ಧರ್ಮಸ್ಥಳ: ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಭವ್ಯ ಮೆರವಣಿಗೆಯಲ್ಲಿ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ
ನಟ ದರ್ಶನ್ ತೂಗುದೀಪ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಮತ್ತು ಗಣ್ಯ ಅತಿಥಿಗಳು ಮಂಗಲಸೂತ್ರವನ್ನು ವಿತರಿಸಿದರು.6.40ರ ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದ, ಮಂತ್ರ ಘೋಷ ಪಠಣದೊಂದಿಗೆ ವರನು ವಧುವಿಗೆ ಮಂಗಲಸೂತ್ರ ಧಾರಣೆ ಮಾಡಿ, ಆಯಾ ಜಾತಿ ಸಂಪ್ರದಾಯದಂತೆ ಮದುವೆಯ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು. ಧರ್ಮಸ್ಥಳದಲ್ಲಿ ಮಂಗಲ ಮುಹೂರ್ತದಲ್ಲಿ ವಧು-ವರರು ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಕೇರಳದಿಂದ ಮೂರು ಜೊತೆ ಹಾಗೂ ಆಂಧ್ರಪ್ರದೇಶದ ಒಂದು ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾದರು.
ನೂತನ ದಂಪತಿಗಳು ಸಾರ್ಥಕ ಜೀವನ ನಡೆಸಿ : ಡಿ. ವೀರೇಂದ್ರ ಹೆಗ್ಗಡೆ
ಮದುವೆಯಾಗಿ ಬಂದ ಗೃಹಿಣಿ ಭಾಗ್ಯಲಕ್ಷ್ಮಿಯಾಗಿ ಮನೆಯನ್ನೇ ಬೆಳಗಿ ಸ್ವರ್ಗವನ್ನಾಗಿ ಮಾಡುತ್ತಾಳೆ. ಪತಿ-ಪತ್ನಿ ಪರಸ್ಪರ ಹೊಂದಾಣಿಕೆ, ತಾಳ್ಮೆ ಮತ್ತು ಸಹನೆಯಿಂದ ಸುಖ-ಕಷ್ಟವನ್ನು ಸಮಾನವಾಗಿ ಸ್ವೀಕರಿಸಿ ಅನುಭವಿಸಿ, ಸಾರ್ಥಕ ದಾಂಪತ್ಯ ಜೀವನ ನಡೆಸಬೇಕು. ಆಗ ಮನೆಯೇ ಮಂದಿರವಾಗುತ್ತದೆ. ಸ್ವರ್ಗ ಸುಖವನ್ನು ಅನುಭವಿಸಬಹುದು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನೂತನ ದಂಪತಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು. ಚಲನಚಿತ್ರ ನಟ ದರ್ಶನ್ ತೂಗುದೀಪ್ ಮಾತನಾಡಿದರು.
ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾ ಅಮಿತ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್. ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರುತಾಜಿತೇಶ್ ಮತ್ತು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.
ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು. ದಿವ್ಯ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು