ಮಂಗಳೂರು:ಮಳೆಗಾಲದಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಭೂಮಿ ಅಗೆಯುವುದರಿಂದ ಭೂಕುಸಿತ ಸಾಧ್ಯತೆಗಳಿರುವುದರಿಂದ ತಾತ್ಕಾಲಿಕವಾಗಿ ನಿಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಈ ರೀತಿಯ ಕಾಮಗಾರಿಯಿಂದ ಸಾರ್ವಜನಿಕ ಸಮಸ್ಯೆ ಯಾಗುತ್ತಿರುವ ಬಗ್ಗೆ
ದೂರುಗಳು ಬಂದಿವೆ. ಕಾರ್ಮಿಕರು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ನಿರ್ಮಾಣ ಕಾರ್ಯಗಳಿಗೆ ಭೂಮಿ ಅಗೆತಕ್ಕೆ ಅವಕಾಶ ನೀಡಬಾರದು. ಇದನ್ನು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಓ ಡಾ. ಆನಂದ್ ಮತ್ತಿತರರು ಇದ್ದರು. ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿರಂತರ ಮಳೆಯಿಂದ ಜಲಾವೃತಗೊಂಡಿರುವ ಅದ್ಯಪಾಡಿ ಮತ್ತಿತರ ಕಡೆ ಭೇಟಿ ನೀಡಿದರು. ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.