ತಿರುವನಂತಪುರಂ: ಕೇರಳಕ್ಕೆ ಮುಂಗಾರು ಪ್ರವೇಶವಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಡಿಕೆಗಿಂತ ಸ್ವಲ್ಪ ತಡವಾಗಿ ಜೂನ್ 4 ರಂದು ಮುಂಗಾರು ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿದೆ. ಆದರೆ ಲಕ್ಷದ್ವೀಪಕ್ಕೆ ಮುಂಗಾರು ಸಮೀಪಿಸಿದರೂ ಅಲ್ಲಿಂದ ಮುನ್ನುಗ್ಗಲು
ಅನುಕೂಲಕರ ಪರಿಸ್ಥಿತಿ ಇಲ್ಲದ ಕಾರಣ ಮತ್ತೆ ನಾಲ್ಕು ದಿನ ತಡವಾಗಿ ಜೂನ್ 8ರಂದು ಕೇರಳಕ್ಕೆ ಮುಂಗಾರು ಆಗಮಿಸಿದೆ. ವಾಡಿಕೆಗಿಂತ 8 ದಿನ ತಡವಾಗಿ ಮುಂಗಾರು ಪ್ರವೇಶ ಆದರೂ ಮಳೆ ಮಾರುತಗಳು ದುರ್ಬಲವಾಗಿದ್ದು ಕೆಲವು ದಿನಗಳಲ್ಲಿ ಬಿರುಸುಗೊಳ್ಳಲಿದೆ ಎಂದು ಸೂಚನೆ ಇದೆ. ಜೂನ್ನಿಂದ ಸೆಪ್ಟೆಂಬರ್ವರೆಗಿನ ಮುಂಗಾರು ಹಂಗಾಮಿನಲ್ಲಿ ಈ ಬಾರಿ ಕೇರಳದಲ್ಲಿ ಹೆಚ್ಚು ಮಳೆಯಾಗಲಿದೆ ಎಂಬುದು ಹವಾಮಾನ ಇಲಾಖೆಯ ಈ ಹಿಂದಿನ ಮುನ್ಸೂಚನೆ.
ಕಳೆದ ಕೆಲವು ವರ್ಷಗಳಂತೆ, ಮುಂಗಾರು ಮಳೆಯ ಮಾದರಿಯು ಜೂನ್ನಲ್ಲಿ ನಿಧಾನವಾಗಿ ಮಳೆಯಾಗುತ್ತದೆ, ಜುಲೈನಲ್ಲಿ ಬಲಗೊಳ್ಳುತ್ತದೆ ಮತ್ತು ಆಗಸ್ಟ್ನಲ್ಲಿ ಭಾರಿ ಮಳೆಯಾಗುತ್ತದೆ. ಕೇರಳಕ್ಕೆ ಮುಂಗಾರು ಪ್ರವೇಶ ಆಗಿರುವ ಹಿನ್ನಲೆಯಲ್ಲಿ ಒಂದೆರಡು ದಿನದಲ್ಲಿ ಕರ್ನಾಟಕಕ್ಕೂ ಮುಂಗಾರು ಪ್ರವೇಶ ಆಗಲಿದೆ.
ತೀವ್ರಗೊಂಡ ಬಿಪೊರ್ಜೋಯ್:
ಬಿಪೊರ್ಜೋಯ್ ಚಂಡಮಾರುತವು ಅರಬ್ಬಿ ಸಮುದ್ರದ ಮೇಲೆ ತೀವ್ರ ರೂಪ ಪಡೆದುಕೊಂಡಿದೆ.ಮುಂದಿನ 48 ಗಂಟೆಗಳಲ್ಲಿ ಬಿಪೋರ್ಜೋಯ್ ಇನ್ನಷ್ಟು ತೀವ್ರಗೊಳ್ಳಲಿದ್ದು ಮುಂದಿನ 4-5 ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 5 ದಿನಗಳ ಕಾಲ ಕೇರಳದಲ್ಲಿ ವ್ಯಾಪಕವಾಗಿ ಗುಡುಗು,ಮಿಂಚು,ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಂದರೆ ಜೂನ್ 8 ರಿಂದ 12 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಆರೆಂಜ್ ಮತ್ತು ಹಳದಿ ಅಲರ್ಟ್ ಘೋಷಿಸಲಾಗಿದೆ.