*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಹಟ್ಟಿ ತುಂಬಾ ನೂರ ಮೂವತ್ತಕ್ಕೂ ಹೆಚ್ಚು ಗೋವುಗಳು.. ಪರಿಸರ ತುಂಬೆಲ್ಲಾ ಮೊಳಗುವ ಅಂಬಾ ಎಂಬ ಕರೆ.. ಉಕ್ಕುವ ಕ್ಷೀರ ಸಂಪತ್ತು.. ಸುಳ್ಯದ ಉದ್ಯಮಿ ಮಹಮ್ಮದ್ ಅಶ್ರಫ್ ಅವರ ಮನೆಗೆ ಹೋದರೆ ಅಲ್ಲೆಲ್ಲಾ ಗೋವುಗಳದ್ದೇ ಕಲರವ.. ಹೌದು ಸುಳ್ಯದ ಇಂಡಿಯನ್ ಟೈಲ್ಸ್ ಮಾಲಕ ಅಶ್ರಫ್ ಅವರ ಪರಪ್ಪೆ ಸಮೀಪದ ಚೆಂಡೆಮೂಲೆಯ ನಿವಾಸಕ್ಕೆ ತೆರಳಿ ಅವರ ತೋಟದ ಮಧ್ಯೆಯ ಫಾಂ ಹೊಕ್ಕರೆ ಅಲ್ಲೋಂದು ಗೋಲೋಕವೇ ತೆರೆದು ಕೊಳ್ಳುತ್ತದೆ. ಒಂದಲ್ಲಾ.. ಎರಡಲ್ಲಾ ನೂರ ಮೂವತ್ತಕ್ಕೂ ಹೆಚ್ಚು
ಗೋವುಗಳು ಇವರ ಹಟ್ಟಿಯನ್ನು ತುಂಬಿದೆ. ಅವರ ಈ ಗೋವು ಪ್ರೀತಿ ಅವರನ್ನು ಹೈನೋದ್ಯಮದಲ್ಲಿ ಉತ್ತುಂಗಕ್ಕೇರಿಸಿದೆ. ಕೇರಳ ರಾಜ್ಯವೇ ಗುರುತಿಸುವ ಹೈನು ಕೃಷಿಕರಾಗಿ ಬೆಳೆಸಿದೆ.
ಪಾರಂಪರಿಕವಾಗಿ ಬಂದ ಗೋವು ಪ್ರಿತಿ..
ಅಶ್ರಫ್ ಅವರ ಹಿರಿಯರ ಕಾಲದಿಂದಲೂ ಇವರ ಕುಟುಂಬಕ್ಕೆ ಗೋವುಗಳೆಂದರೆ ಇನ್ನಿಲ್ಲದ ಪ್ರೀತಿ.10ಕ್ಕೂ ಹೆಚ್ಚು ಗೋವುಗಳು ಇವರ ಮನೆಯಲ್ಲಿ ಯಾವಾಗಲೂ ಇರುತ್ತಿತ್ತು. ಗೋವುಗಳ ಮೇಲಿನ ಈ ಮಮತೆಯ ಕಾರಣದಿಂದ ಅಶ್ರಫ್ ಅವರು ಮೂರೂವರೆ ವರ್ಷದ ಹಿಂದೆ ಮನೆ ಸಮೀಪ ‘ಕ್ಯಾಟಲ್ ಫಾಂ’ ಆರಂಭಿಸಿ ಗೋವುಗಳನ್ನು ತಂದು ತುಂಬಿದರು. ಹೈನುಗಾರಿಕೆಯನ್ನು ಅತ್ಯಂತ ಆಸಕ್ತಿ ಮತ್ತು ಗಂಭೀರವಾಗಿ ಮಾಡಲು ಆರಂಭಿಸಿದರು. ಇದು ಅವರ ಕೈ ಹಿಡಿಯಿತು. ಬೆಳೆಯುತ್ತಾ ಸಾಗಿ ಮೂರು ವರ್ಷದಲ್ಲಿ 130ಕ್ಕೂ ಹೆಚ್ಚು ದನಗಳು ಬೆಳೆದವು. ಇವರಲ್ಲಿ
ಹಾಲು ಸೂಸುವ 64 ಹಸುಗಳಿವೆ, ಹಾಲು ಕರೆಯದ 11 ಹಸುಗಳು, 34 ಇತರ ಗೋವುಗಳು, 9 ಕರುಗಳು, 16 ದೊಡ್ಡ ಕರುಗಳು ಹೀಗೆ ಒಟ್ಟು 134 ಜಾನುವಾರುಗಳು ಇವೆ. ಮನೆ ಸಮೀಪದ ಹಟ್ಟಿಯಲ್ಲಿ ಮತ್ತು ಗಾಳಿಮುಖದ ಇನ್ನೊಂದು ಹಟ್ಟಿಯಲ್ಲಿ ಇವುಗಳನ್ನು ಸಾಕಲಾಗುತ್ತದೆ. ಎಲ್ಲಾ ತಳಿಗಳ ದನಗಳು ಇವರಲ್ಲಿದೆ ಜೆರ್ಸಿ, ಹೆಚ್ಎಫ್, ಗೀರ್, ಮಲೆನಾಡ ಗಿಡ್ಡ ತಳಿಗಳಿವೆ. ಹೆಚ್ಚು ಹಾಲು ನೀಡುವ ಜೆರ್ಸಿ, ಹೆಚ್ಎಫ್ ತಳಿಗಳು ಅಧಿಕ ಇದೆ.
ಹರಿದ ಕ್ಷೀರ ಸಂಪತ್ತು…
ಅಶ್ರಫ್ ಹಾಗು ಪತ್ನಿ ರಂಲತ್ ಅವರ ಪ್ರೀತಿಯ ಗೋವುಗಳು ಮನ ತುಂಬಿ ಹಾಲು ಸೂಸುತ್ತವೆ. ಪ್ರತಿ ದಿನ 650 ಲೀಟರ್ ಹಾಲು ದೊರೆಯುತ್ತಿದೆ. 600 ಲೀಟರ್ ಹಾಲನ್ನು ಹಾಲು ಸೊಸೈಟಿಗೆ ಹಾಕಲಾಗುತ್ತದೆ. 50 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ. ದೇಲಂಪಾಡಿ ಪಂಚಾಯತ್ ನಲ್ಲಿ ಹಾಗು ಕಾರಡ್ಕ ಬ್ಲಾಕ್ ಮಟ್ಟದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುವ ಹೈನು ಕೃಷಿಕರಾಗಿದ್ದಾರೆ. ಪಂಚಾಯತ್, ಬ್ಲಾಕ್ ಹಾಗು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಹೈನುಗಾರರು ಎಂಬ ಪ್ರಶಸ್ತಿಯೂ ಇವರನ್ನು ಅರಸಿ ಬಂದಿದೆ.
ಅಚ್ಚುಮೆಚ್ಚಿನ ವೃತ್ತಿ…
ಉದ್ಯಮ, ಕೃಷಿ ಇದ್ದರೂ ಹೈನುಗಾರಿಕೆ ಎಂದರೆ ಇವರಿಗೆ ಅಚ್ಚು ಮೆಚ್ಚು. ಇನ್ನಿಲ್ಲದ ಆಸಕ್ತಿ, ಪ್ರೀತಿ. ಮುಂಜಾನೆ 5 ಗಂಟೆಗೆ ಎದ್ದು ಅಶ್ರಫ್, ಪತ್ನಿ ರಂಲತ್ ಕೆ.ಬಿ. ಹಾಗು ಪುತ್ರ ಮಹಮ್ಮದ್ ಅಶ್ಪಾಸ್ ಅವರು ಗೋವುಗ ಆರೈಕೆ, ಕೆಲಸ ಆರಂಭಿಸುತ್ತಾರೆ. 10 ಗಂಟೆಯ ತನಕ ಹೈನುಗಾರಿಕೆಯಲ್ಲಿ ತೊಡಗುವ ಅಶ್ರಫ್ ಬಳಿಕ ತನ್ನ ಸುಳ್ಯದ ಅಂಗಡಿಗೆ ತೆರಳುತ್ತಾರೆ. ಹೈನುಗಾರಿಕೆಗೆ 4 ಮಂದಿ ಕೆಲಸಗಾರರು ಸಹಾಯಕ್ಕೆ ಇದ್ದಾರೆ. ಸುಮಾರು 5 ಎಕ್ರೆ ಜಾಗದಲ್ಲಿ ಹುಲ್ಲು ಬೆಳೆಯುತ್ತಾರೆ. ಅಲ್ಲದೆ ಜೋಳದ ದಂಟನ್ನು ತಂದು ಇಲ್ಲೇ ಶೈಲೇಝ್ ಪಶು ಆಹಾರವನ್ನು ತಯಾರಿಸಿ ನೀಡಲಾಗುತ್ತದೆ. ವಿಶಾಲವಾದ ಹಟ್ಟಿ ನಿರ್ಮಿಸಲಾಗಿದೆ. ಅದನ್ನು ತೊಳೆದು, ಹಸುಗಳನ್ನು ಸ್ನಾನ ಮಾಡಿಸಿ ಸ್ವಚ್ಛವಾಗಿರಿ ನಿರ್ವಹಣೆ ಮಾಡಲಾಗುತ್ತದೆ. ಕಾಲ ಕಾಲಕ್ಕೆ ಪಶು ವೈದ್ಯರು ಬಂದು ಪಶುಗಳ ತಪಾಸಣೆ, ಚಿಕಿತ್ಸೆ ನೀಡುತ್ತಾರೆ.
ಸಾವಯವ ಕೃಷಿಕ:
ಅಶ್ರಫ್ ಅವರದ್ದು ಕೃಷಿಯಲ್ಲಿಯೂ ಎತ್ತಿದ ಕೈ. ದೇಲಂಪಾಡಿ ಪಂಚಾಯತ್ ಮಟ್ಟದ ಹೈನು ಕೃಷಿಕ ಮಾತ್ರವಲ್ಲದೆ ಉತ್ತಮ ಸಾವಯವ ಕೃಷಿಕರೂ ಹೌದು. ಗೋ ಸಾಕಣೆಯು ಇವರ ಸಾವಯವ ಕೃಷಿಗೆ ಪೂರಕವಾಗಿದೆ. ಗೊಬ್ಬರ, ಸ್ಲರಿ ಹೈನುಗಾರಿಕೆಯಿಂದ ದೊರೆಯುತ್ತದೆ. ಸ್ಲರಿ ತಯಾರಿಸಿ ಅಡಿಕೆ ತೋಟಕ್ಕೆ ಬಿಡುತ್ತಾರೆ. ಸೆಗಣಿಯನ್ನು ಗೊಬ್ಬರ ಮಾಡಿ ತಮ್ಮ ತೋಟಕ್ಕೆ ಬೇಕಾದಷ್ಟು ಬಳಸುತ್ತಾರೆ.ಉಳಿಯುವ ಸೆಗಣಿಯನ್ನು ಒಣಗಿಸಿ ಪುಡಿ ಮಾಡಿ ಗೊಬ್ಬರ ಮಾಡಿ ಬೇಡಿಕೆ ಇದ್ದವರಿಗೆ ನೀಡಲಾಗುತ್ತದೆ. ಒಟ್ಟಿನಲ್ಲಿ ಪೂರ್ತಿಯಾಗಿ ಸಾವಯವ ಕೃಷಿ ಮಾಡಲು ಹೈನುಗಾರಿಕೆ ಸಹಕಾರಿಯಾಗಿದೆ ಎನ್ನುತ್ತಾರೆ ಅಶ್ರಫ್.
ಹಾಳೆ ಪ್ಲೇಟ್,ಎಮ್ಮೆ ಸಾಕುವ ಯೋಜನೆ:
ಕೃಷಿ, ಹೈನುಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ಉತ್ಪಾದನಾ ಘಟಕಗಳು ಇದ್ದಲ್ಲಿ ಮಾತ್ರ ಕೃಷಿ, ಹೈನುಗಾರಿಕೆಯನ್ನು ಲಾಭದಾಯಕವಾಗಿ ಮಾಡಬಹುದು ಎಂಬುದು ಅಶ್ರಫ್ ಅವರ ಅನುಭವದ ಮಾತು. ಈ ಹಿನ್ನಲೆಯಲ್ಲಿ ಇದಕ್ಕೆ ಪೂರಕವಾಗಿ ಕೆಲವೊಂದು ಇತರ ಉದ್ಯಮವನ್ನು ಆರಂಭಿಸುವ ಯೋಚನೆಯೂ ಇದೆ. ತೋಟದಲ್ಲ ಸಿಗುವ ಹಾಳೆಗಳನ್ನು ಬಳಸಿ ಹಾಳೆ ಪ್ಲೇಟ್ ಮಾಡುವ ಘಟಕ ಸ್ಥಾಪಿಸುವ ಯೋಜನೆ ಇದೆ. ಜೊತೆಗೆ ಒಂದಿಷ್ಟು ಎಮ್ಮೆಗಳನ್ನು ಸಾಕುವ ಯೋಜನೆ ಇದೆ. ಎಮ್ಮೆ ಹಾಲಿನಲ್ಲಿ ಫ್ಯಾಟ್ ಅಧಿಕ ಇರುವ ಕಾರಣ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರವರು.
ಪ್ರಶಸ್ತಿಯ ಗರಿ:
ದೇಲಂಪಾಡಿ ಪಂಚಾಯತ್ನ ಅತ್ಯುತ್ತಮ ಹೈನು ಕೃಷಿಕ, ಸಾವಯವ ಕೃಷಿಕ, ಕಾರಡ್ಕ ಬ್ಲಾಕ್ ಮಟ್ಟದ ಅತ್ಯುತ್ತಮ ಹೈನು ಕೃಷಿಕ ಪ್ರಶಸ್ತಿ ಪಡೆದ ಅಶ್ರಫ್ ಹಾಗು ರಂಲತ್ ಅವರಿಗೆ ಮೊನ್ನೆ ತಾನೆ ತ್ರಿಶೂರ್ ಜಿಲ್ಲೆಯ ಮಣ್ಣೂತ್ತಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ಷೀರ ಸಂಗಮದಲ್ಲಿ ರಾಜ್ಯಮಟ್ಟದಲ್ಲಿ ‘ಕಾಸರಗೋಡು ಜಿಲ್ಲೆಯ ಅತ್ಯುತ್ತಮ ಕ್ಷೀರ ಸಹಕಾರಿ’ ಪ್ರಶಸ್ತಿ ಲಭಿಸಿದೆ.
‘ನಮ್ಮ ಹಿರಿಯ ಕಾಲದಿಂದಲೂ ಮನೆಯಲ್ಲಿ ಹಸುಗಳನ್ನು ಸಾಕಿ ಸಲಹಲಾಗುತ್ತಿತ್ತು. ಆದುದರಿಂದಲೇ ಗೋವುಗಳೆಂದರೆ ನಮಗೆ ಇನ್ನಿಲ್ಲದ ಪ್ರೀತಿ, ಈಗ ನಾವು ಹೈನುಗಾರಿಕೆಯನ್ನು ಉದ್ಯಮವಾಗಿ ಮಾಡುತ್ತಿದ್ದೇವೆ. ಉಳಿದೆಲ್ಲಾ ವೃತ್ತಿಗಿಂತ ಇದು ಹೆಚ್ಚು ಸಂತೃಪ್ತಿ ನೀಡುತ್ತದೆ’
-ಮಹಮ್ಮದ್ ಅಶ್ರಫ್.
ಇಂಡಿಯನ್ ಟೈಲ್ಸ್ ಮಾಲಕರು.
ಸುಳ್ಯ.