಗಿಲ್ಲ. ಕೇರಳೀಯರು ಇದ್ದೆಡೆಯೆಲ್ಲಾ ಅನ್ಯ ರಾಜ್ಯ ಮತ್ತು ಇತರ ಸಮಗ್ರ ನಾಗರಿಕರ ಒಗ್ಗೂಡುವಿಕೆಯ, ವಿವಿಧತೆಯಿದ್ದರೂ ಏಕತೆಯ ಹಬ್ಬವಾಗಿದೆ. ಕೇರಳ ನಾಡಿನಲ್ಲಿಂದು ಪ್ರಧಾನವಾದ ತಿರುವೋಣಂ ಸಂಭ್ರಮ…
ಸಾಮಾನ್ಯವಾಗಿ ಇಂಗ್ಲೀಷ್ ಕ್ಯಾಲಂಡರ್ ಪ್ರಕಾರ ಓಣಂ ಬರುವುದು ಆಗಸ್ಟ್\ಸೆಪ್ಟೆಂಬರ್ ತಿಂಗಳಲ್ಲಿ. ಮಲಯಾಳಂ ಮಾಸಾಚರಣೆಯಂತೆ ಅದು ‘ಚಿಂಙಂ( ಸೋಣ-ಶ್ರಾವಣ) ಮಾಸದ ಸಮೃದ್ಧಿಯ ಸಂಕೇತದ ಹಬ್ಬ. ಅದು ಕೃಷಿ ಪ್ರಧಾನ ಬದುಕಿನ ಕೊಯ್ಲುತ್ಸವಕ್ಕೆ ನಾಂದಿ ಹಾಡುವ ಆಚರಣೆ. ಇಲ್ಲಿ ಬಡವ ಬಲ್ಲಿದನೆಂಬ ಬೇಧವೋ, ಮೇಲ್ಜಾತಿ-ಕೆಳಜಾತಿ ಅಂತರಗಳ
ವರ್ಗಶ್ರೇಣಿ ತಾರತಾಮ್ಯವೋ ಯಾವೂದೂ ಇಲ್ಲ. ಇದು ಸಮತೆ ಮಮತೆಯ ಜೀವನ ಪ್ರೀತಿಯ ಮಾನುಷಿಕತೆಯ ಹಬ್ಬ.
ಓಣಂ ಎಂದರೆ ಗತಕಾಲೀನ ಮಧುರ ಸ್ಮೃತಿಗಳನ್ನುಣಿಸುವ, ಗತಕಾಲದ ಸುಂದರ ಮೆಲುಕುಗಳನ್ನು ಗಣಿಸುವ ಹಬ್ಬ. ಕೇವಲ ಕುಟುಂಬವಷ್ಟೇ ಅಲ್ಲ, ಬಂಧುಮಿತ್ರಾದಿಗಳು ಸಹಿತ ಜಾತಿ ಮತಗಳಿಲ್ಲದೇ ಎಲ್ಲರೂ ಒಗ್ಗೂಡುವ ಭಾವೈಕ್ಯತೆಯ ಹಬ್ಬ. ಅಂಥ ಹಬ್ಬದ ಮೆರುಗು ವರ್ಣನಾತೀತ. ಕಳೆದ ಎರಡು ವರ್ಷ ಕೊರೋನಾ ಬಣ್ಣಗೆಡಿಸಿದ್ದ ಓಣಂ ಈ ವರ್ಷ ಮತ್ತೆ ಕಳೆ ಗಟ್ಟಿದೆ. ಓಣಂ ಹಬ್ಬದ ರಂಗಿನ ಬಣ್ಣ ಮರಳಿ ಬಂದಿದೆ ಓಣಂ ನಿಮಿತ್ತವಾದ ಜಲೋತ್ಸವ, ದೋಣಿ ಸ್ಪರ್ಧೆಯ ಹರ್ಷಾರವಗಳು ಅಲೆ ಎಬ್ಬಿಸಿದೆ. ಸಂಘ.ಸಂಸ್ಥೆ, ಶಿಕ್ಷಣ ಕೇಂದ್ರ ಎಲ್ಲೆಂದರಲ್ಲಿ ಅದು ನಾಡಹಬ್ಬವಾಗಿದೆ. ಮಾವಿನ ಮರದಲ್ಲಿ ಉಯ್ಯಾಲೆಗಳು ತುಂಬಿತುಳ್ಳಲ್, ಉಮ್ಮಾಟಿಕಳಿ, ಓಣತಪ್ಪನ್ ಮೊದಲಾದ ಬಗುಬಗೆಯ ಸಾಂಸ್ಕೃತಿಕ ಕ್ರೀಡಾವಿನೋದಗಳ ದೇಶೀಯ ಹಬ್ಬ. ಪ್ರತಿವರ್ಷದ ಓಣಂಗೂ ಕಡ್ಡಾಯವೇ ಆದ ಹೊಸ ಉಡುಪಿನ ಧರಿಸುವಿಕೆ.. ಓಣಂ ಎಂದರೆ ಸಮೃದ್ಧವಾದ ಬಗುಬಗೆಯ ಖಾದ್ಯ ವೈವಿಧ್ಯತೆಗಳ ಭೋಜನ ವೈಶಿಷ್ಟ್ಯವೇ ವಿಶೇಷತೆ. ಅದು ಕಳೆಗುಂದಿಲ್ಲ… ಎಷ್ಟೇ ಬಡತನ ಬಂದರೂ.., ಹೊಟ್ಟೆಗೆ ಹಿಟ್ಟಿಲ್ಲದ ಗತಿ ಬಂದರೂ ಓಣಂ ದಿನ ಕೇರಳೀಯರು ಉಪವಾಸ ಇರಲಾರರು, ಸಮೃದ್ಧಿಯ ಬದುಕನ್ನು ಆಚರಿಸಿಯೇ ಆಚರಿಸುತ್ತಾರೆಂಬುದು ಶತಸಿದ್ಧ.
ಏಕೆಂದರೆ….
ಓಣಂ ಮಹಾಧರ್ಮಿಷ್ಟ ಅರಸ ಮಹಾಬಲಿಯ ಹಬ್ಬ. ಆತ ಅಸುರನಾದರೂ, ಮಾನವಿಕತೆಯ ಸಾಕಾರಮೂರ್ತಿಯಾಗಿದ್ದ, ಪ್ರಜೆಗಳನ್ನೆಲ್ಲ ಒಂದೇ ಕಂಗಳಿಂದ ಕಂಡು ಪ್ರೀತಿಸಿ, ನ್ಯಾಯ ಒದಗಿಸಿದ್ದ. ಇದು ಮಹಾಚಕ್ರವರ್ತಿಯ ತ್ಯಾಗದ ಕತೆ. ಒಂದಾನೊಂದು ಕಾಲಕ್ಕೆ ಈಗಿನ ಕೇರಳ ಪ್ರಾಂತ್ಯವನ್ನೊಳಗೊಂಡ ಭೂ ಪ್ರದೇಶವನ್ನು ಮಹಾಬಲಿ ಚಕ್ರವರ್ತಿ ಆಳುತ್ತಿದ್ದ. ಆ ಕಾಲಕ್ಕೆ ಪ್ರಜೆಗಳೆಲ್ಲರೂ ಸತ್ಯನಿಷ್ಠ, ಧರ್ಮನಿಷ್ಠರಾಗಿದ್ದರು. ಕಳ್ಳತನ, ನೀಚತ್ವ, ಲಂಪಟತೆ, ಮೋಸ ಇತ್ಯಾದಿಗಳೊಂದೂ ಇರಲಿಲ್ಲ. ಭೂಮಿಯೇ ಸ್ವರ್ಗವಾಗಿ ಅವತರಿಸಿದ ಕಾಲ! ಈ ಖ್ಯಾತಿ ದಶದಿಕ್ಕಿಗೂ ಹರಡಿತು. ಮಹಾಬಲಿಯ ಆಡಳಿತ ಇದೇ ರೀತಿ ವಿಸ್ತರಿಸಿದರೆ ಇಂದಲ್ಲ ನಾಳೆ ಸ್ವರ್ಗದ ಇಂದ್ರಪೀಠಕ್ಕೂ ಅಪಾಯ ತಪ್ಪಿದ್ದಲ್ಲ ಎಂದು ಊಹಿಸಿಕೊಂಡ ದೇವೇಂದ್ರ ಮಹಾವಿಷ್ಣುವಿನ ಮೊರೆ ಹೋಗುತ್ತಾನೆ, ಕಿವಿಯೂದುತ್ತಾನೆ.
ಇದರಂತೆ ಮಹಾವಿಷ್ಣು ವಾಮನಾವತಾರದಲ್ಲಿ ಭೂಮಿಗಿಳಿಯುತ್ತಾನೆ. ಮಹಾಬಲಿಯಲ್ಲಿಗೆ ಬಂದು ಮೂರಡಿ ಭೂಮಿ ಭಿಕ್ಷೆ ಕೇಳುತ್ತಾನೆ. ಬಾಲಕ ವಾಮನನ ಎರಡು ಅಡಿ ಮಹಾಬಲಿಯ ಸಾಮ್ರಾಜ್ಯವನ್ನಿಡೀ ವ್ಯಾಪಿಸಿಕೊಂಡಾಗ ವ್ಯಾಪಿಸಿಕೊಂಡಾಗ ಮೂರನೇ ಅಡಿಯನ್ನಿಡಲು ಜಾಗವೇ ಇಲ್ಲ! ಕೊಟ್ಟ ಮಾತಿನಂತೆ ಮೂರನೇ ಅಡಿಯನ್ನು ತನ್ನ ತಲೆಯ ಮೇಲಿರಿಸಲು ಮಹಾಬಲಿ ವಿನಂತಿಸುತ್ತಾನೆ. ವಾಮನಮೂರ್ತಿಯ ತ್ರಿವಿಕ್ರಮ ಹೆಜ್ಜೆ ಯಿಂದ ಮಹಾಬಲಿ ಪಾತಾಳಕ್ಕೆ ತಳ್ಳಲ್ಪಡುತ್ತಾನೆ! ಆದರೆ ತನಗೆ ಪ್ರತೀ ವರ್ಷಕ್ಕೊಮ್ಮೆ ತನ್ನ ರಾಜ್ಯಕ್ಕೆ ಪ್ರಜಾಜನರನ್ನು ನೋಡಲು ಬರುವಂತೆ ಅವಕಾಶ ಕೇಳಿಕೊಳ್ಳುವ ಮಹಾಬಲಿಗೆ ವಾಮನಾವತಾರದ ವಿಷ್ಣು ಅದೆಲ್ಲವನ್ನೂ ಒದಗಿಸುತ್ತಾನೆ, ಅಷ್ಟೇ ಅಲ್ಲ ಸೂರ್ಯ ಚಂದ್ರರಿರುವ ತನಕ ಮಹಾಬಲಿ ಕೀರ್ತಿ ಉಳಿಯುತ್ತದೆಂದೂ ಹರಸುತ್ತಾನೆ…
ಇದೇ ಕತೆ ತುಳುನಾಡಲ್ಲೂ ಇದೆ. ತುಳುನಾಡಲ್ಲಿ ಮಹಾಬಲಿ ದೀಪಾವಳಿಯ ಬಲಿಯೇಂದ್ರ ಪರ್ಬಕ್ಕೆ ಬಂದರೆ ಕೇರಳದಲ್ಲಿ ಓಣಂ ಹಬ್ಬಕ್ಕೆ ಬರುತ್ತಾನೆಂಬುದಷ್ಟೇ ವ್ಯತ್ಯಾಸ. ಏನೇ ಇರಲಿ ಓಣಂ ಸಮತೆ, ಮಮತೆಯ ನೆಲದ ಸಂಸ್ಕೃತಿ ಆರಾಧನೆಯ ಹಬ್ಬ. ಅದು ವಿಭಜನೆಯನ್ನು ಮೀರಿದ ಏಕತೆಯ ಭಜನೆಯನ್ನು ಮಾಡುವ ಹಬ್ಬ. ಮಹಾಬಲಿ ಎಂಬ
ಮಾವೇಲಿಯ ನೆನಪಲ್ಲಿ ವರ್ಷಕ್ಕೊಮ್ಮೆಯಾದರೂ ಮನುಷ್ಯರೆಲ್ಲರೂ ಒಂದೇ ಥರ ಎಂದು ಸಂಕಲ್ಪಿಸುವ ಹಬ್ಬ. ಬಹುಶಃ ಇಂತದ್ದೊಂದು ಸಂಕಲ್ಪದ, ಮಾನವತೆಯ ಮಹಾಮಂತ್ರ ಮೊಳಗಿಸುವ ಭಾವೈಕ್ಯತೆಯ ಹಬ್ಬ ದೇಶದ ಯಾವರಾಜ್ಯದಲ್ಲೂ ಇಲ್ಲ..! ಮತ-ಧರ್ಮಗಳ ಕಟ್ಟುಪಾಡು ಮೀರಿ ಮಾನವತೆಯ ಸದಾಶಯವನ್ನು ಆಚರಿಸುವ, ಸಮೃದ್ಧಿಯ ಸಂಕೇತಗಳನ್ನು ಪೋಷಿಸುವ , ಭಾವೈಕ್ಯದ ಅಮೃತವನ್ನು ಕೈದಾಟಿಸುವ ಹಬ್ಬ ಕೇರಳದಲ್ಲಿ ಮನುಷ್ಯ ಸಂಕುಲವನ್ನು ಒಂದೇ ಸರಪಳಿಯಲ್ಲಿ ಬೆಸೆದಿದೆ. ಆದ್ದರಿಂದಲೇ ಅದು ಸರ್ವಮಾನ್ಯವಾಗಿದೆ, ಸರ್ವ ಸ್ವೀಕೃತವಾಗಿದೆ.
ಓಣಂ ತ್ಯಾಗದ ಕತೆ ಸಾರುತ್ತದೆ. ಉತ್ಕೃಷ್ಟ ರಾಜನಾಗಿ ಭೂಮಂಡಲವಿಡೀ ಗೆದ್ದರೂ ದಾನ ಕೇಳಿ ಬಂದವನ ಮುಂದೆ ಸರ್ವಸ್ವವವನ್ನೂ ತ್ಯಾಗ ಮಾಡಿದ ಕತೆ ಹೇಳುತ್ತದೆ. ಬಂದವನು ಭಗವಂತನೆಂದೇ ಅರಿತರೂ ಜೀವನದ ಅಂತಿಮವಾದ ಪರಮಮೋಕ್ಷ ಪದವಿಯ ಕತೆಯನ್ನೂ ಸೂಚಿಸುತ್ತದೆ. ಆದರೆ ಮೋಕ್ಷಾನಂತರದಲ್ಲಿ ವರ್ಷಕ್ಕೊಮ್ಮೆ ಮಹಾಬಲಿ ತನ್ನೂರಿಗೆ ಬರುವಾಗ ಪ್ರಜೆಗಳು ಅರಸನನ್ನು ಸ್ವೀಕರಿಸುವ ಹಬ್ಬವೇ ಓಣಂ..ಮತ್ತದರ ವೈಶಿಷ್ಟ್ಯ..
ಒಣಂ ಹತ್ತು ದಿನಗಳ ಹಬ್ಬ. ಕರ್ಕಾಟಕದ ಕರಿನೆರಳು ನೀಗಿ ಶ್ರಾವಣದ ಮುಂಬೆಳಗು ಬೀರುವಲ್ಲಿಂದಲೇ ಒಣಂ ಆರಂಭ. ಹಸ್ತ ನಕ್ಷತ್ರದೊಂದಿಗೆ ಓಣಂ ಬರೋಣವಾಯಿತೆಂದೇ ಅರ್ಥ. ಈ ಹತ್ತು ದಿನಕ್ಕೂ ಸಂಪ್ರದಾಯಸ್ಥರ ಮನೆಯಲ್ಲಿ ಆಚರಣೆಗಳಿವೆ. ಆದರೆ ಈ ಪೈಕಿ ಶ್ರವಣ ನಕ್ಷತ್ರದ ತಿರುವೋಣಂ ಅತ್ಯಂತ ಪ್ರಧಾನ. ಊರಿಗೆ ಬರುವ ಅರಸನನ್ನು ಸ್ವಾಗತಿಸುವ ಸಂಕೇತವಾಗಿ ಅಂಗಳದಲ್ಲೆ ರಂಗುಚೆಲ್ಲುವ ಹೂರಂಗೋಲಿ, ನೈಸರ್ಗಿಕ ವೈವಿಧ್ಯತೆ ಮತ್ತು ಜೈವಿಕ ಬಹುತ್ವ ಸಾರುವ ಓಣಂ ಭೋಜನ ಮತ್ತು ಪ್ರತಿಯೊಂದರಲ್ಲೂ ಸಮೃದ್ಧಿಯನ್ನು ಸಂಕೇತಿಸುವ ಉಡುಪು ಈ ಹಬ್ಬದ ವಿಶೇಷ. ಇಷ್ಟಕ್ಕೂ ಓಣಂ ಕೊಯ್ಲುತ್ಸವದ ಕೃಷಿ ಸಂಭ್ರಮದ ಹಬ್ಬ. ಇಲ್ಲಿ ಧಾರ್ಮಿಕ ಆಚರಣೆಗಿಂತಲೂ ಸಾಂಸ್ಕೃತಿಕ-ಸಾಮಾಜಿಕ-ಮಾನುಷಿಕ ಭಾವೈಕ್ಯತೆಯ ಸಮಾಜಮುಖೀ ಆರಾಧನೆಗೆ ಮತ್ತು ಕೃಷಿ ಸಂಸ್ಕೃತಿಗೆ ಪರಂಪರೆ ಒತ್ತುನೀಡಿದೆ. ಕೇರಳದ ತಿರುವಾಂಕೂರು, ಮಧ್ಯಕೇರಳ, ವಳ್ಳುವನಾಡ್, ಸೇರಿದಂತೆ ಉತ್ತರ ಕೇರಳದ ಓಣಂ ಆಚರಣೆಗೂ
ಮಲಬಾರಿನ ಆಚರಣೆಗೂ ಸಾಕಷ್ಟು ವ್ಯತ್ಯಾಸಗಳಿದ್ದರೂ ಪ್ರಸ್ತುತ ಮಲಯಾಳಂ ಭಾಷೆಯನ್ನಾಡುವ ಜನರು ಎಲ್ಲಿದ್ದಾರೋ ಅಲ್ಲೆಲ್ಲಾ ಓಣಂ ಸರ್ವಜನ ಸ್ವೀಕೃತ ಹಬ್ಬವಾಗಿದೆ. ಹೀಗೊಂದು ಸದಾಶಯದ ಹಬ್ಬ ಮತ್ತೊಂದೆಡೆ ಇಲ್ಲ. ಏಕೆಂದರೆ ಇದು ಮತ-ಧರ್ಮಕ್ಕಿಂತ ಮೇಲಾಗಿ ¨ಬಡವ-ಬಲ್ಲಿದನೆಂಬ ಅಂತರಗಳಿಲ್ಲದೇ ಸರ್ವಜನತೆಯ ಅಂತರಂಗದ ಹಬ್ಬವಾಗಿದೆ… ಈ ಸಂದರ್ಭ ಕೇರಳಕ್ಕೆ ಜಗತ್ತೇ ಕಣ್ಣರಳಿಸಿ ನೋಡುವ ಕಾಲ. ಅಷ್ಟದಿಕ್ಕುಗಳಿಂದಲೂ ಪ್ರವಾಸಿಗರು ಓಡೋಡಿ ಬರುವ ಕಾಲ. ಕೇರಳದ ವಾಣಿಜ್ಯ-ವಹಿವಾಟು ಚಿಗುರುವ ಸಮೃದ್ಧಿಯ ಕಾಲ. ಪ್ರತಿಯೊಬ್ಬರೂ ಜುಟ್ಟಿಗೆ ಮಲ್ಲಿಗೆ ಇಲ್ಲದಿದ್ದರೂ ಮೃಷ್ಟಾನ್ನ ಉಣ್ಣುವ ಹಬ್ಬ!
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕರು.)